ಒಳ ಮೀಸಲು ರಾಜಕಾರಣಿಗಳ ಶ್ರಮವಿಲ್ಲ

Kumbaiah
Published on

ಚಿತ್ರದುರ್ಗ: ಒಳ ಮೀಸಲು ಜಾರಿ ಸಂಬಂಧ ಸುಪ್ರೀಂ ಕೋರ್ಟ್‌ನ ಏಳು ಸದಸ್ಯರ ನ್ಯಾಯಪೀಠ ನೀಡಿದ ಐತಿಹಾಸಿಕ ತೀರ್ಪು ಅತ್ಯಂತ ಸ್ವಾಗತಾರ್ಹ ಎಂದು ಹೈಕೋರ್ಟ್ ವಕೀಲ ಎಂ.ಕುಂಬಯ್ಯ ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೂರ್ನಾಲ್ಕು ದಶಕಗಳ ಹೋರಾಟದ ಹಿಂದೆ ದಲಿತ ಸೇರಿ ಅನೇಕ ಸಂಘಟನೆಗಳ, ಪತ್ರಕರ್ತರ ಪಾತ್ರ ದೊಡ್ಡದಿದೆಯೇ ಹೊರತು ರಾಜಕಾರಣಿಗಳದ್ದಲ್ಲ ಎಂದರು.

ಸರ್ಕಾರಿ, ಅರೆ ಸರ್ಕಾರಿ, ಗುತ್ತಿಗೆ ಆಧಾರದ ಉದ್ಯೋಗಗಳಲ್ಲಿ ಒಳಮೀಸಲಾತಿ ಜಾರಿಗೊಳಿಸಿ ಅನ್ಯಾಯಕ್ಕೆ ಒಳಗಾದ ಹಿಂದುಳಿದ, ಶೋಷಿತ ವರ್ಗಕ್ಕೆ ನ್ಯಾಯ ಒದಗಿಸಬೇಕು. ಈ ನಿಟ್ಟಿನಲ್ಲಿ ರಾಜ್ಯದ ಸಿಎಂ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯಾದ್ಯಂತ ಒಳಮೀಸಲಾತಿಗಾಗಿ ಹೋರಾಡಿದ ಸಂಘಟನೆಗಳ ಮುಖಂಡರು, ಸದಸ್ಯರು ಸೇರಿ 5ಸಾವಿರ ಮಂದಿಯ ಮೇಲೆ ಎಫ್‌ಐಆರ್ ದಾಖಲಾಗಿದ್ದು, ಕೂಡಲೇ ಕಾನೂನಾತ್ಮಕವಾಗಿ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.

ಈಗಾಗಲೇ ಸರ್ಕಾರಿ ಉದ್ಯೋಗಗಳ ನೇಮಕಾತಿ ಆದೇಶ ರದ್ದುಗೊಳಿಸಿ, ಒಳಮೀಸಲಾತಿಯಡಿ ನೀಡಬೇಕು. ಎಸ್ಸಿ-ಎಸ್ಟಿ ಆಯೋಗದ ಅಧ್ಯಕ್ಷರ ಸ್ಥಾನಕ್ಕೆ ಮಾದಿಗ ಸಮುದಾಯದ ನುರಿತ ವಕೀಲರನ್ನು ನೇಮಿಸಬೇಕು ಎಂದು ಒತ್ತಾಯಿಸಿದರು.

ಹೈಕೋರ್ಟ್, ಅದರ ಅಧೀನ ನ್ಯಾಯಾಲಯ ಹಾಗೂ ನ್ಯಾಯಾಂಗ ಸಂಸ್ಥೆಗಳಲ್ಲಿ ಒಳಮೀಸಲಾತಿ ಸಿಕ್ಕಿಲ್ಲ. ಇದರಿಂದ ಶೋಷಿತ ವರ್ಗಗಳಿಗೆ ಪ್ರಾತಿನಿಧ್ಯ ದೊರಕದೆ, ಅನ್ಯಾಯವಾಗಿದೆ. ಅಲ್ಲದೆ, ಎಲ್ಲ ನಿಗಮ, ಮಂಡಳಿಗಳು ಕೂಡ ಇದಕ್ಕೆ ಹೊರತಾಗಿಲ್ಲ. ಆದ್ದರಿಂದ ಒಳಮೀಸಲಾತಿ ತ್ವರಿತ ಜಾರಿಗೆ ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಮನವಿ ಮಾಡಿದರು.

ಹೈಕೋರ್ಟ್ ವಕೀಲರಾದ ತುಳಸಿ ರಾಮ್, ಮುನಿಯಪ್ಪ, ಚಿತ್ರದುರ್ಗದ ವಕೀಲರಾದ ಜಿ.ಕೆ.ಮಲ್ಲಿಕಾರ್ಜುನಸ್ವಾಮಿ, ವಿಜಯ್‌ಕುಮಾರ್, ಬೀಸ್ನಹಳ್ಳಿ ಜಯಣ್ಣ, ಎಂ.ಜಿ.ಲೋಕೇಶ್, ಎಚ್.ರಾಮಸ್ವಾಮಿ, ಡಿ.ವೆಂಕಟೇಶ್, ಎಸ್.ದಯಾನಂದ್, ಎಸ್.ಕೆ.ಸುರೇಶ್, ವಿಶ್ವಾನಂದ, ರಮೇಶ್, ಸುರೇಶ್, ಕಾಂತರಾಜ್, ಮಲ್ಲಿಕಾರ್ಜುನ್, ನಾಗರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net