ಒಳ ಮೀಸಲು ಜಾರಿಗೆ ಸಂಭ್ರಮಾಚರಣೆ

CTD OLA MISALU
Published on

ಚಿತ್ರದುರ್ಗ: ಒಳ ಮೀಸಲಾತಿ ಜಾರಿಗೆ ರಾಜ್ಯ ಸರ್ಕಾರ ತೆಗೆದುಕೊಂಡಿರುವ ನಿರ್ಧಾರವನ್ನು ನಗರದಲ್ಲಿ ಬುಧವಾರ ಪಟಾಕಿ ಸಿಡಿಸಿ ಸ್ವಾಗತಿಸಲಾಯಿತು.

ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ನೆರೆದಿದ್ದ ವಿವಿಧ ಸಂಘಟನೆಗಳ ಸದಸ್ಯರು, ಮಾದಿಗ ಸಮುದಾಯಕ್ಕೆ ಶೇ.7ಮೀಸಲು ನಿರೀಕ್ಷೆ ಇತ್ತು. ಆದರೆ ಶೇ.6ಕ್ಕೆ ನಿಗದಿಯಾಗಿದೆ. ಮೀಸಲು ಹಂಚಿಕೆಯಲ್ಲಿ ಮಾದಿಗ ಸಮುದಾಯ ಪ್ರವರ್ಗ ಬಿ. ಗುಂಪಿನಲ್ಲಿದೆ ಎಂಬ ಗೊಂದಲವಿತ್ತು. ಆದರೆ, ಸದನದಲ್ಲಿ ಸಿಎಂ ಸಿದ್ದರಾಮಯ್ಯ ಎಡಗೈ ಸಂಬಂಧಿತ ಜಾತಿಗಳನ್ನು ಪ್ರವರ್ಗ ಎ ನಲ್ಲಿ ಗುರುತಿಸಲಾಗಿದೆ ಎಂದು ಸ್ಪಷ್ಟಪಡಿಸಿರುವುದರಿಂದ ಮಾದಿಗ ಸಮುದಾಯದ ನಿಟ್ಟುಸಿರು ಬಿಡುವಂತಾಗಿದೆ ಎಂದರು.

ಒಳ ಮೀಸಲಿಗಾಗಿ 35 ವರ್ಷಗಳ ಕಾಲ ನಿರಂತರ ಹೋರಾಟ ನಡೆದಿದೆ. ಮಾಜಿ ಸಚಿವ ಎಚ್. ಆಂಜನೇಯ, ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮಿಜಿ, ಶ್ರೀಹರಳಯ್ಯ ಸ್ವಾಮೀಜಿ, ಶ್ರೀ ಮಾಕರ್ಂಡಯ್ಯ ಸ್ವಾಮೀಜಿ ಸೇರಿದಂತೆ, ಸಂಸದರು, ಸಚಿವರು, ಮಾಜಿ ಸಂಸದರು, ಶಾಸಕರು, ನಿಗಮ, ಮಂಡಳಿ ಅಧ್ಯಕ್ಷರು ಸಹಿತ ಜನಪ್ರತಿನಿಧಿಗಳು, ಸಂಘಟನೆಗಳ ಪ್ರಮುಖರು ಇದಕ್ಕಾಗಿ ಶ್ರಮಿಸಿದ್ದಾರೆ ಎಂದರು.

ಅಲೆಮಾರಿ ಸಮುದಾಯಗಳಿಗೆ ಶೇ.1ಮೀಸಲು ನಿಗದಿಪಡಿಸುವ ಮೂಲಕ ಸಾಮಾಜಿಕ ನ್ಯಾಯ ಒದಗಿಸುವಂತೆ ಇದೇ ಸಂದರ್ಭದಲ್ಲಿ ಸಿಎಂ ಅವರನ್ನು ಒತ್ತಾಯಿಸಲಾಯಿತು.

ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಬಿ.ಪಿ. ತಿಪ್ಪೇಸ್ವಾಮಿ, ವಕೀಲ ಬೆನಕನಹಳ್ಳಿ ಚಂದ್ರಪ್ಪ, ಹುಲ್ಲೂರು ಕುಮಾರಸ್ವಾಮಿ, ತಿರುಂಪುರದ ಪೆನ್ನಪ್ಪ, ಪಾಳ್ಯಕುಮಾರ್, ಬಿ.ಟಿ. ರಾಜಣ್ಣ, ವೈ. ರಾಜಣ್ಣ, ಬಿ.ಎಸ್.ಯೋಗರಾಜ್, ತೀರ್ಥರಾಜ್ ಇತರರು ಇದ್ದರು.

ಒಳಮೀಸಲಾತಿ ಜಾರಿಗೆ ಹರ್ಷ

ಚಳ್ಳಕೆರೆ: ರಾಜ್ಯ ಸರ್ಕಾರ ಒಳಮೀಸಲು ಜಾರಿಗೆ ತೆಗೆದುಕೊಂಡಿರುವ ತೀರ್ಮಾನದಿಂದ ಮಾದಿಗ ಸಮುದಾಯದ 30 ವರ್ಷಗಳ ಹೋರಾಟಕ್ಕೆ ನ್ಯಾಯ ಸಿಕ್ಕಂತಾಗಿದೆ ಎಂದು ತಾಲೂಕಿನ ದಲಿತ ಪರ ಸಂಘಟನೆಗಳ ಮುಖಂಡರು ಹರ್ಷ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಮಾದಿಗ ಸಮುದಾಯದ ಅಂಕಿ-ಸಂಖ್ಯೆಗಳು ಸಮರ್ಪಕವಾಗಿ ಕ್ರೊಢೀಕರಣವಾಗಿಲ್ಲ. ಇದರಿಂದ ಸಮುದಾಯದ ನಿರ್ದಿಷ್ಟ ಜನಸಂಖ್ಯೆಯಲ್ಲಿ ಕುಂಠಿತವಾಗಿದೆ. ಬಹುಸಂಖ್ಯಾತ ಮಾದಿಗ ಸಮುದಾಯಕ್ಕೆ 6ಕ್ಕಿಂತ ಹೆಚ್ಚು ಮೀಸಲಾತಿ ನೀಡಬೇಕಿತ್ತು. ಆದರೂ, ಸರ್ಕಾರದ ತೀರ್ಮಾನ ಸ್ವಾಗತಾರ್ಹ ಎಂದು ದಸಂಸ ಸಂಚಾಲಕ ಟಿ. ವಿಜಯಕುಮಾರ್, ಭೀಮನಕೆರೆ ಶಿವಮೂರ್ತಿ, ಕೆ.ಬಿ. ನಾಗರಾಜ, ಎಸ್.ಎಚ್. ಸೈಯದ್, ಚೌಳೂರು ಪ್ರಕಾಶ್, ಕೆ. ಅನಂತ, ಗೌರೀಪುರ ವೀರಭದ್ರ ತಿಳಿಸಿದ್ದಾರೆ.

-------------------------

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net