

ಚಿತ್ರದುರ್ಗ: ಒಳ ಮೀಸಲು ಜಾರಿಗೊಳಿಸದೆ ರಾಜ್ಯಸರ್ಕಾರ ನಿರ್ಲಕ್ಷಿಸುತ್ತಿದೆ ಎಂದು ರಾಜ್ಯಮಾದಿಗ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಪ್ರೊ.ಸಿ.ಕೆ. ಮ ಹೇಶ್ ಆಪಾದಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾಗಮೋಹನ್‌ದಾಸ್ ವರದಿ ಗಡುವು ಮುಗಿದಿರುವುದರಿಂದ ರಾಜ್ಯ ಸರ್ಕಾರ ಈ ಹೊತ್ತಿಗೆ ಒಳ ಮೀಸಲಾತಿ ಜಾರಿಗೊಳಿಸಬೇಕಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಎಸ್‌ಸಿಎಸ್‌ಪಿ, ಟಿಎಸ್‌ಪಿ ಅನುದಾನ ದುರ್ಬಳಕೆಯಾಗುತ್ತಿದ್ದರೂ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಶಾಸಕರು ಧ್ವನಿ ಎತ್ತದಿರುವುದು ನೋವಿನ ಸಂಗತಿ. ಪಕ್ಷದ ಹಿತಕ್ಕೆ ಅಂಟಿಕೊಂಡಿರುವ ಇವರು ಸಮುದಾಯ ನಿರ್ಲಕ್ಷಿಸುತ್ತಿದ್ದಾರೆ. ಇವರಿಗೆ ಆಸಕ್ತಿ, ಬದ್ಧತೆ, ಕಾಳಜಿಯಿಲ್ಲ.ಬ್ಯಾಕ್‌ಲಾಗ್ ಸಮಿತಿಯಲ್ಲಿ ಸಚಿವರಾದ ಕೆ.ಎಚ್. ಮುನಿಯಪ್ಪ, ಸತೀಶ್‌ಜಾರಕಿಹೊಳಿ, ಎಚ್.ಕೆ.ಪಾಟೀಲ್ ಇದ್ದರೂ ಪ್ರಯೋಜನವಿಲ್ಲದಂತಾಗಿದೆ ಎಂದರು.
ಸಂಘದ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಹಿರೇಹಳ್ಳಿ ಮಲ್ಲಿಕಾರ್ಜುನ್ ಮಾತನಾಡಿ, ಒಳ ಮೀಸಲು ಜಾರಿಯಾಗುವತನಕ ಯಾವುದೇ ಹುದ್ದೆಗಳನ್ನು ಭರ್ತಿ ಮಾಡಬಾರದು. ಆದರೆ, ಮುಖ್ಯಮಂತ್ರಿ ನೇಮಕ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿರುವುದು ಯಾವ ನ್ಯಾಯ? ಒಳ ಮೀಸಲು ಜಾರಿಗೆ ಸರ್ಕಾರ ಮೀನಮೇಷ ಎಣಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ 10 ವರ್ಷಗಳಲ್ಲಿ ಎಲ್ಲ ಸರ್ಕಾರಗಳು ಎಸ್‌ಸಿಎಸ್‌ಪಿ, ಟಿಎಸ್‌ಪಿ ಯೋಜನೆಯಡಿ ಬಳಸಬೇಕಿದ್ದ 70 ಸಾವಿರ ಕೋಟಿ ರೂ.ಗಳನ್ನು ಬೇರೆ, ಬೇರೆ ಉದ್ದೇಶಗಳಿಗೆ ಬಳಸಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಜನರಿಗೆ ದ್ರೋಹ ಎಸಗಲಾಗುತ್ತಿದೆ ಎಂದರು. ರಾಜ್ಯ ಸಾಮಾಜಿಕ ಸಂಘರ್ಷ ಸಮಿತಿ ಕೆ. ಕುಮಾರ್, ಗೌರವಾಧ್ಯಕ್ಷ ಡಿ. ದುರುಗೇಶಪ್ಪ, ಪ್ರಧಾನ ಕಾರ್ಯದರ್ಶಿ ಸಿ.ಎ. ಚಿಕ್ಕಣ್ಣ, ಸುಧಾಕರ್ ಇದ್ದರು.