ಒಳ ಮೀಸಲಾತಿಗಾಗಿ ಅ.12ರಂದು ತಿ.ನರಸೀಪುರದಲ್ಲಿ ಪ್ರತಿಭಟನೆ

08Rajesh1
Published on

ಚಾಮರಾಜನಗರ: ಒಳಮೀಸಲಾತಿ ಹೋರಾಟ ಸಂಬಂಧ ಅ.12ರಂದು ತಿ.ನರಸೀಪುರದ ಎನ್.ರಾಚಯ್ಯನವರ ಸ್ಮಾರಕದ ಬಳಿ ಪ್ರತಿಭಟನಾ ಸಮಾವೇಶ ನಡೆಯಲಿದೆ ಎಂದು ಒಳ ಮೀಸಲಾತಿ ಕ್ರಾಂತಿಕಾರಿ ಹೋರಾಟ ಸಮಿತಿಯ ಬಿ.ಆರ್.ಭಾಸ್ಕರ್‌ಪ್ರಸಾದ್ ತಿಳಿಸಿದ್ದಾರೆ.

ನಗರದ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು. ಒಳ ಮೀಸಲಾತಿಯನ್ನು ರಾಜ್ಯ ಸರ್ಕಾರವು ಸಂಪೂರ್ಣವಾಗಿ ಜಾರಿ ಮಾಡಿಲ್ಲ. ಒಳ ಮೀಸಲಾತಿಯು ಬಡ್ತಿ, ನೇಮಕಾತಿಗೆ ಅನ್ವಯವಾಗುವುದಿಲ್ಲವಂತೆ, ಇದು ಹೇಗೆ ಸಾಧ್ಯ? ಮೀಸಲಾತಿಯು ಎಲ್ಲರಿಗೂ ಒಂದೇ ಆಗಿರುತ್ತದೆ. ಆದ್ದರಿಂದ ರಾಜ್ಯಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತದೆ ಎಂದರು.

ಮಾದಿಗರಿಗೆ ಮೀಸಲಾತಿ ದೊರೆಯಬಾರದು ಎಂಬುದು ಸಮಾಜ ಕಲ್ಯಾಣ ಇಲಾಖೆ ಸಚಿವರ ಷಡ್ಯಂತರವಾಗಿದೆ. ಮಾದಿಗರಿಗೆ ಜಾತಿ ಪ್ರಮಾಣಪತ್ರ ದೊರೆಯುತ್ತಿಲ್ಲ. ಆದರೆ ಬೌದ್ಧ ಧರ್ಮಕ್ಕೆ ಸೇರ್ಪಡೆಯಾದವರಿಗೆ ಬೇಗನೆ ಪ್ರಮಾಣಪತ್ರ ದೊರೆಯುತ್ತಿದೆ. ಇದು ಷಡ್ಯಂತರವಾಗಿದೆ ಎಂದು ಹೇಳಿದರು.

ಬಸವನಪುರ ರಾಜಶೇಖರ್ ಮಾತನಾಡಿ, ಒಳ ಮೀಸಲಾತಿ ಶೇ.6 ಬಂದಿದ್ದರೂ ಇನ್ನೂ ಸಹ ಶೈಕ್ಷಣಿಕ, ಆರ್ಥಿಕ, ಸಾಮಾಜಿಕವಾಗಿ ಶಕ್ತಿ ಬಂದಿಲ್ಲ. ಯಥವತ್ತಾಗಿ ಒಳ ಮೀಸಲಾತಿ ಸಂಪೂರ್ಣವಾಗಿ ಜಾರಿ ಜಾರಿಯಾಗಿಲ್ಲ ಎಂಬುದು ನನ್ನ ಭಾವನೆಯಾಗಿದೆ. ಒಳ ಮೀಸಲಾತಿಗಾಗಿ ಸತತವಾಗಿ ಹೋರಾಟ ಮಾಡಿದ್ದೇವೆ. ಇನ್ನು ಸಂಪೂರ್ಣವಾಗಿ ಅದು ದೊರೆತಿಲ್ಲ. ಈ ಬಗ್ಗೆ ನಮ್ಮ ನೋವು ನಮ್ಮನ್ನಾಳುವ ಸರ್ಕಾರಗಳಿಗೆ ಅರ್ಥವಾಗುತ್ತಿಲ್ಲ. ಅಲ್ಲದೆ ಸಮಾಜ ಕಲ್ಯಾಣ ಇಲಾಖೆಯು ತಮ್ಮ ಮೂಲ ಜಾತಿಯನ್ನು ಗುರುತಿಸಲು ಕಟ್ಟುನಿಟ್ಟಿನ ಆದೇಶ ಹೊರಡಿಸದೆ ಗಳಿಂದ ಮಾದಿಗರನ್ನು ತುಂಬಾ ತೊಂದರೆ ಆಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ನ್ಯಾಯಪರ ವಕೀಲರ ರಾಜ್ಯಾಧ್ಯಕ್ಷ ವಕೀಲ ಅರುಣ್‌ಕುಮಾರ್, ಪ್ರಧಾನ ಕಾರ್ಯದರ್ಶಿ ವಕೀಲ ರಾಜೇಂದ್ರ, ಬಸವನಪುರ ರಾಜಶೇಖರ್, ಮೂಡಳ್ಳಿ ಮೂರ್ತಿ, ಅರಕಲವಾಡಿ ಜವರಯ್ಯ, ಎಚ್.ಎಚ್.ನಾಗರಾಜು, ವೆಲ್ಡಿಂಗ್ ಲಿಂಗರಾಜು, ಮಾದಿಗ ಮಹಾಸಭಾ ಅಧ್ಯಕ್ಷ ಎಂ. ಶಿವಕುಮಾರ್, ದಸಂಸ ಅಧ್ಯಕ್ಷ ಬೆಳ್ಳಿಯಪ್ಪ, ರಾಮಸಮುದ್ರ ಸುಂದ್ರ, ವಕೀಲರಾದ ಹಂಗಳ ಸಿದ್ದೇಶ್, ಅಂಕಳ್ಳಿ ಸಿದ್ದಯ್ಯ, ಮಲ್ಲು, ಲಿಂಗರಾಜು, ಮುಖಂಡರಾದ ಡ್ಯಾನ್ಸ್ ಬಸವರಾಜು, ಚನ್ನಬಸವಯ್ಯ, ಎಲ್ಐಸಿ ಸಿದ್ದರಾಜು, ಶಾಕ್ಯ ಸುಂದರ್, ಜಯಶೀಲ, ಮಹದೇವಯ್ಯ, ಸುತ್ತೂರು ಕೃಷ್ಣ, ಸಿದ್ದೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net