

ಮೈಸೂರು: ಅಸಮರ್ಥನೀಯ, ಅತಾರ್ಕಿಕ ದತ್ತಾಂಶಗಳನ್ನು ಆಧರಿಸಿದ ಪರಿಶಿಷ್ಟ ಜಾತಿಯ ಒಳ ಮೀಸಲಾತಿ ವರ್ಗೀಕರಣವನ್ನು ತಿರಸ್ಕರಿಸಬೇಕು. ಜತೆಗೆ, ಕಾಂತರಾಜು ಆಯೋಗದ ವರದಿಯನ್ನು ಬಹಿರಂಗಪಡಿಸಬೇಕು ಎಂದು ಜಿಲ್ಲಾ ಕುಳುವ ಮಹಾಸಂಘ ಆಗ್ರಹಿಸಿದೆ.
ರಾಜ್ಯ ಸರ್ಕಾರವು ಅವೈಜ್ಞಾನಿಕ, ಅತಾರ್ಕಿಕ ಹಾಗೂ ಅಸಮರ್ಥನೀಯ ದತ್ತಾಂಶ ಆಧರಿಸಿ ಒಳಮೀಸಲಾತಿ ವರ್ಗೀಕರಣಕ್ಕೆ ಮುಂದಾಗಿರುವುದು ಸಾಮಾಜಿಕ ನ್ಯಾಯದ ಕಗ್ಗೊಲೆಯಾಗಿದೆ ಎಂದು ಸಂಘದ ಅಧ್ಯಕ್ಷ ಡಿ.ಎನ್.ಮುತ್ತುರಾಜು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.
ಎಸ್‌ಟಿ ಪಟ್ಟಿಯಲ್ಲಿ 101 ಜಾತಿಗಳ ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯ ಪ್ರಾತಿನಿಧ್ಯ ಕುರಿತಾದ ಸಮಗ್ರ, ವಸ್ತುನಿಷ್ಠ ಅಂಕಿ-ಅಂಶಗಳ ಕೊರತೆ ಇದ್ದು, ಈ ಬಗ್ಗೆ ವೈಜ್ಞಾನಿಕ ಅಧ್ಯಯನ ಕೈಗೊಳ್ಳದೆ, ಕೆಲ ಪಟ್ಟಭದ್ರ ಹಿತಾಸಕ್ತಿಗಳ ಒತ್ತಡಕ್ಕೆ ಮಣಿದು ಒಳಮೀಸಲಾತಿ ಕುರಿತಾಗಿ ಏಕಪಕ್ಷೀಯ ನಿರ್ಧಾರ ಕೈಗೊಳ್ಳಲು ಹೊರಟಿರುವ ರಾಜ್ಯ ಸರ್ಕಾರದ ನಡೆ ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.
101 ಪರಿಶಿಷ್ಟ ಜಾತಿಗಳ ನಡುವಿನ ಮೀಸಲಾತಿ ಹಂಚಿಕೆಯ ಕುರಿತಾದ ಸಮಗ್ರ ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಪ್ರಾತಿನಿಧ್ಯವನ್ನು ಖಾತ್ರಿಪಡಿಸಲು ಸಮರ್ಥನೀಯ ಹಾಗೂ ವೈಜ್ಞಾನಿಕ ದತ್ತಾಂಶ ಕ್ರೋಡೀಕರಿಸಿ, ವಿಶ್ಲೇಷಿಸಿ ತಜ್ಞರ ವರದಿ ಪಡೆದುಕೊಳ್ಳದ ಹೊರತು, ಸರ್ಕಾರವು ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಆಗ್ರಹಿಸಿದರು.
ಪ್ರಧಾನ ಕಾರ್ಯದರ್ಶಿ ಮೋಹನ್ ಕಾಯಕ ಮಾತನಾಡಿ, 2011ರ ಜನಗಣತಿ ಆಧರಿಸಿ ಒಳಮೀಸಲಾತಿ ನಿಗದಿ ಮಾಡಿರುವುದು ಸರಿಯಲ್ಲ. ಇದರಿಂದ ಅವಕಾಶ ವಂಚಿತ ಕೊರಮ, ಕೊರಚ ಸಮುದಾಯಗಳಿಗೆ ಅನ್ಯಾಯವಾಗಲಿದೆ ಎಂದರು.
ಕಾರ್ಯಾಧ್ಯಕ್ಷ ಪಿ.ನಾಗರಾಜು ಮಾತನಾಡಿ, ಎಸ್‌ಸಿ ಪಟ್ಟಿಯಲ್ಲಿರುವ ಅಲೆಮಾರಿ ಕೊರಮ, ಕೊರಚ ಸಮುದಾಯಗಳು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಕ್ಷೇತ್ರದಲ್ಲಿ ಅವಕಾಶವಿಲ್ಲದೆ ತಬ್ಬಲಿಯಾಗಿವೆ. ಹೀಗಾಗಿ ಒಳಮೀಸಲಾತಿ ವರ್ಗೀಕರಣ ಪಾರದರ್ಶಕ ವಾಗಿರಬೇಕು. ಪ್ರಸ್ತುತ ಜನಸಂಖ್ಯೆಗೆ ಆಧಾರವಾಗಿ ಒಳ ಮೀಸಲಾತಿ ಹಂಚಿಕೆಯಾಗಬೇಕು ಎಂದೂ ಆಗ್ರಹಿಸಿದರು.
ಸಂಘದ ಜಂಟಿ ಕಾರ್ಯದರ್ಶಿ ಎನ್.ರವಿಕುಮಾರ್, ಸಂಘಟನಾ ಕಾರ್ಯದರ್ಶಿ ಕೃಷ್ಣಪ್ಪ, ಎಚ್.ಡಿ.ಕೋಟೆ ತಾಲೂಕಾಧ್ಯಕ್ಷ ಪುರುಷೋತ್ತಮ್ ಇದ್ದರು.