ಒಳ ಮೀಸಲಾತಿ ಯಾರಿಗೂ ಬೇಕಿಲ್ಲ : ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಬೇಸರ

39
ಮೈಸೂರಿನಲ್ಲಿ ಭಾನುವಾರ ಆಯೋಜಿಸಿದ್ದ ಆದಿದ್ರಾವಿಡ ಸಮಾಜದ ಸಮಾವೇಶವನ್ನು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಉದ್ಘಾಟಿಸಿದರು. ರಾಜ್ಯಸಭೆ ಮಾಜಿ ಸದಸ್ಯ ಕೆ.ಬಿ.ಕೃಷ್ಣಮೂರ್ತಿ, ಎಸ್.ಎ.ರಾಮದಾಸ್, ಎಂ.ಶಿವಣ್ಣ, ಪುರುಷೋತ್ತಮ್, ಎಚ್.ವಿ.ರಾಜೀವ್, ಬಿ.ಎಸ್.ಸುಬ್ರಮಣ್ಯ ಇತರರು ಇದ್ದರು.
Published on

ಮೈಸೂರು: ಜಾತಿ ವರ್ಗೀಕರಣ ಮಾಡಿ ಒಳ ಮೀಸಲಾತಿ ಕಲ್ಪಿಸುವುದು ಯಾರಿಗೂ ಮತ್ತು ಯಾವ ರಾಜಕಾರಣಿಗಳಿಗೂ ಬೇಕಿಲ್ಲ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

ಅಖಿಲ ಕರ್ನಾಟಕ ಡಾ.ಅಂಬೇಡ್ಕರ್ ಆದಿದ್ರಾವಿಡ ಪೌರಕಾರ್ಮಿಕರ ಜನಾಂಗದ ಅಭಿವೃದ್ಧಿ ಟ್ರಸ್ಟ್ ಮತ್ತು ಡಾ.ಅಂಬೇಡ್ಕರ್ ಆದಿ ದ್ರಾವಿಡ ಪೌರಕಾರ್ಮಿಕರ ಯುವಕರ ಅಭಿವೃದ್ಧಿ ಮಹಾಸಂಘದ ಸಹಯೋಗದಲ್ಲಿ ನಗರದ ಮುಕ್ತಗಂಗೋತ್ರಿಯ ಘಟಿಕೋತ್ಸವ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಆದಿದ್ರಾವಿಡ ಸಮಾಜದ ಸಮಾವೇಶದಲ್ಲಿ ಮಾತನಾಡಿದರು.

ಒಳ ಮೀಸಲಾತಿ ಕಲ್ಪಿಸುವುದು ಅಷ್ಟು ಸುಲಭವಲ್ಲ. ಈ ಕುರಿತು ಅಧ್ಯಯನ ಮಾಡಿ ಅನೇಕ ವರದಿಗಳನ್ನು ಎಲ್ಲ ರಾಜ್ಯದಲ್ಲೂ ಸಲ್ಲಿಸಲಾಗಿದೆ. ಈ ಎಲ್ಲ ವರದಿಯಲ್ಲೂ ಒಂದೇ ರೀತಿಯ ಸಮಸ್ಯೆ ಇದೆ. ಇದು ಕೇಂದ್ರ, ರಾಜ್ಯ ಸರ್ಕಾರದಿಂದ ಆಗಲ್ಲ. ಹೀಗಾಗಿ, ಸದಾಶಿವ ಆಯೋಗದ ವರದಿಯನ್ನು ಸದನದಲ್ಲಿ ಮಂಡಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದರೂ ಅದು ಜಾರಿಗೆ ಬರುವುದು ಕಷ್ಟವಿದೆ. ಈ ಕುರಿತು ಅನ್ಯಾಯವಾಗುತ್ತಿದೆ ಎಂದರು.

ಜಾತಿ ವರ್ಗೀಕರಣ ಮಾಡಿ ಒಳಮೀಸಲಾತಿ ಕಲ್ಪಿಸುವ ಕುರಿತು ಕಾನೂನು ಹೋರಾಟ ನಡೆಯುತ್ತಿದೆ. ಈ ಕುರಿತು ಹಿರಿಯ ವಕೀಲರೊಬ್ಬರನ್ನು ನೇಮಿಸಲಾಗಿದೆ. ಆ.10ರಂದು ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣ ವಿಚಾರಣೆಗೆ ಬರಲಿದೆ. ಕೇಂದ್ರ ಸರ್ಕಾರಕ್ಕೆ ಕೆಲ ಸೂಚನೆ ನೀಡುವ ಸಾಧ್ಯತೆ ಇದೆ ಎಂದು ತಿಳಿಸಿದರು.
ಒಳ ಮೀಸಲಾತಿ ಕುರಿತು ಮಾತನಾಡಲು ರಾಜಕಾರಣಿಗಳಿಗೆ ಭಯ. ಯಾರು ವೋಟ್ ಕೊಡುವುದಿಲ್ಲವೋ ಅಥವಾ ಪಕ್ಷದಿಂದ ತೆಗೆದು ಹಾಕಿಬಿಡುತ್ತಾರೋ ಎಂಬ ಹೆದರಿಕೆ. ಆದರೆ ನನಗೆ ಆ ಭಯವಿಲ್ಲ. ಮೊದಲು ಸಮಾಜ, ಬಳಿಕ ನಾನೊಬ್ಬ ರಾಜಕಾರಣಿ ಎಂದರು.

ರಾಜ್ಯಸಭಾ ಮಾಜಿ ಸದಸ್ಯ, ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಉಪಾಧ್ಯಕ್ಷ ಕೆ.ಬಿ.ಕೃಷ್ಣಮೂರ್ತಿ ಮಾತನಾಡಿ, ಪೌರಕಾರ್ಮಿಕರ ಕುರಿತು ಸಮಾಜದ ಮನಸ್ಥಿತಿ ಇನ್ನೂ ಬದಲಾಗಿಲ್ಲ. ಎಷ್ಟೇ ವಿದ್ಯಾವಂತರಾದರೂ ಪೌರಕಾರ್ಮಿಕರ ಕೆಲಸವನ್ನೇ ಮಾಡಬೇಕೆಂದು ಜನರು ಬಯಸುತ್ತಾರೆ. ಮೀಸಲಾತಿ ಜಾರಿಯಾಗಿ ಇಷ್ಟ ವರ್ಷವಾದರೂ ಪೌರಕಾರ್ಮಿಕರಿಗೆ ಆ ಸೌಲಭ್ಯ ದೊರೆತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸಂಘದ ಅಧ್ಯಕ್ಷ ಬಿ.ಎಸ್.ಸುಬ್ರಮಣ್ಯ ಮಾತನಾಡಿ, ದೇಶ ಕಾಯೋ ಸೈನಿಕರಿಗೆ ನಿವೇಶನ ಕೊಡುತ್ತಾರೆ. ಅದೇ ಸಮಾಜದ ಆರೋಗ್ಯ ಕಾಯೋ ಪೌರಕಾರ್ಮಿಕರಿಗೆ ನಿವೇಶನ ಕೊಡಲ್ಲ. ಸ್ವಚ್ಛತಾ ಕೆಲಸದಲ್ಲಿ ಶೇ.96ರಷ್ಟು ಇರುವ ಆದಿದ್ರಾವಿಡರಿಗೆ ಇನ್ನೂ ಸೌಲಭ್ಯ ಸಿಕ್ಕಿಲ್ಲ. ಎಲ್ಲರೂ ಅನುಕಂಪ ತೋರಿಸುತ್ತಾರೆ. ಆದರೆ ಸಮಾನತೆ ನೀಡಿ ಮುಂದಕ್ಕೆ ಕರೆದುಕೊಂಡು ಹೋಗುತ್ತಿಲ್ಲ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಬಹಳಷ್ಟು ಹಿಂದೆ ಉಳಿದಿದ್ದು, ಶಿಕ್ಷಣ ನೀಡಿ ಮುಖ್ಯವಾಹಿನಿಗೆ ತರುವ ಕೆಲಸ ಆಗಬೇಕಿದೆ. ಪ್ರತಿ ಜಿಲ್ಲೆಯಲ್ಲಿ ಪೌರಕಾರ್ಮಿಕರ ವಸತಿ ಶಾಲೆ ನಿರ್ಮಿಸಬೇಕು ಎಂದರು.

ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ.ಶಿವಣ್ಣ, ಮಾಜಿ ಮೇಯರ್ ಪುರುಷೋತ್ತಮ್, ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್, ಪಾಲಿಕೆ ಸದಸ್ಯೆ ಶಾಂತಮ್ಮ ವಡಿವೇಲು, ಹುಣಸೂರು ನಗರಸಭೆ ಸದಸ್ಯೆ ರಾಣಿ ಪೆರುಮಾಳ್, ನಂಜನಗೂಡು ನಗರಸಭೆ ಸದಸ್ಯ ಪಿ.ದೇವರು, ಕೆ.ಆರ್.ನಗರ ಸದಸ್ಯ ಶಂಕರ್ ಇತರರು ಇದ್ದರು.

ನಮ್ಮವರೇ ನಮ್ಮನ್ನು ಒಪ್ಪಿಕೊಳ್ಳುವುದಿಲ್ಲ!
ಕೇಂದ್ರ ಸಚಿವನಾದರೂ ಈಗಲೂ ನನ್ನನ್ನು ಜಾತಿಯಿಂದ ಗುರುತಿಸುತ್ತಾರೆ. ಯಾವ ಕುರ್ಚಿ, ಯಾವ ಬಟ್ಟೆ ಹಾಕಿಕೊಂಡರೂ, 7 ಸ್ಟಾರ್ ಹೋಟೆಲ್‌ನಲ್ಲಿ ಕುಳಿತಿದ್ದರೂ ‘ಅಲ್ಲಿ ನೋಡು, ಮಾದಿಗ ಜಾತಿಯವನು ಕುಳಿತಿದ್ದಾನೆ’ ಎನ್ನುತ್ತಾರೆ. ಇದನ್ನೆಲ್ಲ ಸಾಕಷ್ಟು ನೋಡಿದ್ದೇನೆ. ಅಷ್ಟೇ ಅಲ್ಲ, ನಮ್ಮ ಮಾದಿಗ ಜನರೇ ನನ್ನನ್ನು ನಮ್ಮ ನಾಯಕ ಎಂದು ಹೇಳಲ್ಲ. ಮನೆಗೆ ಕರೆದು ಊಟವನ್ನೂ ಹಾಕಲ್ಲ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ನೋವಿನಿಂದ ನುಡಿದರು.

ಮಾದಿಗ ಜಾತಿಯಲ್ಲಿ ಬದ್ಧತೆ ಕೊರತೆ ಇದೆ. ಉಪಪಂಗಡಗಳ ನಡುವೆ ಮುಕ್ತ ಚರ್ಚೆ ಇಲ್ಲ. ಪ್ರೇರಣೆ ಮತ್ತು ಅರಿವಿನ ಕೊರತೆಯಿಂದ ಸ್ವಾತಂತ್ರೃದ ಅಮೃತ ಮಹೋತ್ಸವ ಸಂದರ್ಭದಲ್ಲೂ ನಮ್ಮ ಸಮಾಜದ ಪರಿಸ್ಥಿತಿ ಬದಲಾಗಲಿಲ್ಲ. ಕೇಂದ್ರ, ರಾಜ್ಯ ಸರ್ಕಾರದಿಂದ ಅನೇಕ ಸೌಲಭ್ಯಗಳಿವೆ. ಅದರ ಕುರಿತು ನಮ್ಮ ಸಮಾಜ, ಶಾಸಕರು, ಸಂಸದರು, ಸಂಘಟನೆಯವರಿಗೂ ಗೊತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ದೇಶದಲ್ಲಿ ಮಾದಿಗ ಜಾತಿಗೆ ಸಂಬಂಧಿಸಿದ 70 ಉಪ ಜಾತಿಗಳಿವೆ. ನಾವೆಲ್ಲ ಒಂದು ಎಂದು ಯಾರೂ ಹೇಳಲ್ಲ. ಒಬ್ಬರು ಇನ್ನೊಬ್ಬರ ಮನೆಗೂ ಸೇರಿಸಿಕೊಳ್ಳಲ್ಲ. ಮದುವೆಗೆ ಹೆಣ್ಣು ಕೊಡಲ್ಲ, ನೀರು ಕೊಡಲ್ಲ. ಇಷ್ಟು ವರ್ಷವಾದರೂ ನಾವಿನ್ನೂ ಒಂದಾಗಲಿಲ್ಲ. ಒಂದು ಪ್ರದೇಶದ ಮಾದಿಗರನ್ನು ಇನ್ನೊಂದು ಪ್ರದೇಶದ ನಮ್ಮವರೇ ಒಪ್ಪಲ್ಲ. ಇದರಿಂದಾಗಿ ಮಾದಿಗರಿಗೆ ನ್ಯಾಯ ಸಿಕ್ಕಿಲ್ಲ. ದೇಶದಲ್ಲಿ ವಿವಿಧ ಹೆಸರಿನಲ್ಲಿ ಕರೆಯುವ ಮಾದಿಗ ಸಮಾಜದವರು ಈಗಲಾದರೂ ಒಂದಾಗಬೇಕು ಎಂದು ಕರೆ ಕೊಟ್ಟರು.
ನಾನು ಒಬ್ಬ ಸರ್ವಾಧಿಕಾರಿ. ಜನಪರ ಕೆಲಸ ಮಾಡದ ಅಧಿಕಾರಿಗಳು ಮತ್ತು ರಾಜಕಾರಣಿಗಳಿಗೆ ನಮಸ್ಕಾರ ಮಾಡಲ್ಲ. ವರ್ಗಾವಣೆ, ಕಮಿಷನ್ ನನಗೆ ಗೊತ್ತಿಲ್ಲ. ಈ ರೀತಿ ಮನೋಭಾವ ನೋಡಿಯೇ ನಮ್ಮ ಪಕ್ಷ ನನ್ನನ್ನು ಸಚಿವನಾಗಿ ಮಾಡಿದೆ ಎಂದರು.

ದಲಿತರ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿದೆ. ಸ್ವಾಭಿಮಾನದ ಬದುಕು, ಸ್ವಯಂ ಉದ್ಯೋಗ ಸೇರಿದಂತೆ ನೂತನ ಕಾರ್ಯಕ್ರಮಗಳು ಶೀಘ್ರದಲ್ಲೇ ಜಾರಿಗೆ ಬರಲಿವೆ ಎಂದು ತಿಳಿಸಿದರು.
ಪೌರಕಾರ್ಮಿಕರ ಮಕ್ಕಳ ವಸತಿ ಶಾಲೆ ಸ್ಥಾಪನೆಗಾಗಿ ಪ್ರತಿ ಜಿಲ್ಲೆಯಲ್ಲಿ ಮೂರು ಎಕರೆ ಜಮೀನು ಕೊಡಿಸುವ ಕುರಿತು ಸರ್ಕಾರದಿಂದ ಪ್ರಯತ್ನಿಸಲಾಗುವುದು. ಇದು ಆಗದಿದ್ದರೆ ನಾವೇ ಖರೀದಿ ಮಾಡೋಣ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net