ಒಳ ಮೀಸಲಾತಿ ಜಾರಿಗೆ ಒತ್ತಾಯಿಸಿ ಮನವಿ

IMG-20250129-WA0027
Published on

ಚಾಮರಾಜನಗರ: ಸುಪ್ರೀಂ ಕೋರ್ಟ್ ಆದೇಶದಂತೆ ಒಳಮೀಸಲಾತಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಮಾದಿಗ ಸಮುದಾಯಗಳ ಸ್ವಾಭಿಮಾನದ ಒಕ್ಕೂಟ ಹಾಗೂ ಆಲ್ ಇಂಡಿಯಾ ಬಹುಜನ ಸಮಾಜ ಪಕ್ಷದ ಜಿಲ್ಲಾ ಸಮಿತಿ ವತಿಯಿಂದ ನಗರದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರ ಮುಖಾಂತರ ಮುಖ್ಯಮಂತ್ರಿ ಗಳಿಗೆ ಮನವಿ ಸಲ್ಲಿಸಲಾಯಿತು.

ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಸೂಕ್ತವಾದ ದತ್ತಾಂಶಗಳನ್ನು ಪರಿಗಣಿಸಿ ವಿಳಂಬ ನೀತಿ ಅನುಸರಿಸದೆ ರಾಜ್ಯ ಸರ್ಕಾರವು ಒಳಮೀಸಲಾತಿಯನ್ನು ಜಾರಿಗೊಳಿಸಬೇಕು. ನ್ಯಾ. ನಾಗಮೋಹನ್ ದಾಸ್‌ರವರ ಸಮಿತಿಗೆ ಈ ಹಿಂದೆ 7 ವರ್ಷಗಳ ಕಾಲ ಅಧ್ಯಯನ ನಡೆಸಿದ ನ್ಯಾಯಮೂರ್ತಿಗಳಾದ ಎ.ಜೆ.ಸದಾಶಿವರವರ ಆಯೋಗದ ದತ್ತಾಂಶಗಳಿರುವ ವರದಿಯ ಶಿಫಾರಸ್ಸುಗಳನ್ನು ಬಳಸಿಕೊಂಡು ವರದಿ ತಯಾರಿಸಲು ಸರ್ಕಾರ ಆದೇಶ ನೀಡಬೇಕು.

ನ್ಯಾ. ಸದಾಶಿವ ಆಯೋಗದ ವರದಿಯ ಒಳಮೀಸಲಾತಿ ವರ್ಗಿಕರಣದ ಶಿಫಾರಸ್ಸನ್ನು ಪರಿಗಣಿಸಿ ಹೆಚ್ಚಳವಾಗಿರುವ ಮೀಸೆಯ ಒಳಮೀಸಲಾತಿ ವರಿವಾತದಲ್ಲಿ ಹೆಚ್ಚುವರಿ ಶೇ. 2 ಮೀಸಲಾತಿಯನ್ನು ಜಾತಿ ಜನಸಂಖ್ಯೆಗೆ ಅನುಗುಣವಾಗಿ ಎ.ಬಿ.ಸಿ.ಡಿ ವರ್ಗಿಕರಣದ ಗುಂಪುಗಳಿಗೆ ಸಮಾನವಾಗಿ ಹಂಚಬೇಕು. ಅದರಲ್ಲಿ ಮಾದಿಗೆ ಮತ್ತು ಸಂಬಂಧಿತ ಜಾತಿಗಳಿಗೆ ಶೇ. 7% ಮೀಸಲಾತಿಯನ್ನು ನಿಗಧಿಪಡಿಸಬೇಕು ಎಂದು ಆಗ್ರಹಿಸಿದರು.

ಸಚಿವ ಸಂಪುಟವು ನಿರ್ಣಯಿಸಿದಂತೆ ಒಳಮೀಸಲಾತಿ ಜಾರಿಯಾಗುವವರೆಗೂ ಸರ್ಕಾರಿ ಉದ್ಯೋಗಗಳಲ್ಲಿ ಸುಮಾರು 37 ಸಾವಿರ ಹುದ್ದೆಗಳ ನೇಮಕಾತಿಗಳನ್ನು ತಡೆಹಿಡಿಯಬೇಕು.ನಿಜವಾದ 49 ಅಲೆಮಾರಿಗಳನ್ನು ಪ್ರತ್ಯೇಕವಾಗಿ ಗುರ್ತಿಸಿ ಶೇ. 1 ಕ್ಕಿಂತ ಹೆಚ್ಚು ಒಳಮೀಸಲಾತಿಯನ್ನು ನೀಡಿ ಪ್ರತ್ಯೇಕ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಬೇಕು.

ಸಮಾಜ ಕಲ್ಯಾಣ ಇಲಾಖೆಯ ಬಜೆಟ್‌ನಲ್ಲಿ ಮತ್ತು ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುಧಾನದಲ್ಲಿ ಮಾದಿಗ, ಸಮಗಾರ, ಡೋಹರ. ಮಚಗಾರ ಜಾತಿಗಳ ಜನಸಂಖ್ಯೆಯ ಅಧಾರದ ಮೇಲೆ ಪ್ರತ್ಯೇಕವಾಗಿ ಅನುದಾನ ಮೀಸಲಿಟ್ಟು ಅದೇ ವರ್ಷ ವೆಚ್ಚ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಗಳಿಗೆ ಸಲ್ಲಿಸಿರುವ ಮನವಿಯಲ್ಲಿ ಪಕ್ಷ ಜಿಲ್ಲಾಧ್ಯಕ್ಷ ರಾಜೇಂದ್ರ ಸಿದ್ದಾರ್ಥ ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಆಲ್ ಇಂಡಿಯಾ ಬಹುಜನ ಸಮಾಜ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಗಳಾದ ಹೆಚ್.ಸೀಗನಾಯಕ, ಹೆಚ್.ಹನುಮಂತು, ರಾಜ್ಯ ಕಾರ್ಯದರ್ಶಿ ಶಾಗ್ಯ ಮಹೇಶ್, ಜಿಲ್ಲಾ ಸಂಯೋಜಕ ದೊಡ್ಡಿಂದುವಾಡಿ ಸಿದ್ದರಾಜು, ಜಿಲ್ಲಾ ಉಪಾಧ್ಯಕ್ಷ ರಾದ ಸಿದ್ದಯ್ಯನಪುರ ಮಂಜು, ಸುಂದರ್, ಜಿಲ್ಲಾ ಕಾರ್ಯದರ್ಶಿ ಮಾದೇಶ್ ಕೋಡಿಪುರ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net