

ಚಿತ್ರದುರ್ಗ: ಒಳ ಮೀಸಲಾತಿ ಜಾರಿಯಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವ ರಾಜ್ಯ ಸರ್ಕಾರದ ನಡೆ ಖಂಡಿಸಿ ಸಾಮಾಜಿಕ ಸಂಘರ್ಷ ಸಮಿತಿ, ರಾಜ್ಯ ಮಾದಿಗರ ಸಾಂಸ್ಕೃತಿಕ ಸಂಘದ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.
ಸರ್ಕಾರ ನೇಮಿಸಿರುವ ಆಯೋಗ ಕೂಡಲೇ ವರದಿ ಸಲ್ಲಿಸುವಂತೆ ನ್ಯಾ.ನಾಗಮೋಹನದಾಸ್ ಅವರಿಗೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು.
ಸಂಘದ ಅಧ್ಯಕ್ಷ ಪ್ರೊ.ಸಿ.ಕೆ.ಮಹೇಶ್ ಮಾತನಾಡಿ, ಆಯೋಗಕ್ಕೆ ನಿಗದಿಗೊಳಿಸಿದ್ದ ಅವಧಿ ಮೀರಿದ್ದರೂ ಒಳ ಮೀಸಲಾತಿ ಕುರಿತು ಸಂಗ್ರಹಿಸಿರುವ ವರದಿ ಇನ್ನೂ ಸರ್ಕಾರಕ್ಕೆ ಸಲ್ಲಿಕೆ ಆಗದಿರುವ ಕಾರಣ ಮಾದಿಗ ಸಮುದಾಯಕ್ಕೆ ದೊಡ್ಡ ಪೆಟ್ಟಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
30 ದಿನವೂ ಸಮುದಾಯದಿಂದ ಅಹವಾಲು ಸ್ವೀಕರಿಸಿದ್ದಾರೆ. ಈಗಾಗಲೇ 69 ಪುಟಗಳ ವರದಿ ಕೊಟ್ಟಿದ್ದೇವೆ. ಇಷ್ಟೊತ್ತಿಗೆ ಸರ್ವೇ ಪೂರೈಸಿದ್ದರೆ ಅನುಕೂಲವಾಗುತ್ತಿತ್ತು. ಆದರೆ, ಒಳ ಮೀಸಲಾತಿ ವಿಳಂಬಕ್ಕೆ ಸಮುದಾಯದ ಸಚಿವರು, ಕೆಲ ಸಂಘಟನೆಗಳು ಕಾರಣವಾಗಿವೆ. ಇದು ಆತಂಕ ಮೂಡಿಸಿದೆ ಎಂದು ಬೇಸರಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಹಿರೇಹಳ್ಳಿ ಮಲ್ಲಿಕಾರ್ಜುನ್ ಮಾತನಾಡಿ, ಈವರೆಗೂ ಆಡಳಿತ ನಡೆಸಿದ ಎಲ್ಲ ಪಕ್ಷಗಳೂ ಮೂರು ದಶಕಗಳಿಂದಲೂ ಒಳ ಮೀಸಲಾತಿ ಅನುಷ್ಠಾನಗೊಳಿಸದೆ, ದಲಿತರನ್ನು ವಂಚಿಸುತ್ತ ಬಂದಿವೆ. ಅಧಿಕಾರದಲ್ಲಿದ್ದಾಗ ಮಾಡುವ ಬದಲು ಇಲ್ಲದ ವೇಳೆ ಧ್ವನಿ ಎತ್ತುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ರಾಜಕಾರಣಿಗಳ ಓಲೈಕೆ ಮಾಡದೆ, ಸ್ವತಂತ್ರವಾಗಿ ಒಳ ಮೀಸಲು ಪಡೆಯುವುದು ನಮ್ಮ ಗುರಿ. ಜಾರಿ ಆಗುವವರೆಗೂ ಯಾವ ಕಾರಣಕ್ಕೂ ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡುವಂತಿಲ್ಲ ಎಂದು ಸರ್ಕಾರಕ್ಕೆ ಕೋರಿದರು.
ಸಮಿತಿ ಗೌರವಾಧ್ಯಕ್ಷ ಡಿ.ದುರುಗೇಶಪ್ಪ, ಪದಾಧಿಕಾರಿಗಳಾದ ಕುಮಾರ್, ಸಿ.ಎ.ಚಿಕ್ಕಣ್ಣ, ಎಂ.ಡಿ.ರವಿ, ಆರ್.ರಾಮಲಿಂಗಪ್ಪ, ಪ್ರಭಾಕರ್, ಸುಧಾಕರ್, ತಮ್ಮಣ್ಣ, ಹನುಮಂತರಾಯ, ರಾಜಣ್ಣ ಇತರರಿದ್ದರು.