

ಹುಬ್ಬಳ್ಳಿ: ಸೂಚನೆ ನೀಡದೇ ಏಕಾಏಕಿ ಯೂ ಟರ್ನ್ ತೆಗೆದುಕೊಂಡ ಒಮ್ನಿಗೆ ಹಿಂದಿನಿಂದ ಬಂದ ದ್ವಿಚಕ್ರ ವಾಹನ ಡಿಕ್ಕಿ ಹೊಡೆದು, ಸವಾರ ಚರಂಡಿಯಲ್ಲಿ ಬಿದ್ದು ಸಾವನ್ನಪ್ಪಿರುವ ಘಟನೆ ಇಲ್ಲಿನ ಗಬ್ಬೂರು ಮುಖ್ಯದ್ವಾರದ ಬಳಿ ಶುಕ್ರವಾರ ರಾತ್ರಿ ಸಂಭವಿಸಿದೆ.
ತಾಲೂಕಿನ ಕೊಟಗೊಂಡಹುಣಸಿ ಗ್ರಾಮದ ರಜಾಕ್ ಕಮಲಸಾಬ ಅಮಿನಸಾಬನವರ (20) ಮೃತಪಟ್ಟ ಸವಾರ.
ಒಮ್ನಿ ಹುಬ್ಬಳ್ಳಿಯಿಂದ ಶಿಗ್ಗಾಂವಿ ಕಡೆಗೆ ಹೊರಟಿತ್ತು. ರಜಾಕ್ ಬೈಕ್ನಲ್ಲಿ ಗಬ್ಬೂರು ಕಡೆ ಹೊರಟಿದ್ದ. ಗಬ್ಬೂರು ಮುಖ್ಯದ್ವಾರದ ಬಳಿ ಒಮ್ನಿ ಚಾಲಕ ಏಕಾಏಕಿ ಯೂ ಟರ್ನ್ ತೆಗೆದುಕೊಂಡ. ಹಿಂದೆ ಬರುತ್ತಿದ್ದ ಬೈಕ್ ನಿಯಂತ್ರಿಸಲಾಗದೇ ಒಮ್ನಿಗೆ ಗುದ್ದಿದೆ. ಪರಿಣಾಮ ರಜಾಕ್ ಪಕ್ಕದ ಕಂಬಕ್ಕೆ ತಲೆ ಬಡಿದು ನಂತರ ಚರಂಡಿಯಲ್ಲಿ ಬಿದ್ದು ತೀವ್ರ ರಕ್ತಸ್ರಾವ ಉಂಟಾಗಿತ್ತು. ಸ್ಥಳೀಯರು ಚರಂಡಿಯಿಂದ ಮೇಲೆತ್ತುವಷ್ಟರಲ್ಲಿ ಆತ ಸಾವನ್ನಪ್ಪಿದ್ದ.
ಸ್ಥಳಕ್ಕೆ ಧಾವಿಸಿದ ದಕ್ಷಿಣ ಸಂಚಾರ ಠಾಣೆ ಪೊಲೀಸರು, ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಒಮ್ನಿ ವಶಕ್ಕೆ ಪಡೆದು ಚಾಲಕನ ವಿಚಾರಣೆ ನಡೆಸುತ್ತಿದ್ದಾರೆ.