ಒಮಿಕ್ರಾನ್ ಭಯ, ನಿರ್ಲಕ್ಷ್ಯ ಬೇಡ, ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ಮನವಿ, ಹೊಸಕೋಟೆಯಲ್ಲಿ ಉಡುಗೊರೆ ವಿತರಣೆ

0eb4a91f-79c9-4c3a-9202-a2dbcb48d2d9
Published on

ಬೆಂಗಳೂರು ಗ್ರಾಮಾಂತರ: ಕರೊನಾ ಎರಡೂ ಅಲೆಗಳನ್ನು ಸಮರ್ಥವಾಗಿ ಎದುರಿಸಿದ್ದೇವೆ, ಸಾರ್ವಜನಿಕರ ಸಹಕಾರದಿಂದ ಮುಂದೆಯೂ ಸರ್ಕಾರ ಓಮಿಕ್ರಾನ್ ಸೋಂಕನ್ನೂ ಪರಿಣಾಮಕಾರಿಯಾಗಿ ನಿಯಂತ್ರಿಸಲಿದೆ, ಜನರು ಆತಂಕಪಡದೆ ಸರ್ಕಾರದೊಂದಿಗೆ ಕೈಜೋಡಿಸುವ ಮೂಲಕ ಸೋಂಕಿನ ವಿರುದ್ಧ ಹೋರಾಡಬೇಕಿದೆ ಎಂದು ಪೌರಾಡಳಿತ ಮತ್ತು ಸಣ್ಣಕೈಗಾರಿಕೆ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್ ಹೇಳಿದರು.

ಹೊಸಕೋಟೆ ನಗರದ ವಾರ್ಡ್ 13ರಲ್ಲಿ ಸೋಮವಾರ ಹೊಸವರ್ಷದ ಪ್ರಯುಕ್ತ ಸಾರ್ವಜನಿಕರಿಗೆ ಗೃಹಪಯೋಗಿ ವಸ್ತುಗಳನ್ನು ಉಡುಗೊರೆಯಾಗಿ ವಿತರಿಸಿ ಮಾತನಾಡಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೋವಿಡ್ ಲಸಿಕೆ ವಿತರಣೆಯಲ್ಲಿ ಸಾಕಷ್ಟು ಶ್ರಮಿಸಿದೆ, ಪರಿಣಾಮವಾಗಿ ಕರೊನಾವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಸಾಧ್ಯವಾಗಿದೆ. ಈಗಾಗಲೇ ಜಿಲ್ಲಾಡಳಿತ ಗ್ರಾಮಾಂತರ ಜಿಲ್ಲೆಯಲ್ಲಿ ಜ.2ರವರೆಗೆ ವಿಶೇಷ ಕರೊನಾ ವ್ಯಾಕ್ಸಿನ್ ಅಭಿಯಾನ ಹಮ್ಮಿಕೊಂಡಿದೆ. ಪ್ರತಿಯೊಬ್ಬರೂ ಕಡ್ಡಾಯವಾಗಿ ಲಸಿಕೆ ಪಡೆದು ಸೋಂಕಿನಿಂದ ರಕ್ಷಣೆ ಪಡೆಯಬೇಕು. ಮೊದಲ ಡೋಸ್ ವ್ಯಾಕ್ಸಿನ್ ಪಡೆದವರು ಎರಡನೇ ಡೋಸ್ ಪಡೆಯಲು ಹಿಂದೇಟು ಹಾಕುತ್ತಿರುವ ಪ್ರಕರಣಗಳು ಕಂಡುಬರುತ್ತಿವೆ, ದಯವಿಟ್ಟು ಈ ಬಗ್ಗೆ ನಿರ್ಲಕ್ಷ್ಯ ಮಾಡಬಾರದು ಎಂದರು.

ಮಾರ್ಗಸೂಚಿ ಪಾಲಿಸಿ: ರಾಜ್ಯದಲ್ಲಿ ಒಮಿಕ್ರಾನ್ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೊಸವರ್ಷಾಚರಣೆ ಸಂಭ್ರಮಕ್ಕೆ ಸರ್ಕಾರ ಬ್ರೇಕ್ ಹಾಕಿದೆ, ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ಇದು ಅನಿವಾರ್ಯ. ಕರೊನಾ ಮಾರ್ಗಸೂಚಿ ಪಾಲನೆಯೊಂದಿಗೆ ಹೊಸವರ್ಷವನ್ನು ಸ್ವಾಗತಿಸೋಣ ಎಂದು ಎಂಟಿಬಿ ಕರೆ ನೀಡಿದರು.

ಹೊಸಕೋಟೆ ನಗರಸಭೆ ವ್ಯಾಪ್ತಿಯ ವಾರ್ಡ್‌ಗಳಲ್ಲಿ ಸದಸ್ಯರು ಸಾರ್ವಜನಿಕರೊಂದಿಗೆ ಉತ್ತಮ ಒಡನಾಟವಿಟ್ಟುಕೊಂಡಿದ್ದಾರೆ. ಕರ್ತವ್ಯಗಳ ಜತೆಗೆ ಜನರ ಕಷ್ಟಸುಖಗಳಲ್ಲಿ ಪಾಲ್ಗೊಳ್ಳುವ ಮೂಲಕ ಅತ್ಮೀಯತೆ ಇಟ್ಟುಕೊಂಡಿದ್ದು ಇತರರಿಗೆ ಮಾದರಿಯಾಗಿದೆ ಎಂದು ಎಂಟಿಬಿ ಹೇಳಿದರು.

ಹೊಸವರ್ಷ ಹರ್ಷ ತರಲಿ: ಎರಡೂ ವರ್ಷ ಕರೊನಾದಿಂದಾಗಿ ಜನಜೀವನ ಆತಂಕದಲ್ಲೇ ನಡೆದಿದೆ. ಮುಂದಿನ ಹೊಸ ವರ್ಷದಲ್ಲಾದರೂ ಇವೆಲ್ಲಾ ಆತಂಕಕೊನೆಗೊಳ್ಳಲಿ ಎಂದು ನಗರಸಭೆ ಸದಸ್ಯ ಬಿರಿಯಾನಿ ಆನಂದ್ ಆಶಯ ವ್ಯಕ್ತಪಡಿಸಿದರು. ಸಚಿವರ ಮಾರ್ಗದರ್ಶನದಂತೆ ವಾರ್ಡ್ ವ್ಯಾಪ್ತಿಯಲ್ಲಿ ಉತ್ತಮ ಕೆಲಸಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ವಾಡಿಕೆಯಂತೆ ವಾರ್ಡ್‌ನ ಎಲ್ಲ ಜನರಿಗೆ ಉಡುಗೊರೆಯಾಗಿ ಗೃಹಪಯೋಗಿ ವಸ್ತುಗಳನ್ನು ವಿತರಿಸಲಾಗುತ್ತಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net