

ಉಜ್ಜಿನಿ: ಗ್ರಾಮ ಹಾಗೂ ಸುತ್ತಮುತ್ತಲಿನ ಊರುಗಳಲ್ಲಿ ನಿರಂತರ ಮಳೆಯಾಗುತ್ತಿದ್ದು, ಮೆಕ್ಕೆಜೋಳ ಬೆಳೆಗಾರರು ಯೂರಿಯಾ ಖರೀದಿ ಮಾಡಲು ಸಾಲು ನಿಲ್ಲುವಂತಾಗಿದೆ.
ಬೇಡಿಕೆಗೆ ತಕ್ಕಂತೆ ಯೂರಿಯಾ ಗೊಬ್ಬರ ದಾಸ್ತಾನು ಇಲ್ಲದ ಕಾರಣ ಲಭ್ಯವಿರುವ ಯೂರಿಯಾ ಗೊಬ್ಬರವನ್ನೇ ಹೇಗಾದರೂ ಮಾಡಿ ಖರೀದಿಸಬೇಕೆಂದು ರೈತರು ಮುಗಿಬೀಳುತ್ತಿದ್ದಾರೆ . ನಿಂಬಳಗೆರೆ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಪ್ರತಿಯೊಬ್ಬರಿಗೆ ಒಂದು ಚೀಲದಂತೆ 440 ಚೀಲ ಗೊಬ್ಬರವನ್ನು ಬುಧವಾರ ಮಾರಾಟ ಮಾಡಲಾಯಿತು.
ಉಜ್ಜನಿ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದಿಂದ ಗುರುವಾರ 370 ಚೀಲ ಯೂರಿಯಾ ಮಾರಾಟ ಮಾಡಲಾಯಿತು. ಮೆಕ್ಕೆ ಜೋಳ ಬೆಳೆಗೆ ಯೂರಿಯಾ ಹಾಕಲು ಇದು ಸಕಾಲವಾಗಿದೆ. ಅದ್ದರಿಂದ ಬೇಡಿಕೆಗೆ ಅನುಗುಣವಾಗಿ ಗೊಬ್ಬರ ಸರಬರಾಜು ಮಾಡಲು ಕ್ರಮ ಕೈಗೊಳ್ಳಬೇಕು ಎಂದು ರೈತರು ಒತ್ತಾಯ ಮಾಡಿದ್ದಾರೆ.