

ಯಾದಗಿರಿ: ವೀರಶೈವ-ಲಿಂಗಾಯತ ಸಮಾಜಕ್ಕೆ ಸಂವಿಧಾನ ಹಕ್ಕಾದ ಒಬಿಸಿ ಮೀಸಲಾತಿ ನೀಡಲು ರಾಜ್ಯ ಹಾಗೂ ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆಗ್ರಹಿಸಿದರು.
ಮಂಗಳವಾರ ನಗರದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಯುವ ಘಟಕದ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿ, ವೀರಶೈವ-ಲಿಂಗಾಯತ ಸಮಾಜ ದೇಶಕ್ಕೆ ಸಾಮಾಜಿಕ ನ್ಯಾಯದ ಪರಿಕಲ್ಪನೆ ತೋರಿಸಿಕೊಟ್ಟಿದೆ. ನಮ್ಮಲ್ಲೂ ಆರ್ಥಿಕವಾಗಿ ಅಶಕ್ತರಿದ್ದಾರೆ. ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ನೀಡಿದ ವರದಿ ಮತ್ತು ಅಂಕಿ-ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ಸಮುದಾಯದ ಎಲ್ಲ ಒಳಪಂಗಡಗಳನ್ನು ಒಬಿಸಿ ಪಟ್ಟಿಗೆ ಸೇರಿಸಿ ಎಂದು ಹೋರಾಟ ಮಾಡುತ್ತಿದ್ದೇವೆ. ನಮಗೆ ನ್ಯಾಯ ಸಿಗುವ ವಿಶ್ವಾಸ ಇದೆ ಎಂದರು.
ವೀರಶೈವ ಮಹಾಸಭಾ ಹಲವು ವರ್ಷಗಳಿಂದ ನಾಗರಿಕ ಸಮಾಜದಲ್ಲಿ ಸಾಕಷ್ಟು ಉತ್ತಮ ಕೆಲಸ ಮಾಡುತ್ತಿದೆ. ಯುವ ಪೀಳಿಗೆಗೆ ಸಂಸ್ಕಾರ ಮತ್ತು ನಮ್ಮ ಪರಂಪರೆ ಉಳಿಸುವ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಆಧುನಿಕ ಯುಗದಲ್ಲಿ ಮನುಷ್ಯ ಯಂತ್ರದಂತೆ ಕೆಲಸ ಮಾಡುತ್ತಿದ್ದಾನೆ. ಯುವ ಪೀಳಿಗೆ ಎಷ್ಟೇ ಬುದ್ಧಿವಂತರಿದ್ದರೂ ದಾರಿ ತಪ್ಪುತ್ತಿದ್ದಾರೆ. ಹೀಗಾಗಿ ಅವರಿಗೆ ಬಸವಾದಿ ಶರಣರ ತತ್ವ,ಸಿದ್ಧಾಂತದ ಬಗ್ಗೆ ತಿಳಿ ಹೇಳುವ ಕೆಲಸ ಮಹಾಸಭಾ ಮಾಡುತ್ತಿದೆ ಎಂದು ಹೇಳಿದರು.