

ಚಿತ್ರದುರ್ಗ: ಎನ್‌ಪಿಎಸ್ ರದ್ದುಗೊಳಿಸಿ, ಒಪಿಎಸ್ ಜಾರಿಗೆ ಆಗ್ರಹಿಸಿ ರಾಜ್ಯ ಅನುದಾನಿತ ಶಾಲಾ-ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ಪದಾಧಿಕಾರಿಗಳು ಶನಿವಾರ ಪ್ರತಿಭಟನೆ ನಡೆಸಿದರು.
ವಿವಿಧ ಬೇಡಿಕೆ ಈಡೇರಿಸುವಂತೆ ಸಿಎಂಗೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು.
ರಾಜ್ಯ ಖಾಸಗಿ ಶೈಕ್ಷಣಿಕ ಸಂಸ್ಥೆಗಳ ಸಿಬ್ಬಂದಿ (ವೇತನ, ನಿವೃತ್ತಿ ವೇತನ, ಇತರೆ ಸೌಲಭ್ಯಗಳ ನಿಯಂತ್ರಣ) ಕಾಯ್ದೆ 2014ಕ್ಕೆ ತಿದ್ದುಪಡಿ ತರಬೇಕು ಅಥವಾ ರದ್ದುಪಡಿಸಬೇಕು ಎಂದು ಆಗ್ರಹಿಸಿದರು.
2006 ಏಪ್ರಿಲ್ 1ರ ಪೂರ್ವದಲ್ಲಿ ನೇಮಕವಾಗಿ ನಂತರ ಅನುದಾನಕ್ಕೆ ಒಳಪಟ್ಟ ನೌಕರರ ಪೂರ್ವದ ಸೇವೆಯನ್ನು ಪಿಂಚಣಿ ಸೌಲಭ್ಯಕ್ಕೆ ಪರಿಗಣಿಸಿ, ಹಳೆಯ ಮಾದರಿಯಲ್ಲೇ ನಿಶ್ಚಿತ ಪಿಂಚಣಿ ಸೌಲಭ್ಯ ನೀಡಬೇಕು ಎಂದು ಸರ್ಕಾರಕ್ಕೆ ಕೋರಿದರು.
ಸಂಘದ ಅಧ್ಯಕ್ಷ ಜಿ.ಹನುಮಂತಪ್ಪ, ಕೆ.ಜಿ.ವಸಂತಕುಮಾರ್, ಜಯಕುಮಾರ್, ನಾಗೇಶ್, ಅಂಜಿನಪ್ಪ, ಪರಮೇಶ್ವರಪ್ಪ, ನರಸಿಂಹಸ್ವಾಮಿ, ಜಿ.ಎಸ್.ತಿಪ್ಪೇಸ್ವಾಮಿ, ನಾಗರಾಜ್, ಶಿವಣ್ಣ, ರಾಮಣ್ಣ ಇತರರಿದ್ದರು.