

ಮುಳಗುಂದ: ಮಳೆಗಾಲದಲ್ಲಿ ತುಂಬಿ ತುಳುಕಬೇಕಾದ ಕೆರೆಗಳು ಹೂಳು ತುಂಬಿ ಬರಡಾಗಿವೆ. ಕೆರೆಗಳ ಒತ್ತುವರಿಯಿಂದಾಗಿ ಕೆರೆ ಹೋಗಿ ಸಣ್ಣ ಹೊಂಡಗಳಂತಾಗಿವೆ. ಕೆರೆ ಜಾಗವೆಲ್ಲ ಕಸ, ತಿಪ್ಪೆಗುಂಡಿ ತುಂಬುವ ಪ್ರದೇಶಗಳಾಗಿವೆ. ಒತ್ತುವರಿಯಾದ ಕೆರೆಗಳಿಗೆ ಮರುಜೀವ ತುಂಬಲು ಸ್ಥಳೀಯ ಪಟ್ಟಣ ಪಂಚಾಯಿತಿ ಗಡಿ ಗುರುತು ಕಾರ್ಯ ಪ್ರಾರಂಭಿಸಿ ಕೆರೆಗಳಿಗೆ ಮತ್ತೇ ಮರುಜೀವ ಕೊಡಲು ಮುಂದಾಗಿದೆ.
ಪಟ್ಟಣದಲ್ಲಿ ಹೆಚ್ಚು ಕೆರೆ: ಪಟ್ಟಣ ವ್ಯಾಪ್ತಿಯಲ್ಲಿ ಪಪಂ ಮಾಲ್ಕಿಯಲ್ಲಿ ಒಂಬತ್ತು ಕೆರೆಗಳಿವೆ. 24 ಎಕರೆ ಪ್ರದೇಶದಲ್ಲಿ ಅಬ್ಬಿಕೆರೆ, 12 ಎಕರೆ ಮೊಕಾಶಿ ಕೆರೆ, 7 ಎಕರೆ ರಾಮಲಿಂಗನ ಕೆರೆ, 2 ಎಕರೆ ಕೆಂಪಿಕೆರೆ, 2 ಎಕರೆ ಮುರಾರ್ಜಿ ಶಾಲೆ ಹತ್ತಿರದ ಗುಡ್ಡವ್ವನ ಕೆರೆ, 1 ಎಕರೆ ಕಣವಿ ದಾರಿ ಕೆರೆ, 6 ಎಕರೆ ಪಟ್ಟಣಶೆಟ್ಟಿ ಕೆರೆ ಹಾಗೂ ಕಂದಾಯ ಇಲಾಖೆಯ 39 ಎಕರೆ ಗೌಡನ ಕೆರೆ, 65 ಎಕರೆ ಹಳೇ ವುಡಾ ವ್ಯಾಪ್ತಿಯಲ್ಲಿ ಕೆರೆಗಳಿದ್ದು, ಎಲ್ಲ ಕೆರೆಗಳನ್ನು ನಿಯಮಾನುಸಾರವಾಗಿ ಗಡಿ ಗುರುತಿಸಿ ಅಭಿವೃದ್ಧಿಪಡಿಸುವ ಪ್ರಕ್ರಿಯೆ ತ್ವರಿತಗತಿಯಲ್ಲಿ ನಡೆಯುತ್ತಿದೆ.
ಒತ್ತುವರಿಯಾದ ಕೆರೆಗಳು: ಹಲವು ದಶಕಗಳಿಂದ ನಿರ್ಲಕ್ಷ್ಯ್ಕೊಳಗಾಗಿದ್ದ ಕೆರೆಗಳು ಒತ್ತುವರಿಯಾಗಿದ್ದು, ಪಟ್ಟಣ ಪಂಚಾಯಿತಿ ಸಿಬ್ಬಂದಿ ಎಲ್ಲ ಕೆರೆಗಳ ಗಡಿ ಗುರುತು ಮಾಡುತ್ತಿದೆ. ಒತ್ತುವರಿಯಾದ ಜಾಗ ವಶಪಡಿಸಿಕೊಳ್ಳಲಾಗುತ್ತಿದೆ. ಅಲ್ಲದೆ, ಕೆರೆಗಳು ಸಂಪೂರ್ಣವಾಗಿ ಹೂಳು ತುಂಬಿದ್ದು, ಮುಳ್ಳು ಕಂಟಿಗಳು ಬೆಳೆದು ತನ್ನ ಮೂಲ ಸ್ವರೂಪವನ್ನೆ ಕಳೆದುಕೊಂಡಂತಾಗಿವೆ. ಸದ್ಯ ಗದಗ ಜಿಲ್ಲೆಯಲ್ಲಿ ಪಟ್ಟಣ ಪ್ರದೇಶಗಳಲ್ಲಿಯೇ ಹೆಚ್ಚಿನ ಕೆರೆಗಳು ಮುಳಗುಂದ ವ್ಯಾಪ್ತಿಯಲ್ಲಿದ್ದು, ಪುನಶ್ಚೇತನಗೊಳ್ಳುತ್ತಿರುವುದು ವಿಶೇಷ ಬೆಳವಣಿಗೆಯಾಗಿದೆ.
ಹಸಿರು ನ್ಯಾಯಾಧಿಕರಣ ನಿರ್ದೇಶನದಂತೆ ರಾಷ್ಟ್ರೀಯ ಜಲ ಸಂರಕ್ಷಣೆ ನೀತಿ ಅನ್ವಯ ಕೆರೆ ಅಭಿವೃದ್ಧಿಪಡಿಸುವ ಕಾರ್ಯವನ್ನು ಪಪಂ ವತಿಯಿಂದ ಕಳೆದ ಮೂರು ತಿಂಗಳಿನಿಂದ ಮಾಡುತ್ತಿದ್ದು, ಕೆರೆಗಳನ್ನು ಗಡಿ ಗುರುತುಪಡಿಸಿ ಒತ್ತುವರಿಯಾಗಿರುವ ಪ್ರದೇಶವನ್ನು ವಶಪಡಿಸಿಕೊಳ್ಳಲಾಗುತ್ತಿದೆ. ಪಪಂನ ಕಾರ್ಯಕ್ಕೆ ಜಿಲ್ಲಾಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು, ಜಲ ಸಂರಕ್ಷಣೆಯಿಂದ ಭವಿಷ್ಯದಲ್ಲಿ ಹೆಚ್ಚಿನ ಉಪಯೋಗವಾಗುವುದು.| ಎಂ.ಎಸ್. ಬೆಂತೂರ ಮುಖ್ಯಾಧಿಕಾರಿ, ಪಪಂ ಮುಳಗುಂದ
ಕೆರೆ ಸಂರಕ್ಷಣೆಗೆ ಇಂದು ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಕೆರೆಗಳ ಪುನಶ್ಚೇತನದಿಂದ ನೂರಾರು ಉಪಯೋಗಗಳಿವೆ. ಆ ದಿಶೆಯಲ್ಲಿ ಮುಳಗುಂದ ಸೇರಿ ಜಿಲ್ಲೆಯ ಎಲ್ಲ ಕೆರೆಗಳ ಅಭಿವೃದ್ಧಿಪಡಿಸುವ ಕಾರ್ಯಯೋಜನೆ ಹಮ್ಮಿಕೊಳ್ಳಲಾಗಿದೆ.| ಸುಂದರೇಶಬಾಬು ಜಿಲ್ಲಾಧಿಕಾರಿ