ಒತ್ತುವರಿ ಭೂಮಿ ಮಂಜೂರು ಕಷ್ಟ

nrp MEETING
ಎನ್.ಆರ್.ಪುರ ತಾಲೂಕು ಕಚೇರಿಯಲ್ಲಿ ಬಗರ್ ಹುಕುಂ ಸಮಿತಿ ಸಭೆ ನಡೆಯಿತು. ಅಧ್ಯಕ್ಷ ಇ.ಸಿ.ಜೋಯಿ, ತನುಜಾ ಟಿ. ಸವದತ್ತಿ, ಸತೀಶ್, ಶೇಖ್‌ಅಬ್ದುಲ್ಲಾ, ಹೇಮಲತಾ ಇತರರಿದ್ದರು.
Published on

ಎನ್.ಆರ್.ಪುರ: ಶೃಂಗೇರಿ ಮೂರು ವಿಧಾನಸಭಾ ಕ್ಷೇತ್ರಗಳ ಪೈಕಿ ಎನ್.ಆರ್.ಪುರ ತಾಲೂಕಿನಲ್ಲಿ 94ಸಿ ಅಡಿ ಅತಿ ಹೆಚ್ಚು ಹಕ್ಕು ಪತ್ರ ನೀಡಲಾಗಿದೆ ಎಂದು ತಾಲೂಕು ಬಗರ್ ಹುಕುಂ ಸಮಿತಿ ಅಧ್ಯಕ್ಷ ಇ.ಸಿ.ಜೋಯಿ ತಿಳಿಸಿದರು.

ಗುರುವಾರ ತಾಲೂಕು ಕಚೇರಿಯಲ್ಲಿ ಆಯೋಜಿಸಿದ್ದ ತಾಲೂಕು ಬಗರ್ ಹುಕುಂ ಸಮಿತಿ ಸಭೆಯಲ್ಲಿ ಮಾತನಾಡಿ, 94 ಸಿ ಹಾಗೂ ಫಾರ್ಮ್ 50, 53 ಹಾಗೂ 57ರ ಅಡಿಯಲ್ಲಿ ಅರ್ಜಿ ನೀಡಿದ ಅರ್ಹರಿಗೆ ಹಕ್ಕು ಪತ್ರ ನೀಡಬೇಕು ಎಂದು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇವೆ. ತಾಲೂಕು ಕಚೇರಿಯಲ್ಲಿ ಕೆಲಸ ವೇಗವಾಗಿ ನಡೆಯುತ್ತಿದ್ದು ಮುಂದಿನ ಸಭೆಯಲ್ಲಿ ಶಾಸಕರ ಮುಖಾಂತರ ಹಕ್ಕು ಪತ್ರ ನೀಡಲಾಗುವುದು. ಈ ಸಭೆಯಲ್ಲಿ 16 ಕಡತಗಳು ಸಿದ್ಧವಾಗಿದ್ದು ಮುಂದಿನ ಸಭೆಯಲ್ಲಿ ಹಕ್ಕು ಪತ್ರ ನೀಡಬಹುದು ಎಂದರು.

100 ಹಸುಗಳಿಗೆ ಮೇಯಲು 30 ಎಕರೆ ಗೋಮಾಳ ಜಾಗ ಮೀಸಲಿಡಬೇಕು ಎಂಬ ನಿಯಮವಿದೆ. ಆದರೆ ಗ್ರಾಮಗಳ ಅಕ್ಕಪಕ್ಕ ನೂರಾರು ಎಕರೆ ಅರಣ್ಯ ಇರುವುದರಿಂದ ನಿಯಮ ಬದಲಿಸಿ 30 ಎಕರೆಯಲ್ಲಿ 10 ಎಕರೆ ಮಾತ್ರ ಗೋಮಾಳಕ್ಕೆ ಮೀಸಲಿಟ್ಟು ಉಳಿದ ಜಾಗವನ್ನು ಕಂದಾಯ ಇಲಾಖೆಯ ಇತರ ಉಪಯೋಗಕ್ಕೆ ಬಳಸಬಹುದೇ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಎನ್.ಆರ್.ಪುರ ವಲಯ ಅರಣ್ಯಾಧಿಕಾರಿ ಪ್ರವೀಣ್ ಮಾತನಾಡಿ, ಅರಣ್ಯದಲ್ಲಿ ಹಸುವನ್ನು ಮೇಯಲು ಬಿಡಲು ಅವಕಾಶವಿಲ್ಲ ಎಂದರು.

ರೆವಿನ್ಯೂ ಇನ್ಸ್‌ಪೆಕ್ಟರ್, ವಲಯ ಅರಣ್ಯಾಧಿಕಾರಿಗಳು, ಗ್ರಾಮ ಆಡಳಿತಾಧಿಕಾರಿಗಳು ಅವರ ಇಲಾಖೆಯ ಮಾಹಿತಿ ನೀಡಿದರು. ಸಮಿತಿ ಸದಸ್ಯರಾದ ಶೇಖ್ ಅಬ್ದುಲ್ಲಾ, ಹೇಮಲತಾ, ಸತೀಶ್ ಇದ್ದರು.

ಪಟ್ಟಣ ಸಮೀಪವಿರುವ ರಾವೂರು, ಮೆಣಸೂರು, ನಾಗಲಾಪುರ ಗ್ರಾಮಗಳ ಜನರು ಒತ್ತುವರಿ ಮಾಡಿರುವ ಜಮೀನನ್ನು ಸಕ್ರಮಗೊಳಿಸುವಂತೆ ಫಾರ್ಮ್ ನಂಬರ್ 50ರಲ್ಲಿ 35 ವರ್ಷದ ಹಿಂದೆಯೇ ಅನೇಕರು ಅರ್ಜಿ ಹಾಕಿದ್ದರು. ಆದರೆ ಕಾಲ ಕ್ರಮೇಣ ಪಟ್ಟಣ ಪಂಚಾಯಿತಿ ವ್ಯಾಪ್ತಿಯ 3 ಕಿ.ಮೀ. ದೂರದವರೆಗೆ ಜಾಗ ಮಂಜೂರು ಮಾಡಬಾರದು ಎಂಬ ನಿಯಮ ಬಂದಿದೆ. ಒತ್ತುವರಿದಾರರು ಅರ್ಜಿ ನೀಡುವಾಗ ಆ ನಿಯಮ ಇರಲಿಲ್ಲ. ಹಲವಾರು ವರ್ಷಗಳಿಂದ ರೈತರು ಜಮೀನಿನಲ್ಲಿ ಮನೆ ಕಟ್ಟಿಕೊಂಡು ವಾಸ ಮಾಡುತ್ತಿದ್ದಾರೆ ಎಂದು ತಾಲೂಕು ಬಗರ್ ಹುಕುಂ ಸಮಿತಿ ಅಧ್ಯಕ್ಷ ಇ.ಸಿ.ಜೋಯಿ ಸಭೆಯ ಗಮನಕ್ಕೆ ತಂದರು. ಸಮಿತಿ ಸದಸ್ಯ ಸತೀಶ್ ಮಾತನಾಡಿ, ಮೂಡಿಗೆರೆ, ಕಡೂರು ಭಾಗದಲ್ಲಿ ಅಕ್ರಮ ಸಕ್ರಮ ಸಮಿತಿಯಿಂದ ಮಂಜೂರಾಗಿದ್ದ ಜಾಗವು ಕಾನೂನುಬದ್ಧವಾಗಿಲ್ಲ ಎಂದು ತನಿಖೆ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗಿತ್ತು. ಆದ್ದರಿಂದ ಕಾನೂನು ವ್ಯಾಪ್ತಿಯಲ್ಲೇ ಭೂಮಿ ಮಂಜೂರು ಮಾಡಬೇಕು. ಇಲ್ಲದಿದ್ದರೆ ಬಗರ್ ಹುಕುಂ ಸಮಿತಿ ಸದಸ್ಯರು ಸಹ ತನಿಖೆ ಎದುರಿಸಬೇಕಾಗುತ್ತದೆ. ಫಾರ್ಮ್ ನಂ 57ರಲ್ಲಿ ಅರ್ಜಿ ಹಾಕಿದವರಿಗೆ ಮತ್ತೆ ನೆನಪು ಮಾಡಿ ನೋಟಿಸ್ ಕೊಡಬೇಕು ಎಂದು ತಿಳಿಸಿದರು.

ಇದುವರೆಗೆ ಫಾರ್ಮ್ ನಂ 50ರಲ್ಲಿ 6339 ಅರ್ಜಿಗಳು ಸಲ್ಲಿಕೆಯಾಗಿದ್ದವು. ಅದರಲ್ಲಿ 1293 ಅರ್ಜಿದಾರರಿಗೆ ಭೂಮಿ ಮಂಜೂರು ಮಾಡಲಾಗಿದೆ. 5046 ಅರ್ಜಿಗಳು ತಿರಸ್ಕೃತವಾಗಿವೆ. ಫಾರ್ಮ್ ನಂ 53ರಲ್ಲಿ 4620 ಅರ್ಜಿಗಳು ಬಂದಿದ್ದು, ಇದರಲ್ಲಿ 1052 ಅರ್ಜಿದಾರರಿಗೆ ಭೂಮಿ ಮಂಜೂರು ಮಾಡಲಾಗಿದೆ. 1901 ಅರ್ಜಿಗಳು ತಿರಸ್ಕೃತಗೊಂಡಿವೆ. 1667 ಅರ್ಜಿಗಳು ಬಾಕಿ ಉಳಿದಿವೆ.

ಫಾರ್ಮ್ 57ರಲ್ಲಿ 9793 ಅರ್ಜಿಗಳು ಸಲ್ಲಿಕೆಯಾಗಿತ್ತು. ಇದರಲ್ಲಿ ಅನರ್ಹ ಅರ್ಜಿಗಳನ್ನು ತಿರಸ್ಕರಿಸಲು ಜಿಲ್ಲಾಧಿಕಾರಿಗೆ 8970 ಅರ್ಜಿಗಳನ್ನು ಕಳುಹಿಸಲಾಗಿದೆ. 94ಸಿಸಿ ಅಡಿ ಮನೆ ಮಂಜೂರಿಗೆ 443 ಅರ್ಜಿಗಳು ಬಂದಿದ್ದವು. ಇದರಲ್ಲಿ 29 ಮಂಜೂರಾಗಿದೆ. 414 ತಿರಸ್ಕೃತಗೊಂಡಿವೆ. 94 ಸಿ ಅಡಿ 11,432 ಅರ್ಜಿಗಳು ಬಂದಿದ್ದು, 1422 ಜನರಿಗೆ ಮಂಜೂರಾಗಿದೆ. ಉಳಿದ 9020 ಅರ್ಜಿಗಳು ತಿರಸ್ಕೃತಗೊಂಡಿವೆ. 990 ಅರ್ಜಿಗಳು ಪರಿಶೀಲನೆಯಲ್ಲಿವೆ ಎಂದು ತಹಸೀಲ್ದಾರ್ ತನುಜಾ ಟಿ. ಸವದತ್ತಿ ಸಭೆಗೆ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net