ಒತ್ತುವರಿ ತೆರವುಗೊಳಿಸಿದ ಸ್ಥಳಕ್ಕೆ ಶ್ರೇಯಸ್ ಪಟೇಲ್ ಭೇಟಿ ಪರಿಶೀಲನೆ

ಒತ್ತುವರಿ ತೆರವುಗೊಳಿಸಿದ ಸ್ಥಳಕ್ಕೆ ಶ್ರೇಯಸ್ ಪಟೇಲ್ ಭೇಟಿ ಪರಿಶೀಲನೆ
Published on

ಹಾಸನ: ನಗರದ ತಣ್ಣೀರುಹಳ್ಳದಲ್ಲಿ ನಗರಸಭೆಯಿಂದ ಏಕಾಏಕಿ ಒತ್ತುವರಿ ತೆರವುಗೊಳಿಸಿ ಹಾನಿಯುಂಟು ಮಾಡಿದ್ದ ಸ್ಥಳಕ್ಕೆ ಗುರುವಾರ ಸಂಸದ ಶ್ರೇಯಸ್ ಪಟೇಲ್ ಭೇಟಿ ನೀಡಿ ಪರಿಶೀಲನೆ ನಡೆಸಿ ನಷ್ಟಕ್ಕೆ ವ್ಯಾಪಾರಿಗಳ ಸಮಸ್ಯೆ ಆಲಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದರು, ಮಾನವೀಯತೆ ದೃಷ್ಟಿಯಿಂದ ನೋಟೀಸ್ ನೀಡಿ ಕ್ರಮಕೈಗೊಳ್ಳದೆ ತಪ್ಪು ಮಾಡಿದ್ದಾರೆ. ಮುಂದೆ ಈ ರೀತಿಯ ತಪ್ಪುಗಳು ಆಗದಂತೆ ನೋಡಿಕೊಳ್ಳುತ್ತೇನೆ. ಒತ್ತುವರಿ ತೆರವು ಕಾರ್ಯಾಚರಣೆಯನ್ನು ಬುಧವಾರವೇ ಸ್ಥಗಿತ ಮಾಡಲಾಗಿದೆ. ಈ ಬಗ್ಗೆ ಯಾವುದೇ ಅನುಮಾನ ಬೇಡ. ಮುಂದೆ ಯಥಾ ಸ್ಥಿತಿ ಮುಂದುವರೆಯುತ್ತದೆ ಎಂದು ಭರವಸೆ ನೀಡಿದರು.
ನಗರಸಭೆಯರು ತೆರವುಗೊಳಿಸುವುದು ತಪ್ಪಲ್ಲ. ಆದರೆ, ಮಾನವೀಯತೆ ದೃಷ್ಟಿಯಿಂದ ಒತ್ತುವರಿದಾರರಿಗೆ ನೋಟೀಸ್ ನೀಡಿ ತೆರವು ಕಾರ್ಯಾಚರಣೆ ನಡೆಸಬೇಕಿತ್ತು. ಆ ಕೆಲಸ ಮಾಡದೆ ತಪ್ಪು ಮಾಡಿದ್ದಾರೆ. ಈಗ ಆಗಿರುವ ನಷ್ಟಕ್ಕೆ ನಾನೇ ಜವಾಬ್ದಾರಿ ಹೊತ್ತಿಹೊಂಡು ಕ್ಷಮೆ ಯಾಚಿಸುತ್ತೇನೆ ಎಂದು ಅವರು ತಿಳಿಸಿದರು.
ನಗರಸಭೆ ಅಧಿಕಾರಿಗಳು ನಡೆಸಿದ ಒತ್ತುವರಿ ತೆರವಿನಿಂದ ಬೀದಿಬದಿ ವ್ಯಾಪಾರಿಗಳಿಗೆ ತೊಂದರೆಯಾಗಿದೆ. ಕಾನೂನು ಬದ್ಧವಾಗಿ ಒತ್ತುವರಿ ತೆರವುಗೊಳಿಸಬೇಕು. ಆದರೆ ಏಕಾಏಕಿ ತೆರವುಗೊಳಿಸುವ ಮೂಲಕ ತಪ್ಪು ಮಾಡಿದ್ದಾರೆ. ನಾನು ಈ ಬಗ್ಗೆ ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿ ಕಾರ್ಯಾಚರಣೆ ಸ್ಥಗಿತಗೊಳಿಸುವಂತೆ ತಿಳಿಸಿ, ಮುಂದಿನ ದಿನಗಳಲ್ಲಿ ಬಡವರಿಗೆ ತೊಂದರೆಯಾಗದಂತೆ ಕ್ರಮ ತೆಗೆದುಕೊಳ್ಳುವಂತೆ ಹೇಳಿದ್ದೇನೆ ಎಂದರು.
ಒತ್ತುವರಿ ತೆರವಿನಿಂದ ನಷ್ಟಕ್ಕೆ ಪರಿಹಾರ ನೀಡಲು ನಗರಸಭೆ ಅಧಿಕಾರಿಗಳು ಸಭೆ ನಡೆಸಿ ಇಷ್ಟು ಒತ್ತುವರಿಯಾಗಿದೆ ಎಂದು ನಕ್ಷೆಯಲ್ಲಿ ನೋಡಿಕೊಂಡು ನಿಜವಾಗಿಯೂ ಹಾನಿಯುಂಟಾಗಿದ್ದರೆ ನಗರಸಭೆಯಿಂದಲೇ ಪರಿಹಾರ ನೀಡುವಂತೆ ತಿಳಿಸಿದ್ದೇನೆ. ಸಾರ್ವಜನಿಕ ಪ್ರದೇಶವಾಗಿದ್ದರೆ ಪರಿಹಾರ ನೀಡಲು ಬರುವುದಿಲ್ಲ.ಬುಧವಾರ ಹಾಸನಾಂಬ ಉತ್ಸವಕ್ಕೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಅವರನ್ನು ಆಹ್ವಾನಿಸಲು ಬೆಂಗಳೂರಿಗೆ ತೆರಳಿದ್ದರಿಂದ ಸ್ಥಳಕ್ಕೆ ಆಗಮಿಸಲು ಸಾಧ್ಯವಾಗಿರಲಿಲ್ಲ. ಇನ್ಮುಂದೆ ತೆರವು ಕಾರ್ಯಾಚರಣೆ ಬಗ್ಗೆ ಯಾವುದೇ ಗೊಂದಲ ಇರುವುದಿಲ್ಲ, ನಗರದ ಜನತೆ ಸಹಕಾರ ನೀಡುವಂತೆ ಮನವಿ ಮಾಡಿದರು.

ಪರಿಹಾರ ಕೊಡಿಸುವಂತೆ ಮನವಿ:
ಒತ್ತುವರಿ ತೆರವು ಮಾಡಿದ್ದ ಸ್ಥಳಕ್ಕೆ ಸಂಸದ ಶ್ರೇಯಸ್ ಪಟೇಲ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿ ಅಂಗಡಿ ಮಾಲಿಕರ ಸಮಸ್ಯೆಗಳನ್ನು ಆಲಿಸಿದರು. ಈ ವೇಳೆ ಯಾವುದೇ ಮುನ್ಸೂಚನೆ ಅಥವಾ ನೋಟೀಸ್ ನೀಡದೆ ನಗರಸಭೆ ಅಧಿಕಾರಿ, ಸಿಬ್ಬಂದಿ ಏಕಾಏಕಿ ಅಂಗಡಿಗಳನ್ನು ತೆರವು ಮಾಡಿದ್ದಾರೆ ಎಂದು ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸಿ ಆಗಿರುವ ನಷ್ಟಕ್ಕೆ ಪರಿಹಾರ ಕೊಡಿಸುವಂತೆ ಮನವಿ ಮಾಡಿದರು.
ಸಣ್ಣಪುಟ್ಟ ವ್ಯಾಪಾರಿಗಳಿಗೆ ಸಾಕಷ್ಟು ನಷ್ಟವಾಗಿದೆ. ನೋಟೀಸ್ ನೀಡಿ ಕಾಲಾವಕಾಶ ನೀಡಿದ್ದರೆ ನಾವೇ ತೆರವು ಮಾಡಿಕೊಳ್ಳುತ್ತಿದ್ದೇವು. ಆದರೆ, ಏಕಾಏಕಿ ಬಂದು ಅಂಗಡಿಗಳನ್ನು ಒಡೆದು ಹಾಕಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.ಇದೇ ವೇಳೆ ಬಡ ಬೀದಿ ಬದಿ ವ್ಯಾಪಾರಸ್ಥ ಮಹಿಳೆಗೆ ಸಂಸದರು ಆರ್ಥಿಕ ಸಹಾಯ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net