

ಹಾಸನ: ಆಲೂರು ತಾಲೂಕು ಆನಗಳಲೆ ಗ್ರಾಮದಲ್ಲಿ ಅಕ್ರಮ ಭೂ ಒತ್ತುವರಿ ತೆರವುಗೊಳಿಸಿ, ನಿರಾಶ್ರಿತ ಪರಿಶಿಷ್ಟ ಜಾತಿಯವರಿಗೆ ನಿವೇಶನ ಒದಗಿಸುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಕೆಂಚಮ್ಮನ ಹೊಸಕೋಟೆ ಹೋಬಳಿ ಆನಗಳಲೆ ಗ್ರಾಮದಲ್ಲಿ 65ಕ್ಕೂ ಹೆಚ್ಚು ದಲಿತ ಕುಟುಂಬಗಳು ಹಲವು ವರ್ಷಗಳಿಂದ ವಾಸವಾಗಿದ್ದು, ಆಶ್ರಯ ಯೋಜನೆಯಡಿ ನಿವೇಶನ, ಹಕ್ಕುಪತ್ರ ನೀಡುವಂತೆ ಒತ್ತಾಯಿಸಿಕೊಂಡು ಬಂದರೂ ಇರುವರೆಗೂ ಸಂಬಂಧಪಟ್ಟ ಯಾರೊಬ್ಬರು ಗಮನ ಹರಿಸಿಲ್ಲ. ಇದರಿಂದ ಮನೆ ಕಟ್ಟಿಕೊಳ್ಳಲು ಗ್ರಾಮಸ್ಥರು ಪರದಾಡುವಂತಾಗಿದೆ ಎಂದು ದೂರಿದರು.
ಗ್ರಾಮದ ಸರ್ವೆ ನಂ.35 ಹಾಗು 46 ರಲ್ಲಿ ಸರ್ಕಾರಿ ಬೀಳು ಜಾಗ 5 ಎಕರೆ ಹಾಗು ಗ್ರಾಮ ಠಾಣಾ ಜಾಗ 5 ಎಕರೆಯಷ್ಟು ಭೂಮಿ ಇದೆ. ಇದನ್ನು ಕೆಲವು ಬಲಾಢ್ಯ ವ್ಯಕ್ತಿಗಳು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ. ಅದನ್ನು ತೆರವುಗೊಳಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಜಿಲ್ಲಾಡಳಿತ ಕ್ರಮ ತೆಗೆದುಕೊಂಡಿಲ್ಲ. ಕೂಡಲೇ ಈ ಬಗ್ಗೆ ಗಮನ ಹರಿಸಿ ನಿರಾಶ್ರಿತ ದಲಿತ ಕುಟುಂಬಗಳಿಗೆ ಆಶ್ರಯ ಯೋಜನೆಯಡಿ ಹಕ್ಕುಪತ್ರದೊಂದಿಗೆ ನಿವೇಶನ ಹಂಚಿಕೆ ಮಾಡಕು ಕ್ರಮ ವಹಿಸುವಂತೆ ಒತ್ತಾಯಿಸಿ ಮನವಿಯಲ್ಲಿ ಜಿಲ್ಲಾಡಳಿತಕ್ಕೆ ಸಲ್ಲಿಸಲಾಯಿತು.
ದಸಂಸ ರಾಜ್ಯ ಸಂಚಾಲಕ ಎಂ.ಸೋಮಶೇಖರ್, ಜಿಲ್ಲಾ ಸಂಚಾಲಕ ವಳಲಹಳ್ಳಿ ವೀರೇಶ್, ಸಂದೇಶ್, ಚಿಕ್ಕಣ್ಣ ಆಲೂರು ಗ್ರಾಮಸ್ಥರು ಹಾಜರಿದ್ದರು.