ಒತ್ತುವರಿ ತೆರವು ಮಾಡಿ, ಇ-ಸ್ವತ್ತು ಕೊಡಿಸಿ

10 HANUR 2
??????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????
Published on

ಹನೂರು: ಒತ್ತುವರಿ ಜಾಗವನ್ನು ತೆರವುಗೊಳಿಸುವಲ್ಲಿ ನಿರ್ಲಕ್ಷ್ಯ, ಇ-ಸ್ವತ್ತು ನೀಡುವಲ್ಲಿ ವಿಳಂಬವಾಗುತ್ತಿದೆ. ಸಮರ್ಪಕವಾಗಿ ಕೆಲಸ ಕಾರ್ಯಗಳು ಆಗುತ್ತಿಲ್ಲ. ಇದರಿಂದ ಕಚೇರಿಗೆ ಅಲೆಯಬೇಕಿದ್ದು ತುಂಬಾ ತೊಂದರೆ ಅನುಭವಿಸುತ್ತಿದ್ದೇವೆ.

ಇದು ಪಟ್ಟಣದ ಲೋಕೋಪಯೋಗಿ ಇಲಾಖೆಯ ಅತಿಥಿ ಗೃಹದ ಸಭಾಂಗಣದಲ್ಲಿ ಬುಧವಾರ ಲೋಕಾಯುಕ್ತ ಇಲಾಖೆಯಿಂದ ಆಯೋಜಿಸಿದ್ದ ಕುಂದುಕೊರತೆ, ದೂರು ಸ್ವೀಕಾರ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಕೇಳಿ ಬಂದ ಪ್ರಮುಖ ದೂರುಗಳು.

ಸಭೆಯಲ್ಲಿ ಹನೂರಿನ ರಾಧಾ ಮಾತನಾಡಿ, ಚೆಲುವರಾಯಸ್ವಾಮಿ ದೇಗುಲದ ಸಮೀಪದಲ್ಲಿ ಸುಮಾರು 50 ವರ್ಷದಿಂದಲೂ ವಾಸಿಸುತ್ತಿದ್ದೇನೆ. ನೀರು, ವಿದ್ಯುತ್ ಹಾಗೂ ಕಂದಾಯ ತೆರಿಗೆಯನ್ನು ಪಾವತಿಸಲಾಗಿದೆ.ಜಾಗಕ್ಕೆ ಇ-ಸ್ವತ್ತು ನೀಡುವಂತೆ ಪಟ್ಟಣ ಪಂಚಾಯಿತಿಗೆ ಅರ್ಜಿ ಸಲ್ಲಿಸಿ 3 ವರ್ಷವಾಗಿದೆ. ಅಧಿಕಾರಿಗಳು ಇ-ಸ್ವತ್ತು ನೀಡುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ. ಆದ್ದರಿಂದ ಇ ಸ್ವತ್ತು ಮಾಡಿಸಿಕೊಡುವಂತೆ ಮನವಿ ಮಾಡಿದರು. ಈ ಬಗ್ಗೆ ಪಪಂ ಅಧಿಕಾರಿಗಳಿಂದ ಮಾಹಿತಿ ಪಡೆದ ಗಜೇಂದ್ರ ಪ್ರಸಾದ್ ಅವರು ಸ್ಥಳಕ್ಕೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿ ಇ-ಸ್ವತ್ತು ನೀಡಲು ಕ್ರಮವಹಿಸಬೇಕು ಎಂದು ಸೂಚಿಸಿದರು.

ಒತ್ತುವರಿ ತೆರವುಗೊಳಿಸಿ: ಲೊಕ್ಕನಹಳ್ಳಿ ಗ್ರಾಮದ ವಿಜಯಕುಮಾರ್ ಮಾತನಾಡಿ, ಗ್ರಾಮದ ಚಿಕ್ಕಕೆರೆಯನ್ನು ಒತ್ತುವರಿ ಮಾಡಿಕೊಂಡಿದ್ದು, ಜಮೀನಿಗೆ ತೆರಳುವ ರೈತರು ಓಡಾಡಲು ತುಂಬಾ ಸಮಸ್ಯೆ ಎದುರಿಸುವಂತಾಗಿದೆ. ಒತ್ತುವರಿ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿ 5 ವರ್ಷವಾಗಿದೆ. ಆದರೆ, ಯಾವುದೇ ಕ್ರಮವಾಗಿಲ್ಲ ಎಂದು ದೂರಿದರು.

ಇದಕ್ಕೆ ತಹಸೀಲ್ದಾರ್ ಕೆ.ಎನ್ ಚೈತ್ರಾ ಪ್ರತಿಕ್ರಿಯಿಸಿ, ಒತ್ತುವರಿ ಸಂಬಂಧ ಸರ್ವೇ ನಡೆಸಿ ಈಗಾಗಲೇ ಜಾಗವನ್ನು ಗ್ರಾಪಂಗೆ ಹಸ್ತಾಂತರಿಸಲಾಗಿದೆ. ನಿರ್ವಹಣೆ ಮಾಡಬೇಕಾದದು ಪಂಚಾಯಿತಿ ಅಧಿಕಾರಿಗಳ ಕರ್ತವ್ಯ ಎಂದು ತಿಳಿಸಿದರು. ಡಿವೈಎಸ್ಪಿ ಮಾತನಾಡಿ, ಒತ್ತುವರಿಯಾಗಿರುವ ಜಾಗವನ್ನು ತಿಂಗಳೊಳಗೆ ತೆರವುಗೊಳಿಸುವಂತೆ ಪಿಡಿಒ ರಘುನಾಥ್‌ಗೆ ಸೂಚಿಸಿದರು.

ಸಭೆಯಲ್ಲಿ ಮಂಗಲ ಗ್ರಾಮದ ಬಸವಮ್ಮ ಎಂಬುವರು ಸರ್ವೇ ನಡೆಸಿ ಜಮೀನಿನ ಗಡಿ ಗುರ್ತಿಸುವಂತೆ ಮನವಿ ಮಾಡಿದರೆ, ದೊಮ್ಮನಗದ್ದೆಯ ಸತ್ಯರಾಜು ಅವರು ಮಾತನಾಡಿ, ಅಭಿಲೇಖಾಲಯ ಕಚೇರಿಯಲ್ಲಿ ಅಗತ್ಯ ದಾಖಲೆಗಳನ್ನು ನೀಡುವಲ್ಲಿ ವಿಳಂಬವಾಗುತ್ತಿದೆ. ಕಚೇರಿಯಲ್ಲಿ ಜನರಿಗೆ ಸಮರ್ಪಕ ಮಾಹಿತಿ ನೀಡುತ್ತಿಲ್ಲ. ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ ಎಂದು ಆರೋಪಿಸಿದರು. ಮಣಗಳ್ಳಿಯ ರಾಜು ಅವರು ಜಮೀನಿನಲ್ಲಿರುವ ತೇಗದ ಮರಗಳ ಬಗ್ಗೆ ಸರ್ವೇ ನಡೆಸಿ ವರದಿ ನೀಡುವಂತೆ ಮನವಿ ಮಾಡಿದರು. ಸಮಸ್ಯೆ ಆಲಿಸಿದ ಗಜೇಂದ್ರ ಪ್ರಸಾದ್ ಸಂಬಂಧಪಟ್ಟ ಅಧಿಕಾರಿಗಳಿಗೆ ಅಗತ್ಯ ಕ್ರಮವಹಿಸಿ ಬಗೆಹರಿಸುವಂತೆ ಸೂಚಿಸಿದರು.

ಇದಕ್ಕೂ ಮುನ್ನ ಗಜೇಂದ್ರ ಪ್ರಸಾದ್ ಮಾತನಾಡಿ, ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ವಿಳಂಬ ಧೋರಣೆಯಿಂದ ಕಚೇರಿಗಳಲ್ಲಿ ಸರಿಯಾಗಿ ಕೆಲಸ-ಕಾರ್ಯಗಳು ಆಗುತ್ತಿಲ್ಲ. ಇದು ಹೊಸದಾಗಿ ರಚನೆಯಾಗಿರುವ ಹನೂರು ತಾಲೂಕಿನಲ್ಲಿ ಹೆಚ್ಚಾಗಿದೆ. ಇದರಿಂದ ಸಾರ್ವಜನಿಕರು ದೂರು ನೀಡಬೇಕಾದ ಪರಿಸ್ಥಿತಿ ಇದೆ. ಆದ್ದರಿಂದ ಈ ಬಗ್ಗೆ ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿಕೊಂಡು ವಿವಿಧ ಇಲಾಖೆಯೊಂದಿಗೆ ಸಮನ್ವಯತೆ ಸಾಧಿಸಿ ಸಮಸ್ಯೆಗಳನ್ನು ಬಗೆಹರಿಸುವುದರ ಮೂಲಕ ಜನರಿಗೆ ಉತ್ತಮ ಸೇವೆ ಒದಗಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಒಟ್ಟು 17 ಅರ್ಜಿಗಳು ಸ್ವೀಕೃತವಾದವು. ಲೋಕಾಯುಕ್ತ ಡಿವೈಎಸ್ಪಿ ಗಜೇಂದ್ರ ಪ್ರಸಾದ್ ಸಾರ್ವಜನಿಕರಿಂದ ಸಮಸ್ಯೆಗಳನ್ನು ಆಲಿಸಿದರು. ಇನ್‌ಸ್ಪೆಕ್ಟರ್‌ಗಳಾದ ಲೋಹಿತ್‌ಕುಮಾರ್, ಗಿರೀಶ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ರಂಗಸ್ವಾಮಿ, ಭೂ ಮಾಪನ ಇಲಾಖೆ ಮೇಲ್ವಿಚಾರಕಿ ಚೇತನ್, ಸೆಸ್ಕ್ ಎಇಇ ರಂಗಸ್ವಾಮಿ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net