

ತರೀಕೆರೆ: ಕೆರೆ, ಸ್ಮಶಾನ ಜಾಗ ಅತಿಕ್ರಮಿಸಿದರೆ ಮುಲಾಜಿಲ್ಲದೆ ತೆರವುಗೊಳಿಸಲಾಗುವುದು. ಜತೆಗೆ ಒತ್ತುವರಿದಾರರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಎಚ್ಚರಿಕೆ ನೀಡಿದರು. ಪಟ್ಟಣದ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, ಕೆರೆ ಒತ್ತುವರಿ ಪ್ರದೇಶ ಗುರುತಿಸಲಾಗಿದ್ದು ಒತ್ತುವರಿ ತೆರವುಗೊಳಿಸಲಾಗುವುದು. ನ್ಯಾಯಾಲಯ ಇದಕ್ಕೆ ಪೂರಕವಾದ ಆದೇಶ ನೀಡಿದ್ದು ಕಾನೂನು ರೀತಿಯಲ್ಲಿ ಎಲ್ಲ ರೀತಿಯ ಕ್ರಮ ಜರುಗಲಿದೆ ಎಂದರು.
ಶೃಂಗೇರಿ, ಕೊಪ್ಪ ಇನ್ನಿತರ ತಾಲೂಕಿನಲ್ಲಿ ಅಕ್ರಮವಾಗಿ ಮಂಜೂರು ಮಾಡಿದ್ದ 200ಕ್ಕೂ ಹೆಚ್ಚು ಸಾಗುವಳಿ ಚೀಟಿ ವಜಾಗೊಳಿಸಲು ಆದೇಶಿಸಲಾಗಿದೆ. ಕಾನೂನಿನ ಚೌಕಟ್ಟಿನ ಒಳಗೆ ಬಗೆ ಹರಿಸಬಹುದಾದ ಸಮಸ್ಯೆಗಳಿಗೆ ಅಧಿಕಾರಿಗಳೊಂದಿಗೆ ರ್ಚಚಿಸಿ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು. ಜಿಲ್ಲೆಯಲ್ಲಿ 1.43 ಲಕ್ಷ ಹೆಕ್ಟೇರ್ ಪ್ರದೇಶವನ್ನು ಡೀಮ್್ಡ ಅರಣ್ಯವೆಂದು ಘೊಷಿಸಲಾಗಿತ್ತು. ಈ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಿ ನ್ಯಾಯಾಲಯಕ್ಕೆ ಅರಣ್ಯ ಭೂಮಿಯ ಬಗ್ಗೆ ವಿವರ ನೀಡಿದ್ದರಿಂದ ಜಿಲ್ಲೆಯಲ್ಲಿ 52,900 ಹೆಕ್ಟೇರ್ ಪ್ರದೇಶವನ್ನು ಡೀಮ್್ಡ ಫಾರೆಸ್ಟ್ ಎಂದು ಪರಿಗಣಿಸಲಾಗಿದೆ ಎಂದು ಮಾಹಿತಿ ನೀಡಿದರು.
ಪಟ್ಟಣದಲ್ಲಿ ಹಲವು ದಶಕಗಳಿಂದ ಗೌರಿ-ಗಣೇಶ ಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸಲಾಗುತ್ತಿದೆ. ಪಟ್ಟಣದ ವಿವಿಧೆಡೆ ಪ್ರತಿಷ್ಠಾಪಿಸುವ ಗಣೇಶನ ಮೂರ್ತಿಗಳನ್ನು ಐತಿಹಾಸಿಕ ಹಿನ್ನೆಲೆಯುಳ್ಳ ಚಿಕ್ಕೆರೆಯಲ್ಲಿ ವಿಸರ್ಜಿಸಲಾಗುತ್ತದೆ. ಈ ವರ್ಷ ಗಣಪತಿ ವಿಸರ್ಜನೆಗೆ ಶ್ರೀ ಪ್ರಸನ್ನ ರಾಮೇಶ್ವರ ದೇಗುಲ ಆವರಣದಲ್ಲಿರುವ ಕಲ್ಯಾಣಿಯನ್ನು ಗುರುತಿಸಿರುವುದು ಗೊಂದಲ ಉಂಟುಮಾಡಿದೆ. ಗಣೇಶ ಮೂರ್ತಿ ವಿಸರ್ಜನೆಗೆ ನಿಗದಿಪಡಿಸಿರುವ ಕಲ್ಯಾಣಿ ಕಿರಿದಾಗಿದ್ದು, ಎಲ್ಲ ಮೂರ್ತಿಗಳು ಕಲ್ಯಾಣಿಯ ನೀರಿನಲ್ಲಿ ಮುಳುಗುವುದೇ ಅನುಮಾನ. ಹೀಗಾಗಿ ಜಿಲ್ಲಾಡಳಿತ ಚಿಕ್ಕೆರೆಯಲ್ಲಿಯೇ ಮೂರ್ತಿ ವಿಸರ್ಜನೆಗೆ ಅವಕಾಶ ನೀಡಬೇಕು ಎಂದು ಎಂಎಡಿಬಿ ಮಾಜಿ ಅಧ್ಯಕ್ಷ ಎನ್.ಮಂಜುನಾಥ್, ಜಿಪಂ ಮಾಜಿ ಸದಸ್ಯ ಕೆ.ಎಚ್.ಮಹೇಂದ್ರ, ಪುರಸಭೆ ಸದಸ್ಯ ಟಿ.ಜಿ.ಅಶೋಕ್ಕುಮಾರ್ ಡಿಸಿ ಅವರನ್ನು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಸಿ, ಜಿಲ್ಲಾಡಳಿತಕ್ಕೂ ಹಬ್ಬದ ಆಚರಣೆ ಬಗ್ಗೆ ಗೌರವ, ಶ್ರದ್ಧೆ ಮತ್ತು ಭಕ್ತಿ ಇದೆ. ಹಸಿರು ನ್ಯಾಯ ಪೀಠ, ಮಾಲಿನ್ಯ ನಿಯಂತ್ರಣ ಮಂಡಳಿಯು ಕೆರೆ ಕಟ್ಟೆ, ಹರಿಯುವ ಹಳ್ಳಕೊಳ್ಳಗಳಲ್ಲಿ ಗಣಪತಿ ವಿಸರ್ಜಿಸಿದಲ್ಲಿ ನೀರು ಮಲಿನಗೊಳ್ಳುತ್ತದೆ ಎಂಬ ಕಾರಣದಿಂದ ಇಂಥ ಜಲಮೂಲಗಳಲ್ಲಿ ಮೂರ್ತಿ ವಿಸರ್ಜನೆಗೆ ಅವಕಾಶ ನೀಡಿಲ್ಲ. ಕಾನೂನು ಉಲ್ಲಂಘಿಸದಂತೆ ಸೂಕ್ತ ಕ್ರಮಕೈಗೊಳ್ಳುವ ಬಗ್ಗೆ ಚಿಂತಿಸಲಾಗುವುದು ಎಂದರು. ಮನೆಗಳಲ್ಲಿ ಪ್ರತಿಷ್ಠಾಪಿಸುವ ಗಣಪತಿಗಳನ್ನು ವಿಸರ್ಜಿಸಲು ಮೊಬೈಲ್ ಟ್ಯಾಂಕರ್ಗಳನ್ನು ಅಳವಡಿಸುವಂತೆ ಮುಖ್ಯಾಧಿಕಾರಿ ಎಚ್.ಮಹಾಂತೇಶ್ ಅವರಿಗೆ ಸೂಚಿಸಿದರು.