ಮೈಸೂರು: ಮೈಸೂರು ತಾಲೂಕಿನ ಇಲವಾಲ ಹೋಬಳಿ ಆನಂದೂರು ಗ್ರಾಮದಲ್ಲಿ ಶನಿವಾರ ಬೆಳಗ್ಗೆ ತೆರವು ಕಾರ್ಯಾಚರಣೆ ನಡೆಸಿ ಸರ್ಕಾರಿ ಭೂಮಿ ವಶಕ್ಕೆ ಪಡೆಯಲಾಯಿತು.
ಗ್ರಾಮದ ಸರ್ವೇ ನಂ 6ರಲ್ಲಿರುವ ಜಾಗ ಮೂಲತಃ ಸರ್ಕಾರಿ ಗೋಮಾಳವಾಗಿದ್ದು, ಈ ಪೈಕಿ 1996ರಲ್ಲಿ ಆಶ್ರಯ ಯೋಜನೆಗಾಗಿ 4 ಎಕರೆ ಮಂಜೂರಾಗಿತ್ತು. ಸದರಿ ಜಮೀನಿನಲ್ಲಿ ಆನಂದೂರು ಗ್ರಾಮದ ಗವಿರಂಗೇಗೌಡ ಹಾಗೂ ಇತರರು 20 ಗುಂಟೆ ಜಮೀನು ಒತ್ತುವರಿ ಮಾಡಿಕೊಂಡಿದ್ದರು. ಈ ಜಾಗದಲ್ಲಿ ಹಸು ಕೊಟ್ಟಿಗೆ ನಿರ್ಮಿಸಿಕೊಂಡಿದ್ದರು.
ಈ ಹಿನ್ನೆಲೆಯಲ್ಲಿ ಮೈಸೂರು ತಹಸೀಲ್ದಾರ್ ಟಿ.ಎನ್.ಗಿರೀಶ್ ನೇತೃತ್ವದಲ್ಲಿ ಮಳೆಯಲ್ಲೇ ತೆರವು ಕಾರ್ಯಾಚರಣೆ ನಡೆಸಿ ಸರ್ಕಾರಿ ಜಾಗವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ತಾಲೂಕು ಪಂಚಾಯಿತಿ ಇ.ಒ.ಗಿರೀಶ್, ಭೂ ದಾಖಲೆಗಳ ಸಹಾಯಕ ನಿರ್ದೇಶಕ ಚಿಕ್ಕಣ್ಣ, ತಾಲೂಕು ಸರ್ವೇಯರ್ ವೆಂಕಟೇಶ್, ಉಪ ತಹಸೀಲ್ದಾರ್ ಕುಬೇರ್, ರಾಜಸ್ವ ನಿರೀಕ್ಷಕ ಶಿವಕುಮಾರ್ ಮತ್ತಿತರರಿದ್ದರು.