ಒತ್ತುವರಿ ತೆರವಿಗೆ ರ್ನಿಣಯ: ಹುಳಿಯಾರು ಪಟ್ಟಣ ಪಂಚಾಯಿತಿಯಲ್ಲಿ ವಿಶೇಷ ತುರ್ತು ಸಭೆ

1
Published on

ಹುಳಿಯಾರು: ಹುಳಿಯಾರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಸರ್ವೇ ನಂಬರ್​ 174ರ ಒತ್ತುವರಿ ತೆರವಿಗೆ ಪಪಂ ಅಧ್ಯಕ್ಷ ಎಚ್​.ಎನ್​.ಕಿರಣ್​ಕುಮಾರ್​ ಅಧ್ಯಕ್ಷತೆಯಲ್ಲಿ ಗುರುವಾರ ಆಯೋಜಿಸಿದ್ದ ವಿಶೇಷ ತುರ್ತು ಸಭೆಯಲ್ಲಿ ರ್ನಿಣಯ ಕೈಗೊಳ್ಳಲಾಯಿತು.

ಪೊಲೀಸ್​ ಠಾಣೆ ಮುಂಭಾಗ ಎಂಪಿಎಸ್​ ಶಾಲೆ ಆವರಣದ ಮೂಲೆಯಲ್ಲಿ ಸಾರ್ವಜನಿಕ ಶೌಚಗೃಹ ನಿರ್ಮಿಸಲು ಚಿಂತನೆ ನಡೆಸಿರುವುದಾಗಿ ಪಪಂ ಮುಖ್ಯಾಧಿಕಾರಿ ಡಿ.ಭೂತಪ್ಪ ತಿಳಿಸಿದಾಗ ಇದಕ್ಕೆ ಸದಸ್ಯ ಸಿದ್ದಿಕ್​ ಅವರು ಶಾಲಾ ಆವರಣ ಬಿಟ್ಟು ಸ.ನಂ.174ರಲ್ಲಿ ಒತ್ತುವರಿ ತೆರವು ಮಾಡಿ ಶೌಚಗೃಹ ನಿರ್ಮಿಸಿ ಎಂದರು.

ಇದಕ್ಕೆ ಮಂಜುನಾಯ್ಕ ಮತ್ತು ದಸ್ತುಗಿರಿಸಾಬ್​ ಅವರು ಈಗಾಗಲೇ ಈ ಸ.ನಂಬರ್​ನಲ್ಲಿ ಅನೇಕರು ವಾಣಿಜ್ಯ ಮಳಿಗೆ ನಿರ್ಮಿಸಿ ವ್ಯಾಪಾರ ವಹಿವಾಟು ಮಾಡುತ್ತಿದ್ದು, ಅವರನ್ನು ತೆರವು ಮಾಡಿ ಶೌಚಗೃಹ ನಿರ್ಮಿಸುವುದು ಕಷ್ಟವಾಗುತ್ತದೆ ಎಂದರು.

ಇದರಿಂದ ಆಕ್ರೋಶಗೊಂಡ ಸಿದ್ಧಿಕ್​, ಜನ ನಮ್ಮನ್ನು ಗೆಲ್ಲಿಸಿ ಕಳುಹಿಸಿರುವುದು ಅನ್ಯಾಯ, ಅಕ್ರಮ ತಡೆಯಲೆಂದು. ನಾವೇ ಮೌನವಹಿಸಿದರೆ ಮುಂದಿನ ಪೀಳಿಗೆಗೆ ಸರ್ಕಾರಿ ಜಾಗ ಉಳಿಸುವವರಾರು ಎಂದು ಪ್ರಶ್ನಿಸಿದರು. ಅಲ್ಲದೆ ಒತ್ತುವರಿ ತೆರವು ಮಾಡುವ ರ್ನಿಣಯ ಪಾಸ್​ ಮಾಡಿಸುವಲ್ಲಿ ಸಫಲರಾದರು.

ನೀರಿನ ಕಂದಾಯಕ್ಕೆ ವಿನಾಯಿತಿ ಕೊಡಿ: ಪಟ್ಟಣದಲ್ಲಿ ರಸ್ತೆ ಕಾಮಗಾರಿ ಮಾಡುವ ಸಲುವಾಗಿ ಹಾಲಿ ಪೈಪ್​ಲೈನ್​ ತೆರವು ಮಾಡಿದ ಪರಿಣಾಮ ಅನೇಕ ಮನೆಗಳಿಗೆ ಸಮರ್ಪಕವಾಗಿ ನೀರು ಪೂರೈಕೆ ಮಾಡಲಾಗಿಲ್ಲ. ಅಲ್ಲದೆ ನಿರ್ವಹಣೆ ಸಮಸ್ಯೆಯಿಂದ ಪಟ್ಟಣದಲ್ಲಿ ವಾರಕ್ಕೊಮ್ಮೆ ನೀರು ಬಂದರೆ ಅದೇ ಪುಣ್ಯ ಎನ್ನುವಂತ್ತಾಗಿದೆ. ಸಮರ್ಪಕವಾಗಿ ನೀರು ಪೂರೈಸದೆ ನೀರಿನ ಕಂದಾಯ ಕಟ್ಟಿ ಎನ್ನುವುದು ಸರಿಯಲ್ಲ. ಹಾಗಾಗಿ 6 ತಿಂಗಳಿಂದ 1 ವರ್ಷ ಕಂದಾಯಕ್ಕೆ ವಿನಾಯಿತಿ ಕೊಡುವಂತೆ ಸದಸ್ಯರಾದ ಎಸ್​ಆರ್​ಎಸ್​ ದಯಾನಂದ್​, ಹೇಮಂತ್​, ದಸ್ತುಗಿರಿ ಸಾಬ್​ ಒತ್ತಾಯಿಸಿದರು. ಮುಖ್ಯಾಧಿಕಾರಿಗಳು ವಿನಾಯಿತಿ ನೀಡಲು ಅವಕಾಶವಿಲ್ಲ ಎಂದರಾದರೂ ಸದಸ್ಯರು ಜಿಲ್ಲಾಧಿಕಾರಿಗಳಿಗೆ ಪತ್ರದ ಮೂಲಕ ವಾಸ್ತವಾಂಶ ತಿಳಿಸಿ ವಿನಾಯಿತಿಗೆ ಅವಕಾಶಕೊಡುವಂತೆ ಮನವಿ ಮಾಡಿ ಎಂದು ಪಟ್ಟು ಹಿಡಿದ ಪರಿಣಾಮ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲು ಸಭೆ ತೀರ್ಮಾನಿಸಿತು.

ಸಭೆಯಲ್ಲಿ ಕೈಗೊಂಡ ರ್ನಿಣಯಗಳು: ಪಟ್ಟಣ ಪಂಚಾಯಿತಿಯ ವಾಣಿಜ್ಯ ಮಳಿಗೆಯನ್ನು ವ್ಯಾಪಾರದ ಉದ್ದೇಶಕ್ಕಾಗಿ ಪಡೆದು ಪಂಚಾಯಿತಿ ಗಮನಕ್ಕೆ ಬಾರದಂತೆ ಶೌಚಗೃಹ ನಿರ್ಮಿಸಿಕೊಂಡಿದ್ದಾರೆ. ತಕ್ಷಣ ಅವರ ಬಾಡಿಗೆ ಗುತ್ತಿಗೆಯನ್ನು ರದ್ದು ಮಾಡಿ ಮಳಿಗೆ ಖಾಲಿ ಮಾಡಿಸುವಂತೆಯೂ, ರೈಸಿಂಗ್​ ಲೈನ್​ನಿಂದ ಅಕ್ರಮವಾಗಿ ಸಂಪರ್ಕ ಪಡೆದಿರುವ ನಲ್ಲಿಗಳನ್ನು ನೀರುಗಂಟಿಗಳೊಂದಿಗೆ ಹೋಗಿ ಸಂಪರ್ಕ ಕಡಿತ ಮಾಡುವಂತೆಯೂ, ಗ್ರಾಮ ಪಂಚಾಯಿತಿ ಸಂದರ್ಭದಲ್ಲಿ ಮನೆ ನಿರ್ಮಾಣಕ್ಕೆ ಎನ್​ಒಸಿ ಪಡೆದು ಇದೂವರೆವಿಗೂ ಮನೆ ಕಟ್ಟದವರಿಗೆ ಪಟ್ಟಣ ಪಂಚಾಯಿತಿ ನಿಯಮದಂತೆ ಎನ್​ಒಸಿ ರಿನಿವಲ್​ ಮಾಡಿಕೊಡುವಂತೆಯೂ, ಸೇದುವ ಬಾವಿಗಳಿಗೆ ಗ್ರೀಲ್​ ಹಾಕಿಸುವಂತೆಯೂ, ಭೂಪರಿವರ್ತನೆಗೆ ಕೋರಿ ಬರುವ ಅರ್ಜಿಯನ್ನು ಸಾಮಾನ್ಯಸಭೆಯಲ್ಲಿಟ್ಟು ಸಭೆಯ ಅನುಮತಿ ಪಡೆದು ಒಪ್ಪಿಗೆ ಕೊಡುವಂತೆಯೂ ಸಭೆಯಲ್ಲಿ ರ್ನಿಣಯ ಕೈಗೊಳ್ಳಲಾಯಿತು.

ಅಕ್ರಮ ಖಾತೆ ಮಾಡಿಕೊಟ್ಟವರ ವಿರುದ್ಧ ಕ್ರಮ ಜರುಗಿಸಿ: ವಾಸದ ಉದ್ದೇಶಕ್ಕಾಗಿ ಭೂ ಪರಿವರ್ತನೆಯಾಗದ ನಿವೇಶನಗಳಿಗೆ ಸಕ್ಷಮ ಪ್ರಾಧಿಕಾರಗಳಿಂದ ವಿನ್ಯಾಸದ ಅನುಮೋದನೆ ಪಡೆಯದೇ ಇರುವ ನಿವೇಶನಗಳಿಗೆ ಖಾತೆ ಮಾಡಬಾರದೆಂಬ ಸರ್ಕಾರದ ಸುತ್ತೋಲೆ ಇದ್ದರೂ ಹುಳಿಯಾರು ಪಟ್ಟಣ ಪಂಚಾಯಿತಿಯಿಂದ ಈ ಹಿಂದಿನ ಸಿಬ್ಬಂದಿ ಅಕ್ರಮವಾಗಿ ಖಾತೆ ಮಾಡಿಕೊಟ್ಟಿರುವ ಬಗ್ಗೆ ಹುಳಿಯಾರು ಪಟ್ಟಣ ಪಂಚಾಯಿತಿಯಲ್ಲಿ ಕರೆಯಲಾಗಿದ್ದ ಮೊದಲನೆಯ ಮುಂದುವರಿದ ವಿಶೇಷ ತುರ್ತು ಸಭೆಯಲ್ಲಿ ಚರ್ಚೆ ನಡೆಯಿತು, ಅಕ್ರಮವಾಗಿ ಮಾಡಿಕೊಟ್ಟಿರುವ ಖಾತೆಗಳನ್ನು ರದ್ದುಪಡಿಸುವಂತೆ ಸದಸ್ಯರು ಒತ್ತಾಯಿಸಿದರು. ಅಲ್ಲದೆ ಅಕ್ರಮ ಖಾತೆ ಮಾಡಿಕೊಟ್ಟವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರು. ಇದಕ್ಕೆ ಸ್ಪಷ್ಟೀಕರಣ ಕೊಡಲು ಸಭೆಗೆ ಆಗಮಿಸಿದ್ದ ನೌಕರ ಕೃಷ್ಣಮೂರ್ತಿ, ಅಕ್ರಮ ಖಾತೆಯ ಬಗ್ಗೆ ನಡೆದ ವಿಚಾರ ಮಂಡನೆಯ ಸಮಯದಲ್ಲಿ ಗೈರುಹಾಜರಾಗಿದ್ದು ಈತನ ವಿರುದ್ಧವೂ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net