ಒತ್ತುವರಿ ತೆರವಿಗೆ ಆಗ್ರಹ -ವಿಶ್ವ ಕರವೇ ಮನವಿ ಸಲ್ಲಿಕೆ

manavi.jpg
Published on

ದಾವಣಗೆರೆ: ನಗರದಲ್ಲಿ ರಾಜಕಾಲುವೆ, ಉದ್ಯಾನ ಹಾಗೂ ಹೈಟೆನ್ಷನ್ ವಿದ್ಯುತ್ ಮಾರ್ಗದ ಜಾಗಗಳ ಒತ್ತುವರಿ ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆಯುವಂತೆ ಒತ್ತಾಯಿಸಿ ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ಮಂಗಳವಾರ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರಿಗೆ ಮನವಿ ಸಲ್ಲಿಸಿದರು.

ಕೆಲವು ಪ್ರಭಾವಶಾಲಿಗಳು ರಾಜಕಾಲುವೆಗಳ ಒತ್ತುವರಿ ಮಾಡಿಕೊಂಡಿದ್ದಾರೆ. ಹೈಟೆನ್ಷನ್ ಮಾರ್ಗದ ಕೆಳಗೆ ಇರುವ ಜಾಗಗಳಿಗೆ ಅಕ್ರಮ ಡೋರ್ ನಂಬರ್ ತೆಗೆದುಕೊಂಡಿದ್ದಾರೆ. ಕೆಲವು ಬಡಾವಣೆಗಳಲ್ಲಿ ಸರ್ಕಾರಿ ಜಾಗ ಹಾಗೂ ಉದ್ಯಾನದ ಜಾಗ ಅತಿಕ್ರಮಣ ಮಾಡಿಕೊಂಡಿದ್ದಾರೆ ಎಂದು ವಿಶ್ವ ಕರವೇ ಅಧ್ಯಕ್ಷ ಕೆ.ಜಿ. ಯಲ್ಲಪ್ಪ ಮನವಿಯಲ್ಲಿ ಆರೋಪಿಸಿದ್ದಾರೆ.

ಸರ್ಕಾರಕ್ಕೆ ಸೇರಿದ ಸಾವಿರಾರು ಕೋಟಿ ರೂ.ಗಳ ಆಸ್ತಿ ಕಂಡವರ ಪಾಲಾಗಿದೆ. ನಗರ ವ್ಯಾಪ್ತಿಯಲ್ಲಿ ಹಲವರು ಸರ್ಕಾರಿ ಜಾಗ ಒತ್ತುವರಿ ಮಾಡಿರುವುದನ್ನು ಮಹಾನಗರ ಪಾಲಿಕೆ ಹಾಗೂ ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ತೆರವು ಮಾಡಿಸದೇ ಇರುವುದು ಖಂಡನೀಯ.

ರಾಜಕಾಲುವೆಗಳಿಗೆ ಸೇರಿದ ಜಾಗ ಕೆಲವು ಸಂಸ್ಥೆಗಳು ತಮ್ಮ ಖಾಸಗಿ ಆಸ್ತಿಯನ್ನಾಗಿ ಮಾಡಿಕೊಂಡಿದ್ದು ಅಕ್ರಮವಾಗಿ ಕಟ್ಟಡ ಕಟ್ಟಿಕೊಂಡಿದ್ದಾರೆ. ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಹಾಗೂ ಅವುಗಳನ್ನುಸರ್ಕಾರದ ವಶಕ್ಕೆ ಮರಳಿ ಪಡೆಯಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಪದಾಧಿಕಾರಿಗಳಾದ ಕೆ.ಎಚ್. ಮಹಬೂಬ್, ಅಮ್ಜದ್ ಅಲಿ, ಎಂ. ರವಿ, ಬಾಬುರಾವ್, ಬಿ.ಇ. ದಯಾನಂದ, ಸಂತೋಷ್ ದೊಡ್ಮನಿ, ಎಸ್.ಸಿದ್ದೇಶ್, ಗದಿಗೆಪ್ಪ, ಜಿ. ರಮೇಶ್ ಇತರರು ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net