ಒತ್ತುವರಿ ಜಾಗದಲ್ಲಿ ನಿರ್ಮಿಸಿದ್ದ ರೆಸಾರ್ಟ್ ವಶ

IMG-20230703-WA0084
Published on

ಸಕಲೇಶಪುರ: ತಾಲೂಕಿನ ಮಂಕನಹಳ್ಳಿ ಗ್ರಾಮದಲ್ಲಿ ಅರಣ್ಯಪ್ರದೇಶದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಬಿಸ್ಲೆಘಾಟ್ ರೆಸಾರ್ಟ್ ಅನ್ನು ಅರಣ್ಯ ಇಲಾಖೆ ವಶಕ್ಕೆ ಪಡೆದುಕೊಂಡಿದೆ.


ಸರ್ವೇ ನಂ.141ರ ಮೂರು ಎಕರೆ ಹದಿನೇಳು ಗುಂಟೆ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ರೆಸಾರ್ಟ್ ಅರಣ್ಯ ಇಲಾಖೆ ಸೇರಿದ ಪ್ರದೇಶದಲ್ಲಿದೆ ಎಂದು 2020ರಲ್ಲಿ ಯಸಳೂರು ವಲಯ ಅರಣ್ಯಾಧಿಕಾರಿಗಳು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು. 2021ರಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ರೆಸಾರ್ಟ್ ವಶಕ್ಕೆ ಪಡೆಯುವಂತೆ ಆದೇಶ ನೀಡಿದ್ದರು.


ಇದನ್ನು ಪ್ರಶ್ನಿಸಿ ರೆಸಾರ್ಟ್ ಮಾಲೀಕರು ಹೈಕೋರ್ಟ್ ಮೊರೆಹೋಗಿದ್ದರು. ಹೈಕೋರ್ಟ್ ಈ ವಿಚಾರವನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ನ್ಯಾಯಾಲಯಕ್ಕೆ ವರ್ಗಾಯಿಸಿತ್ತು. ಉಪ ಸಂರಕ್ಷಣಾಧಿಕಾರಿಗಳ ನ್ಯಾಯಾಲಯ ಜೂ.22 ರಂದು ರೆಸಾರ್ಟ್ ವಶಕ್ಕೆ ಪಡೆಯುವಂತೆ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಶನಿವಾರ ಸಕಲೇಶಪುರ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುರೇಶ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ರೆಸಾರ್ಟ್‌ಗೆ ಬೀಗ ಹಾಕಿ ಅತಿಕ್ರಮ ಪ್ರವೇಶ ಮಾಡದಂತೆ ಕಂದಕ ನಿರ್ಮಾಣ ಮಾಡಿದ್ದಾರೆ.


38 ಎಕರೆ ವಶಕ್ಕೆ: ಅರಕಲಗೂಡು ತಾಲೂಕಿನ ಯಗಟಿ ಗ್ರಾಮದಲ್ಲಿ 18 ಕುಟುಂಬಗಳು ಒತ್ತುವರಿ ಮಾಡಿಕೊಂಡು ಸಾಗುವಳಿ ಮಾಡುತ್ತಿದ್ದ 38 ಎಕರೆ ಅರಣ್ಯ ಭೂಮಿಯನ್ನು ಅರಣ್ಯ ಇಲಾಖೆ ಭಾನುವಾರ ವಶಕ್ಕೆ ಪಡೆದಿದೆ. ಗ್ರಾಮದ ಹಲವರು ಕಳೆದ 4 ವರ್ಷದಿಂದ ಜಮೀನು ಒತ್ತುವರಿ ಮಾಡಿಕೊಂಡು ಸಾಗುವಳಿ ಮಾಡುತ್ತಿದ್ದನ್ನು ತೆರವುಗೊಳಿಸಲು ಕ್ರಮವಹಿಸಲಾಗಿತ್ತು.


ಅರಣ್ಯ ಇಲಾಖೆಯ ಕ್ರಮವನ್ನು ಖಂಡಿಸಿ ಒತ್ತುವರಿದಾರರು ನ್ಯಾಯಾಲಯದಿಂದ ತಡೆಯಾಜ್ಞೆ ತರುವ ಮೂಲಕ ಸಾಗುವಳಿ ಮುಂದುವರಿಸಿದ್ದರು. ಆದರೆ ಕಳೆದ ಕೆಲವು ದಿನಗಳ ಹಿಂದೆ ತಡೆಯಾಜ್ಞೆ ತೆರವುಗೊಂಡಿದ್ದರಿಂದ ಭಾನುವಾರ ಒತ್ತುವರಿ ತೆರವುಗೊಳಿಸಿದ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ತೆರವು ಜಾಗದಲ್ಲಿ ಸಸಿಗಳನ್ನು ನಾಟಿ ಮಾಡಿದ್ದಾರೆ. ಕಾರ್ಯಾಚರಣೆ ವೇಳೆ ಹಾಸನ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಭು, ಯಸಳೂರು ವಲಯ ಅರಣ್ಯಾಧಿಕಾರಿ ಜಗದೀಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net