ಒತ್ತುವರಿ ಜಮೀನುಗಳನ್ನು ಕಬ್ಜ ತೆಗೆದುಕೊಳ್ಳಲು ಡಿಸಿ ನಿತೇಶ ಪಾಟೀಲ ತಾಕೀತು

DC BELGAUM
Published on

ನಗರ ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆ

ಬೆಳಗಾವಿ: ವಿವಿಧ ತೆರಿಗೆಗಳ ಬಾಕಿ ವಸೂಲಾತಿ ಹಾಗೂ ಸರ್ವೆಗಳನ್ನು ಪೂರ್ಣಗೊಳಿಸಿ ಸಂಸ್ಥೆಗಳ ವ್ಯಾಪ್ತಿಯ ಒತ್ತುವರಿ ಜಮೀನುಗಳನ್ನು ಕಬ್ಜ ತೆಗೆದುಕೊಳ್ಳಲು ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಕಂದಾಯ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಬುಧವಾರ (ಆ.23) ನಡೆದ ನಗರ, ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ನಗರ ಸ್ಥಳೀಯ ಸಂಸ್ಥೆಗಳು ಸರ್ಕಾರದ ಐದು ಗ್ಯಾರೆಂಟಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಸಹಕರಿಸಬೇಕು. ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಮಳಿಗೆಗಳ ಲೀಸ್‌ಗಳನ್ನು ನವೀಕರಣಕ್ಕೆ ಸೂಚಿಸಬೇಕು. ಲೀಸ್ ನವೀಕರಣ ಕುರಿತು ರಿಜಿಸ್ಟರ್ ನಿರ್ವಹಣೆ ಮಾಡಬೇಕು. ನವೀಕರಣಗೊಳಿಸದೆ ಅನಧಿಕೃತ ಮಳಿಗೆಗಳ ಲೀಸ್ ರದ್ದತಿಗೊಳಿಸಬೇಕು ಎಂದರು. ಇಂದಿರಾ ಕ್ಯಾಂಟೀನ್‌ಗಳ ಚಾಲನೆಯಲ್ಲಿರಬೇಕು. ಪತ್ರಿಕೆ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ವರದಿಯಾದ ಕಾಮಗಾರಿ ಕುಂಠಿತ ಹಾಗೂ ಇನ್ನಿತರ ಸಾರ್ವಜನಿಕ ತೊಂದರೆಗಳಿಗೆ ಕೂಡಲೇ ಸ್ಪಂದಿಸಬೇಕು. ವರದಿಯ ಕುರಿತು ತಕ್ಷಣ ಎಚ್ಚೆತ್ತುಕೊಂಡು ಕಾರ್ಯ ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಹೊಸ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿನ ಗ್ರಾಮಗಳ ಸೇರ್ಪಡೆಗೆ ಕ್ರಮ ವಹಿಸಬೇಕು. ಪ್ರತಿ ಮನೆಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆಗೆ ನೀರಿನ ಸಂಪರ್ಕ ಕಲ್ಪಿಸಬೇಕು. ಕಸ ವಿಲೇವಾರಿಗೆ ಅಗತ್ಯ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದರು.

ಖಾಯಂ ನೇಮಕಾತಿಗೆ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ
ಇದಕ್ಕೂ ಮುಂಚೆ ಜಿಲ್ಲೆಯ 35 ನಗರ ಸ್ಥಳೀಯ ಸಂಸ್ಥೆಗಳ ನೇರಪಾವತಿ ಹಾಗೂ ಹೊರಗುತ್ತಿಗೆ ಪೌರಕಾರ್ಮಿಕರು ಹಾಗೂ ಲೋಡರ್ ಮತ್ತು ಕ್ಲೀನರ್ ಹುದ್ದೆಗೆ ವಿಶೇಷ ನೇಮಕಾತಿ ನಿಯಮದಂತೆ ಖಾಯಂಗೊಳಿಸಲು ನೇಮಕಾತಿಗೆ ಅರ್ಹರಿರುವ ಎಲ್ಲ ಪೌರಕಾರ್ಮಿಕರೊಂದಿಗೆ ಜಿಲ್ಲಾ ಆಯ್ಕೆ ಸಮಿತಿ ಸಭೆ ಜರುಗಿಸಲಾಯಿತು. ಒಟ್ಟು 194 ಪೌರಕಾರ್ಮಿಕರನ್ನು ಹಾಗೂ 8 ಲೌಡರ್‌ಗಳನ್ನು ನೇಮಕಾತಿ ಮಾಡಲು ಶೀಘ್ರವೇ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದ್ದಾರೆ. ನೇಮಕಾತಿಗೆ ಸಂಬಂಧಿಸಿದಂತೆ ಯಾವುದೇ ಮಧ್ಯವರ್ತಿಗಳನ್ನು ಸಂಪರ್ಕಿಸಬಾರದಂತೆ ಎಲ್ಲ ಪೌರಕಾರ್ಮಿಕರಿಗೆ ಸಭೆಯಲ್ಲಿ ಮನವರಿಕೆ ಮಾಡಲಾಯಿತು. ಬೆಳಗಾವಿ ಉಪ ವಿಭಾಗಾಧಿಕಾರಿ ಶ್ರವಣ ನಾಯಕ್ , ಬೈಲಹೊಂಗಲ ಉಪ ವಿಭಾಗಾಧಿಕಾರಿ ಪ್ರಭಾವತಿ, ಚಿಕ್ಕೋಡಿ ಉಪ ವಿಭಾಗಾಧಿಕಾರಿ ಮಾಧವ ಗಿತ್ತೆ, ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕರಾದ ಕಲಾದಗಿ, ಮತ್ತಿತರ ಅಧಿಕಾರಿಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಸಭೆಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net