ಒತ್ತವರಿಯಾಗಿರುವ ಮೆಗೆಯುವ ಕೆರೆ ರಕ್ಷಿಸಿ

1001417007
ಒತ್ತವರಿಯಾಗಿರುವ ಮೆಗೆಯುವ ಕೆರೆ ರಕ್ಷಿಸುವಂತೆ ಒತ್ತಾಯಿಸಿ ತಹಸೀಲ್ದಾರ್್ಗೆ ಮನವಿ ಸಲ್ಲಿಸಲಾಯಿತು .
Published on

  ನಿಡುವಣಿ ಗ್ರಾಮಸ್ಥರು ಆಗ್ರಹ * ತಹಶೀಲ್ದಾರ್ ರೇಣುಕುಮಾರ್‌ಗೆ ಮನವಿ

ಹೊಳೆನರಸೀಪುರ : ಒತ್ತವರಿಯಾಗಿರುವ ಗ್ರಾಮದ ಮೆಗೆಯುವ ಕೆರೆ ರಕ್ಷಿಸಬೇಕು ಎಂದು ನಿಡುವಣಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ತಾಲೂಕಿನ ಹಳ್ಳಿ ಮೈಸೂರು ಹೋಬಳಿ ನಿಡುವಣಿ ಗ್ರಾಮದ ಮೆಗೆಯುವ ಕೆರೆ ಅಚ್ಚುಕಟ್ಟನಲ್ಲಿರುವ ಕೆಲವರು ಒತ್ತುವರಿ ಮಾಡಿದ್ದಾರೆ. ಕೂಡಲೇ ಆ ಜಾಗವನ್ನು ಬಿಡಿಸಿ ಕೊಡಬೇಕೆಂದು ತಹಸೀಲ್ದಾರ್ ರೇಣುಕುಮಾರ್‌ಗೆ ಗ್ರಾಮಸ್ಥರು ಶುಕ್ರವಾರ ಮನವಿ ಸಲ್ಲಿಸಿದ್ದಾರೆ.

53 ಎಕರೆ ವಿಸ್ತೀರ್ಣ ಹೊಂದಿರುವ ಕೆರೆ ವ್ಯಾಪ್ತಿಯಲ್ಲಿ 30 ಎಕರೆಯಷ್ಟು ಜಾಗ ಒತ್ತುವರಿಯಾಗಿದೆ. ಜನ, ಜಾನುವಾರುಗಳಿಗೆ ನೀರು ಕುಡಿಯಲು ಅನುಕೂಲವಾಗಿರುವ ಕೆರೆಯ ಅಚ್ಚುಕಟ್ಟು ಪ್ರದೇಶದಲ್ಲಿ ಸುಮಾರು 400 ಎಕರೆ ಭತ್ತ ಬೆಳೆಯುವ ಯೋಗ್ಯ ಭೂಮಿ ಇದೆ. ಕೆರೆಯ ವಿಸ್ತೀರ್ಣ ಒತ್ತುವರಿಯಿಂದ ಸಂಕುಚಿತವಾಗಿರುವ ಕಾರಣ ಜಲ ಸಂಗ್ರಹ ಕಡಿಮೆಯಾಗುತ್ತಿದೆ. ಇದರಿಂದ ಗ್ರಾಮದ ಜನತೆಗೆ ತುಂಬಾ ತೊಂದರೆಯಾಗಿದೆ ಎಂದು ಮನವಿಪತ್ರದಲ್ಲಿ ಸಮಸ್ಯೆ ವಿವರಿಸಲಾಗಿದೆ.

ಅಂತರ್ಜಲ ಕುಸಿತ : ಕೆರೆಯ ಸುತ್ತಮುತ್ತಲಿನ ಗ್ರಾಮದ ಸುಮಾರು 300 ಕೊಳವೆ ಬಾವಿಗಳಿಗೆ ಅಂತರ್ಜಲವನ್ನು ಈ ಕೆರೆಯೇ ಒದಗಿಸಲಿದೆ. ಈ ಕೆರೆ ತುಂಬಿದರೆ ಕುಪ್ಪೆ, ಬಿದರಕ್ಕ ಸೇರಿದಂತೆ ಹತ್ತಾರು ಕೆರೆಗಳಿಗೆ ನೀರು ತುಂಬಿಸಲು ಸಹಕಾರಿಯಾಗಿದೆ. ಕೆರೆಯ ಜಾಗವನ್ನೇ ಅಕ್ಕಪಕ್ಕದ ರೈತರು ಕಬಳಿಸಿರುವುದರಿಂದ ಸುತ್ತಮುತ್ತಲ ಬೋರ್‌ವೆಲ್‌ಗಳಲ್ಲಿ ಅಂತರ್ಜಲ ಮಟ್ಟ ಕುಸಿದಿದೆ. ಒತ್ತುವರಿಯಾಗಿರುವ ಜಾಗವನ್ನು ತೆರವುಗೊಳಿಸಿದರೆ ಅನುಕೂಲ ಎಂದು ಆಗ್ರಹಿಸಲಾಗಿದೆ. ಕಂದಾಯ ಇಲಾಖೆ ಅಧಿಕಾರಿಗಳು ತುರ್ತಾಗಿ ಕೆರೆ ಜಾಗವನ್ನು ಬಿಡಿಸಿ ಕೊಡಬೇಕು ಎಂದು ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಗಿದೆ.

ಸ್ಮಶಾನ ಮಂಜೂರು: ಕೆರೆಯ ಪಕ್ಕದಲ್ಲಿ 14ನೇ ಸರ್ವೇ ನಂಬರ್‌ನಲ್ಲಿ ಒಂದು ಎಕರೆ ಪ್ರದೇಶದಲ್ಲಿ ಸ್ಮಶಾನ ಜಾಗ ಸರ್ಕಾರ ದಿಂದ ಮಂಜೂರಾಗಿದೆ. ಸ್ಮಶಾನದ ಹೆಸರಿನಲ್ಲಿ ಪಹಣಿಯೂ ರುತ್ತಿದೆ. ಆದರೆ ಕೆಲವರು ಈ ಜಾಗವನ್ನೂ ಒತ್ತುವರಿ ಮಾಡಿಕೊಂಡಿದ್ದಾರೆ. ಜಾಗವನ್ನು ಬಿಡಿಸಿಕೊಟ್ಟಲ್ಲಿ ಸುಮಾರು 300 ಕುಟುಂಬಗಳು ಸ್ಮಶಾನದ ಜಾಗವನ್ನು ಸದ್ಬಳಕೆ ಮಾಡಿಕೊಳ್ಳಲು ಅನುಕೂಲವಾಗುತ್ತದೆ. ತಾಲೂಕು ಆಡಳಿತ ಮತ್ತು ಜಿಲ್ಲಾಡಳಿತ ಒತ್ತುವರಿಯಾಗಿರುವ ಕೆರೆ ಮತ್ತು ಸ್ಮಶಾನ ಜಾಗ ಬಿಡಿಸಿಕೊಡಲು ತುರ್ತುಕ್ರಮ ವಹಿಸಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ. ಈ ಸಂದರ್ಭ ಮುಖಂಡರಾದ ಚಂದ್ರಪ್ಪ ರಾಜ, ಕೇಶವ, ಸ್ವಾಮಿ, ಮಹೇಶ ,ನವೀನ ,ಮಹೇಂದ್ರ, ಕೆಂಪರಾಜು ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net