

ಮೈಸೂರು: ಶಿಕ್ಷಣ ವ್ಯವಸ್ಥೆಯ ಅಧಿಕ ಒತ್ತಡದಿಂದ ಮಕ್ಕಳ ಕಲಿಕೆಯಲ್ಲಿ ಹಿನ್ನಡೆಯಾಗುತ್ತದೆ ಎಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಅಭಿಪ್ರಾಯಪಟ್ಟರು.
ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿ (ಆಯಿಷ್) ಬುಧವಾರ ಆಯೋಜಿಸಿದ್ದ ಸಂಸ್ಥೆಯ 58ನೇ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಶಿಕ್ಷಣ ವ್ಯವಸ್ಥೆ ಮಕ್ಕಳ ಮೇಲೆ ಅನಗತ್ಯ ಒತ್ತಡ ಹೇರುತ್ತಿದೆ. ಬಾಲ್ಯವನ್ನು ಸುಂದರಗೊಳಿಸುವ, ಅವರ ಕಲಿಕೆಯನ್ನು ಅರಳಿಸುವ ಕೆಲಸಗಳು ಆಗುತ್ತಿಲ್ಲ. ಹಾಗಾಗಿ ಶಾಲೆಯ ಅವಧಿ ಕಡಿಮೆಗೊಳಿಸಿ ಮಧ್ಯಾಹ್ನದೊಳಗೆ ಕೊನೆಗೊಳಿಸಬೇಕಿದೆ. ಇದರಿಂದ ಮಕ್ಕಳಿಗೆ ಉತ್ತಮ ನಿದ್ದೆ, ಆಟ ದೊರೆತು ಅವರ ಮನಸ್ಸು ವಿಕಾಸಗೊಳ್ಳುತ್ತದೆ ಎಂದು ಹೇಳಿದರು.
ಪಾಲಕರು ತಮ್ಮೆಲ್ಲ ಒತ್ತಡ ಹಾಗೂ ಕನಸುಗಳನ್ನು ಮಕ್ಕಳ ಮೇಲೆ ಹೇರುವ ಮೂಲಕ ಅವರ ಸುಂದರ ಜಗತ್ತನ್ನು ಕಿತ್ತುಕೊಳ್ಳುತ್ತಿದ್ದಾರೆ. ಪಾಲಕರು ಹೆಚ್ಚಿನ ಸಮಯವನ್ನು ಮಕ್ಕಳೊಂದಿಗೆ ಕಳೆದು ಕಲಿಕೆಗೆ ನೆರವಾಗಬೇಕು. ಪಾಲಕರ ಹೆಚ್ಚು ಹೆಚ್ಚು ಬೆಂಬಲದಿಂದ ಮಕ್ಕಳು ಬದುಕುವ ಕಲೆ ಕಲಿಯುತ್ತಾರೆ ಎಂದು ಹೇಳಿದರು.
ಹಿಂದೆ ಅವಿಭಕ್ತ ಕುಟುಂಬಗಳು ಶಾಲೆಯಂತೆ ಇದ್ದವು. ಕುಟುಂಬದ ಹಿರಿಯರು, ಕಿರಿಯರು ಭಾವನೆಗಳನ್ನು ಹಂಚಿಕೊಳ್ಳುತ್ತಿದ್ದರು. ಒಬ್ಬೊಬ್ಬರಲ್ಲಿ ಒಂದೊಂದು ಗುಣವನ್ನು ಮಕ್ಕಳು ಅನುಸರಿಸುತ್ತಿದ್ದರು. ಆದರೆ ಈಗ ದಂಪತಿ ಜತೆಗಿರುವುದೇ ದೊಡ್ಡ ಮಾತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಎಚ್ಚರ ವಹಿಸಬೇಕು
ಶೇ. 5ರಿಂದ 15ರಷ್ಟು ಮಕ್ಕಳು ಹುಟ್ಟಿನಿಂದಲೇ ವಾಕ್ ಮತ್ತು ಶ್ರವಣ ಸಮಸ್ಯೆ ಎದುರಿಸುತ್ತಿವೆ. ಇಂತಹ ಸಮಸ್ಯೆಯನ್ನು ಆರಂಭದಲ್ಲಿಯೇ ಗುರುತಿಸಿ ಸೂಕ್ತ ಚಿಕಿತ್ಸೆ ನೀಡಬೇಕು. ಶ್ರವಣ ದೋಷ ವ್ಯಕ್ತಿಯನ್ನು ಸಮಾಜದಿಂದ ದೂರ ಮಾಡಿಬಿಡುತ್ತದೆ. ಭಾಷೆ, ಕಲಿಕೆ ಸೇರಿದಂತೆ ಎಲ್ಲದರಲ್ಲೂ ಹಿಂದುಳಿಯುವಂತಾಗುತ್ತದೆ. ಆದ್ದರಿಂದ ಪಾಲಕರು ಸಾಕಷ್ಟು ಎಚ್ಚರ ವಹಿಸಬೇಕು ಎಂದು ಡಾ. ಮಂಜುನಾಥ್ ತಿಳಿಸಿದರು.
ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಆಯಿಷ್ ಸೇವೆ ಎಲ್ಲರಿಗೂ ದೊರೆಯುಂತಾಗಬೇಕು. ಹೀಗಾಗಿ ರಾಜ್ಯ ಹಾಗೂ ದೇಶದ ನಾಲ್ಕು ದಿಕ್ಕುಗಳಲ್ಲಿಯೂ ಇಂತಹ ಸಂಸ್ಥೆ ಸ್ಥಾಪನೆಗೊಳ್ಳಬೇಕು. ಸಂಸ್ಥೆ ವಾಕ್ ಮತ್ತು ಶ್ರವಣ ಸಮಸ್ಯೆಗಳಿಗೆ ಮಾತ್ರವಲ್ಲದೆ, ಮಾನಸಿಕ ಸಮಸ್ಯೆಗಳಿಗೆ ಸ್ಪಂದಿಸಿದೆ. ಗುಣಮಟ್ಟದ ಚಿಕಿತ್ಸೆಯನ್ನು ನೀಡುತ್ತಿದೆ. ಇದು ಜನರಿಗೆ ತಿಳಿಸುವ ಕೆಲಸ ಆಗಬೇಕು ಎಂದು ಸಲಹೆ ನೀಡಿದರು.
ಗುಣಮಟ್ಟದ ಕಲಿಕೆ, ಮಾತು, ಜೀವನಶೈಲಿ ರೂಪಿಸುವುದು ಸಾಮಾನ್ಯ ಕೆಲಸವಲ್ಲ. ಇಂದು ತಂತ್ರಜ್ಞಾನ ಸುಧಾರಣೆಯಾಗಿದೆ. ಅದರಂತೆ ಆರೋಗ್ಯ, ಆಹಾರ ಮಕ್ಕಳಿಗೆ ಸಿಗಬೇಕು. ಅವರಿಗಾಗಿ ಸ್ವಚ್ಛ ಪರಿಸರ ನಿರ್ಮಾಣ ಮಾಡುವುದೂ ಅಗತ್ಯ ಎಂದು ತಿಳಿಸಿದರು.
ಕೊಳಚೆ ಪ್ರದೇಶಗಳಲ್ಲಿ ಸ್ವಚ್ಛತೆ ಕೊರತೆಯಿಂದ ತೀವ್ರ ಸಂಧಿವಾತ ಜ್ವರ (ಅಕ್ಯೂಟ್ ಟ್ರಮಾಟಿಕ್ ಫೀವರ್) ಕಾಣಿಸಿಕೊಳ್ಳುತ್ತದೆ. ಸೋಂಕುಗಳಿಂದ ಪಾರು ಮಾಡಲು ಸ್ವಚ್ಛತೆಯನ್ನು ಕಾಪಾಡಬೇಕು. ಪಾಲಕರು ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕು ಎಂದರು.
ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ನಿರ್ದೇಶಕಿ ಡಾ.ಎಂ.ಪುಷ್ಪಾವತಿ ಅಧ್ಯಕ್ಷತೆ ವಹಿಸಿದ್ದರು. ಹಿನ್ನೆಲೆ ಗಾಯಕ ಶ್ರೀಹರ್ಷ, ವಾರ್ಷಿಕೋತ್ಸವದ ಸಂಯೋಜಕರಾದ ಪ್ರಾಧ್ಯಾಪಕ ಡಾ.ಟಿ.ಕೆ.ಪ್ರಕಾಶ್ ಇದ್ದರು.