ಒತ್ತಡದ ಬದುಕಿನಲ್ಲಿ ಮನರಂಜನೆ ಅತ್ಯಗತ್ಯ

19mdk01
Published on

ಕುಶಾಲನಗರ: ಇಂದಿನ ಒತ್ತಡದ ಬದುಕಿನಲ್ಲಿ ಮನರಂಜನೆ ಅತ್ಯಗತ್ಯ ಎಂದು ಸಮಾಜ ಸೇವಕ ರಾಜೇಗೌಡ ಅಭಿಪ್ರಾಯಪಟ್ಟರು.

ಕೊಡಗು ಜಿಲ್ಲಾ ಛಾಯಾಚಿತ್ರಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಇಲ್ಲಿನ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಬಳ್ಳಾರಿಯ ಧಾತ್ರಿ ರಂಗಸಂಸ್ಥೆ ವತಿಯಿಂದ ಮಂಗಳವಾರ ರಾತ್ರಿ ಆಯೋಜಿಸಿದ್ದ ಶ್ರೀಕೃಷ್ಣ ಸಂಧಾನ ನಗೆ ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

ಪ್ರಸ್ತುತ ದಿನದಲ್ಲಿ ಟಿವಿಗಳು ಜನಸಾಮಾನ್ಯರ ಮನರಂಜನೆಯ ಆದ್ಯತೆಯಾಗಿ ಬದಲಾಗಿದೆ. ಈ ಕಾಲಘಟ್ಟದಲ್ಲಿ ರಂಗಭೂಮಿಯ ಅಸ್ತಿತ್ವವೇ ಅಪಾಯದಲ್ಲಿದೆ. ಇಂಥ ಸಂದರ್ಭದಲ್ಲಿ ಧಾತ್ರಿ ರಂಗಸಂಸ್ಥೆ ಕರ್ನಾಟಕದಾದ್ಯಂತ ನಾಟಕ ಪ್ರದರ್ಶನದ ಮೂಲಕ ರಂಗಕಲೆ ಜೀವಂತವಾಗಿ ಇಡಲು ಪ್ರಯತ್ನಿಸುತ್ತಿರುವುದು ಶ್ಲಾಘನೀಯ. ನಾಟಕಗಳು ಮತ್ತೆ ಜನಪ್ರಿಯ ಆಗಬೇಕು, ಕಲಾವಿದರು ಇನ್ನಷ್ಟು ಬೆಳೆಯಬೇಕು. ಇದಕ್ಕೆ ಸಂಘ-ಸಂಸ್ಥೆಗಳು, ದಾನಿಗಳು ಪ್ರೋತ್ಸಾಹ ಕೊಡುವಂತೆ ಆಗಬೇಕು ಎಂದರು.

ಕೊಡಗು ಜಿಲ್ಲಾ ಛಾಯಾಚಿತ್ರಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಆವರ್ತಿ ಆರ್.ಮಹದೇವಪ್ಪ ಅಧ್ಯಕ್ಷತೆ ವಹಿಸಿದ್ದರು. ಸಂಘದ ಮಾಜಿ ಅಧ್ಯಕ್ಷ ಎಸ್.ಆರ್. ವಸಂತ, ಕುಶಾಲನಗರ ಪ್ರೆಸ್‌ಕ್ಲಬ್ ಅಧ್ಯಕ್ಷ ಎಚ್.ಎಂ.ರಘು ಮಾತನಾಡಿದರು.

ಗಾಯತ್ರಿ ಕಲ್ಯಾಣ ಮಂಟಪದ ಮಾಲೀಕರಾದ ಗಾಯತ್ರಿ, ಕೊಡಗು ಜಿಲ್ಲಾ ಛಾಯಾಚಿತ್ರಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದ ಮಾಜಿ ಅಧ್ಯಕ್ಷ ಗುಡ್ಡೆಮನೆ ವಿಶ್ವಕುಮಾರ್, ಸಾಂಸ್ಕೃತಿಕ ಕಾರ್ಯದರ್ಶಿ ಡೇವಿಡ್ ಸೋಲೋಮನ್, ಕಾರ್ಯದರ್ಶಿ ಲವಕುಮಾರ್, ಧಾತ್ರಿ ರಂಗಸಂಸ್ಥೆ ಮುಖ್ಯಸ್ಥ ವಿಜಯ್ ಇದ್ದರು.

ಬಳ್ಳಾರಿಯ ಧಾತ್ರಿ ರಂಗಸಂಸ್ಥೆ ಪ್ರಸ್ತುತಪಡಿಸಿದ ಶ್ರೀಕೃಷ್ಣ ಸಂಧಾನ ನಗೆ ನಾಟಕ ಕುಶಾಲನಗರದ ರಂಗಾಸಕ್ತರ ಮನಸ್ಸು ಸೆಳೆಯುವಲ್ಲಿ ಯಶಸ್ವಿಯಾಯಿತು. ಸಂಸ್ಥೆಯ 192ನೇ ಪ್ರದರ್ಶನ ಕಣ್ತುಂಬಿಸಿಕೊಳ್ಳಲು ಸಂಜೆ 6 ಗಂಟೆಯಿಂದಲೇ ವೀಕ್ಷಕರು ಗಾಯತ್ರಿ ಕಲ್ಯಾಣ ಮಂಟಪ ಬಳಿಗೆ ಬರುತ್ತಿದ್ದರು. 7 ಗಂಟೆಯ ಸುಮಾರಿಗೆ ನಾಟಕ ಶುರುವಾದಾಗ ಸಭಾಭವನ ಭರ್ತಿ ಆಗಿತ್ತು. ಹಳ್ಳಿಯೊಂದಲ್ಲಿ ಶ್ರೀಕೃಷ್ಣ ಸಂಧಾನ ನಾಟಕ ಪ್ರದರ್ಶನದ ತಾಲೀಮಿನ ಸಂದರ್ಭ ಆಗುವ ಅವಾಂತರಗಳನ್ನು ಇಟ್ಟುಕೊಂಡು ಎಣೆಯಲಾಗಿರುವ ಈ ನಗೆ ನಾಟಕ ಕೊನೆಯ ತನಕವೂ ಸಭಿಕರನ್ನು ನಗೆಗಡಲಲ್ಲಿ ತೇಲಿಸುವಲ್ಲಿ ಸಫಲವಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net