ಒತ್ತಡಕ್ಕೆ ಮಣಿದು ಕ್ರಿಯಾ ಯೋಜನೆಗೆ ಅಧ್ಯಕ್ಷೆ ಸಹಿ

02mdk04
Published on

ಕುಶಾಲನಗರ: ಹದಿನೈದನೇ ಹಣಕಾಸು ಯೋಜನೆಯ ಅನುದಾನಕ್ಕೆ ಸಿದ್ಧಪಡಿಸಿದ ಕ್ರಿಯಾ ಯೋಜನೆಗೆ ಸದಸ್ಯರ ಸಾಮೂಹಿಕ ಒತ್ತಡಕ್ಕೆ ಮಣಿದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಹಿ ಹಾಕಿದ ಪ್ರಸಂಗ ಹೆಬ್ಬಾಲೆ ಗ್ರಾಮ ಪಂಚಾಯಿತಿಯಲ್ಲಿ ಗುರುವಾರ ನಡೆಯಿತು.

ಪಂಚಾಯಿತಿ ಅಧ್ಯಕ್ಷೆ ಎಚ್.ಪಿ.ಅರುಣಕುಮಾರಿ ಅಧ್ಯಕ್ಷತೆಯಲ್ಲಿ ತುರ್ತು ಸಭೆ ಆರಂಭವಾಗುತ್ತಿದ್ದಂತೆಯೇ ಪಂಚಾಯಿತಿ ಸದಸ್ಯರೆಲ್ಲರೂ ಒಗ್ಗೂಡಿ ಈ ತನಕ ಸಹಿ ಹಾಕದ ಅಧ್ಯಕ್ಷೆಯ ವರ್ತನೆಯನ್ನು ಖಂಡಿಸಿದರು. 15ನೇ ಹಣಕಾಸು ಯೋಜನೆಯಡಿ ಕಳೆದ 2023-24ನೇ ಸಾಲಿಗೆ ಬಿಡುಗಡೆಯಾಗಿ ಪಂಚಾಯಿತಿ ಖಾತೆಯಲ್ಲಿ ಜಮೆಯಾಗಿದ್ದ 36 ಲಕ್ಷ ರೂ.ಗಳಿಂದ ಪಂಚಾಯಿತಿ ಸದಸ್ಯರು ತಮ್ಮ ತಮ್ಮ ವಾರ್ಡ್‌ಗಳ ವ್ಯಾಪ್ತಿಯಲ್ಲಿ ಸಣ್ಣ ಪುಟ್ಟ ಅಭಿವೃದ್ಧಿ ಮತ್ತು ಸ್ವಚ್ಛತೆಗೆ ಒತ್ತು ನೀಡಬೇಕಿತ್ತು. ಆದರೆ, ಒಂದು ವರ್ಷದಿಂದ ಅಧ್ಯಕ್ಷೆ ಮತ್ತು ಸದಸ್ಯರ ನಡುವೆ ಭಿನ್ನಾಭಿಪ್ರಾಯಗಳು ಏರ್ಪಟ್ಟು ಸಭೆ ನಡೆಯಲು ಬಿಟ್ಟಿರಲಿಲ್ಲ. ಇದರಿಂದಾಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದು ವರ್ಷದಿಂದ ಅಭಿವೃದ್ಧಿ ಕೆಲಸಗಳಾಗಿಲ್ಲ. ಸ್ವಚ್ಛತೆಯೂ ಆಗಿಲ್ಲ ಎಂದು ಸದಸ್ಯ ಎಚ್.ಎಸ್.ಮಂಜುನಾಥ್ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

2023-24 ನೇ ಸಾಲಿಗೆ ಬಂದ 36 ಲಕ್ಷ ರೂ. ಅನುದಾನವನ್ನು ಮಾರ್ಚ್ 31ರೊಳಗೆ ನಾವು ಬಳಸದಿದ್ದರೆ ವಾಪಸ್ ಹೋಗುತ್ತದೆ. ಪಂಚಾಯಿತಿ ವ್ಯಾಪ್ತಿಯ ಯಾವುದೇ ವಾರ್ಡ್‌ಗಳಲ್ಲಿ ನಯಾಪೈಸೆ ಕಾಮಗಾರಿ ನಡೆದಿಲ್ಲ. ಚರಂಡಿಗಳ ಸ್ವಚ್ಛತೆಯೂ ಆಗಿಲ್ಲ. ಪಂಚಾಯಿತಿ ಅಧ್ಯಕ್ಷೆ ವರ್ತನೆ ಖಂಡಿಸಿ ಕಳೆದ ಸಭೆಯಲ್ಲಿ ಅಹೋರಾತ್ರಿ ಪ್ರತಿಭಟನೆಗೂ ಮುಂದಾಗಿದ್ದೆವು. ಕೊನೆಗೆ ಪಿಡಿಒ ಮೇದಪ್ಪ ಅಧ್ಯಕ್ಷರಿಂದ ಸಹಿ ಹಾಕಿಸುವ ಭರವಸೆ ನೀಡಿದ್ದರು. ಆದರೂ ಇದೀಗ ಮತ್ತೊಂದು ತುರ್ತು ಸಭೆ ನಡೆಸಬೇಕಾಯಿತು ಎಂದು ಮಹದೇವ್, ನಾರಾಯಣ್, ತನುಕುಮಾರ್ ದೂರಿದರು.

ಪಿಡಿಒ ಮೇದಪ್ಪ, ಮಾತನಾಡಿ ಸರ್ಕಾರದ ಅನುದಾನಗಳು ಏಕೆ ಖರ್ಚಾಗುತ್ತಿಲ್ಲ. ನೀವೇನು ಮಾಡುತ್ತಾ ಇದ್ದೀರಾ ಎಂದು ಅಧಿಕಾರಿಗಳು ನಮ್ಮನ್ನು ಪ್ರಶ್ನಿಸುತ್ತಿದ್ದಾರೆ. ಇನ್ನುಳಿದ ಎರಡು ತಿಂಗಳಲ್ಲಿ ಹಣ ಖರ್ಚು ಮಾಡದಿದ್ದರೆ ಮಾರ್ಚ್ ಅಂತ್ಯಕ್ಕೆ ಇರುವ 36 ಲಕ್ಷ ರೂ. ವಾಪಸ್ ಹೋಗುತ್ತದೆ. ಅಹೋರಾತ್ರಿ ಧರಣಿಗೆ ಮುಂದಾಗಿದ್ದ ಸದಸ್ಯರನ್ನು ನಾನೇ ಮನವೊಲಿಸಿ ಅಧ್ಯಕ್ಷರಿಂದ ಸಹಿ ಹಾಕಿಸುವುದಾಗಿಯೂ ಭರವಸೆ ನೀಡಿದ್ದೆ ಎಂದು ಹೇಳಿದರು.

ಬಸ್ ನಿಲ್ದಾಣ ಸ್ವಚ್ಛವಿಲ್ಲ. ಊರಿನ ಚರಂಡಿಗಳು ಗಬ್ಬೆದ್ದು ನಾರುತ್ತಿವೆ. ಅಂಗಡಿಗಳಲ್ಲಿ ಸಾಮಾನು ಖರೀದಿಸಲು ಹೋದರೆ ಚರಂಡಿಗಳು ವಾಸನೆ ಎಂದು ಜನ ದೂರುತ್ತಿದ್ದಾರೆ ಎಂದು ತನುಕುಮಾರ್ ದೂರಿದರು.

ಪಂಚಾಯಿತಿಯಲ್ಲಿ ಇದ್ದ ಪೌರ ಕಾರ್ಮಿಕ ಕೆಲಸ ಬಿಟ್ಟು ಹೋಗಿದ್ದೇಕೆ ? ದಿನಗೂಲಿಯವರನ್ನು ಬಿಟ್ಟಾದರೂ ಸರಿಯೇ ಊರನ್ನು ಸ್ವಚ್ಛಗೊಳಿಸಿ ಎಂದು ಶಿವನಂಜಪ್ಪ ಹೇಳಿದರು. ಪೌರಕಾರ್ಮಿಕರನ್ನು ಸದಸ್ಯರು ಸರಿಯಾಗಿ ನಡೆಸಿಕೊಳ್ಳದ ಕಾರಣ ಅವರು ಕೆಲಸಕ್ಕೆ ಬರುತ್ತಿಲ್ಲ ಎಂದು ಅಧ್ಯಕ್ಷೆ ಅರುಣಕುಮಾರಿ ಹೇಳಿದಾಗ, ಅಧ್ಯಕ್ಷರ ಕಿರುಕುಳಕ್ಕೆ ಬೇಸತ್ತು ಪೌರಕಾರ್ಮಿಕರು ಬರುತ್ತಿಲ್ಲ ಎಂದು ತನುಕುಮಾರ್ ಮತ್ತು ನಾರಾಯಣ್ ತಿರುಗೇಟು ನೀಡಿದರು.

ಪದೇ ಪದೇ ಸಭೆ ಕರೆದು ಏಕೆ ನಮ್ಮ ಕೆಲಸ ಕಾರ್ಯಗಳನ್ನು ಹಾಳು ಮಾಡ್ತಾ ಇದ್ದೀರಾ? ಕೆಲಸ ಮಾಡಲು ಆಗದ ಮೇಲೆ ಕುರ್ಚಿ ಖಾಲಿ ಮಾಡಿದರೆ ಬೇರೆಯವರನ್ನು ಕೂರಿಸಿಕೊಂಡು ನಾವು ಕೆಲಸ ಕಾರ್ಯಗಳನ್ನು ಮಾಡಿಸುತ್ತೇವೆ ಎಂದು ನಾರಾಯಣ್ ಆಕ್ರೋಶ ವ್ಯಕ್ತಪಡಿಸಿದಾಗ ಅಧ್ಯಕ್ಷೆ ಹಾಗೂ ಸದಸ್ಯರು ನಡುವೆ ವಾಕ್ಸಮರ ನಡೆಯಿತು.

ಕ್ರಿಯಾಯೋಜನೆ ಕಡತಕ್ಕೆ ಅಧ್ಯಕ್ಷೆ ಸಹಿ ಹಾಕದ ಕಾರಣ ಸಭೆಯನ್ನು ಸಾಮೂಹಿಕವಾಗಿ ಬಹಿಷ್ಕರಿಸುವ ಎಚ್ಚರಿಕೆ ನೀಡಿದ ಬಳಿಕ ಕೊನೆಗೆ ಅಧ್ಯಕ್ಷೆ ಅರುಣಕುಮಾರಿ ಕಡತಕ್ಕೆ ಸಹಿ ಹಾಕಿದರು. ಉಪಾಧ್ಯಕ್ಷೆ ಲತಾ, ಸದಸ್ಯರಾದ ಯಶಸ್ವಿನಿ, ಎಚ್.ಸಿ.ಮಹದೇವ್, ನಾರಾಯಣ್, ಪುಟ್ಟಲಕ್ಷ್ಮಮ್ಮ, ರತ್ನಮ್ಮ, ಚಂದ್ರಶೇಖರ್ ಜೋಗಿ, ಕವಿತಾ, ಕಾರ್ಯದರ್ಶಿ ಸುರೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net