

ವಿಜಯವಾಣಿ ಸುದ್ದಿಜಾಲ ಧಾರವಾಡ
ಅಂತರ್ಗತ ಗುಣಗಳ ಬಗ್ಗೆ ಅರಿವು ಹೊಂದಲು ಯೋಗಾಭ್ಯಾಸ ಸಹಾಯ ಮಾಡುತ್ತದೆ. ನಿಯಮಿತವಾಗಿ ಯೋಗಾಭ್ಯಾಸ ಮಾಡುವುದರಿಂದ ವ್ಯಕ್ತಿಯ ಸ್ವ ಅರಿವು ವೃದ್ಧಿಸುತ್ತದೆ. ಆತ ತನ್ನಲ್ಲಿರುವ ಪ್ರತಿಭೆ, ಗುಣಗಳ ಬಗ್ಗೆ ಅರಿವು ಬೆಳೆಸಿಕೊಳ್ಳುವ ಮೂಲಕ ಇತರರಿಂದ ಭಿನ್ನವಾದ ಅನನ್ಯ ವ್ಯಕ್ತಿಯಾಗಿ ಮೂಡಿಬರುತ್ತಾನೆ ಎಂದು ಸಮಾಜಿಕ ಕಾರ್ಯಕರ್ತ ಶಿವಾನಂದ ಕವಳಿ ಹೇಳಿದರು.
ನಗರದ ಸಾಂಸ್ಕೃತಿಕ ಲೋಕ ಆರ್ಟ್ ಆ್ಯಂಡ್ ಕಲ್ಚರಲ್ ಅಕಾಡೆಮಿ, ಕರ್ನಾಟಕ ವಿಶ್ವ ವಿದ್ಯಾಲಯದ ಯೋಗ ಅಧ್ಯಯನ ವಿಭಾಗ ವತಿಯಿಂದ ಇತ್ತೀಚೆಗೆ ಏರ್ಪಡಿಸಿದ್ದ ಉಚಿತ ಯೋಗ ತರಬೇತಿ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಮಾರ್ತಾಂಡಪ್ಪ ಕತ್ತಿ ಮಾತನಾಡಿ, ಒತ್ತಡ ಕಳೆಯಲು ಯೋಗಾಭ್ಯಾಸ ಸಹಾಯ ಮಾಡುತ್ತದೆ. ಇವತ್ತಿನ ಬದುಕು ತಡೆದುಕೊಳ್ಳಲಾರದ ಒತ್ತಡದಿಂದ ಕೂಡಿದೆ. ಕ್ಷಣಕಾಲ ನಿಂತು ಆಲೋಚಿಸಿ ಮುನ್ನಡೆಯುವಷ್ಟು ಸಮಯ ಯಾರಿಗೂ ಇಲ್ಲ. ಎಲ್ಲರೂ ಯಂತ್ರಗಳಂತೆ ಆಗಿಬಿಟ್ಟಿದ್ದಾರೆ. ಇಂತಹ ಜೀವನ ಶೈಲಿ ನಿಧಾನವಾಗಿ ಆರೋಗ್ಯದ ಮೇಲೆ ಪರಿಣಾಮ ಬೀರಿ ನಾನಾ ರೀತಿಯ ಅನಾರೋಗ್ಯ ಉಂಟು ಮಾಡುತ್ತಿದೆ. ಯೋಗಾಭ್ಯಾಸ ಮನಸ್ಸಿನ ಮೇಲೂ ಪರಿಣಾಮ ಬೀರಿ ಒತ್ತಡ ಮಟ್ಟ ಇಳಿಸುತ್ತದೆ ಎಂದರು.
ಎಸ್‌ಡಿಎಂ ವೈದ್ಯಕೀಯ ಮಹಾವಿದ್ಯಾಲಯದ ಡಾ. ಅನಸೂಯಾ ಭಂಡಾರಕರ, ಸಂಪನ್ಮೂಲ ವ್ಯಕ್ತಿ ಗೋರೆಸಾಬ ನದಾಫ, ಸುದರ್ಶನ ಮುಗದುಮ್ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಕಿರಣ ರಾಯಬಾಗಿ, ಸಂದೀಪ ಸಾದುರೆ, ನಿಂಗಪ್ಪ ಇಮ್ಮನ್ನವರ, ನಾಗೇಶ ಪಾಟೀಲ,ಪವಿತ್ರಾ ದಳವಾಯಿ ಯೋಗದ ಕುರಿತು ಮಾಹಿತಿ ನೀಡಿದರು.
ಸೈಯದ ಎ.ಎಂ ಪ್ರಾಸ್ತಾವಿಕವಾಗಿ ಸ್ವಾಗತಿಸಿದರು. ಪ್ರಕಾಶ ಕಾಮಕರ ವಂದಿಸಿದರು. ನಂತರ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.