ಒಣಹಾಕಿದ್ದ ಭತ್ತದ ಬೆಳೆಗೆ ಮಳೆಯಿಂದ ಹಾನಿ

14 skp 1 a
ನೀರಿನಲ್ಲಿ ತೇಲಿ ಹೋಗುತ್ತಿರುವ ಭತ್ತ ತುಂಬಿಕೊಳ್ಳುತ್ತಿರುವ ರೈತರು.
Published on

ಶಿಕಾರಿಪುರ: ಅಕಾಲಿಕ ಮಳೆಯ ಅಬ್ಬರಕ್ಕೆ ತಾಲೂಕಿನ ಬನ್ನೂರಿನಲ್ಲಿ ಮುನ್ನೂರಕ್ಕೂ ಅಕ ಚೀಲ ಭತ್ತ ನೀರುಪಾಲಾಗಿದೆ. ಬನ್ನೂರಿನ 8 ರೈತರು ತಾವು ಬೆಳೆದ ಬೇಸಿಗೆ ಭತ್ತವನ್ನು ಕಟ್ಟಿನಹೊಳೆ ಕೆರೆಯಲ್ಲಿ ನೀರಿಲ್ಲದ ಕಾರಣ ಹಾಗೂ ಮಳೆ ವಾತವರಣ ಇಲ್ಲದಿದ್ದರಿಂದ ಭತ್ತ ಒಣಗಿಸಲು ಹಾಕಿದ್ದರು. ಲಾರಿಗಳು ಬಂದಾಗ ಬೇಗ ಸಾಗಿಸಲು ಅನುಕೂಲವಾಗುವುದು ಎಂಬ ಕಾರಣಕ್ಕೆ ಒಣ ಹಾಕಲಾಗಿತ್ತು. ಆದರೆ ಗುರುವಾರ ರಾತ್ರಿ ಸುರಿದ ಭಾರಿ ಮಳೆಗೆ ಮತ್ತು ಎರೆಕೊಪ್ಪ ಕೆರೆ ಒಡೆದ ಪರಿಣಾಮ ನೀರು ನುಗ್ಗಿ ಕೆರೆ ಭರ್ತಿಯಾಗಿ ರಭಸವಾಗಿ ಹರಿಯಲು ಪ್ರಾರಂಭಿಸಿದೆ. ಇದರಿಂದ ರೈತರು ಹಾಕಿದ್ದ ಭತ್ತ ಸಾಕಷ್ಟು ಪ್ರಮಾಣದಲ್ಲಿ ಕೊಚ್ಚಿ ಹೋಗಿದೆ. ರೈತರು ಶುಕ್ರವಾರ ಬೆಳಗ್ಗೆ ಭತ್ತ ತುಂಬಲು ಟ್ರಾಕ್ಟರ್ ತಂದಾಗ ಒಬ್ಬೊಬ್ಬರಿಗೆ ಮೂರ್ನಾಲ್ಕು ಚೀಲದಷ್ಟು ತೊಯ್ದ ಭತ್ತ ದೊರಕಿದೆ. ರೈತರು ಎಷ್ಟೇ ಪ್ರಯತ್ನಿಸಿದರೂ ಬೆಳೆದ ಭತ್ತವನ್ನು ಉಳಿಸಿಕೊಳ್ಳಲಾಗಿಲ್ಲ. ರೈತರಾದ ಅನಂತ, ಅರುಣ, ಮಂಜಪ್ಪ, ಶಿವಪ್ಪ, ದುರ್ಗಪ್ಪ, ಚನ್ನಪ್ಪ, ಪ್ರೇಮಕುಮಾರ್, ರಾಧಮ್ಮ ಎಂಬ ಎಂಟು ಜನ ರೈತರು ನಷ್ಟಕ್ಕೆ ಒಳಗಾಗಿದ್ದಾರೆ.

ಮಳೆ ಹೆಚ್ಚಿರುವುದರಿಂದ ರೈತರು ತಾವು ಬೆಳೆದ ಬೆಳೆಯನ್ನು ಕೆರೆಕಟ್ಟೆ, ಹೊಳೆ ಪ್ರದೇಶಗಳಲ್ಲಿ ಒಣಗಿಸಲು ಮುಂದಾಗಬಾರದು. ರೈತರಿಗೆ ತೊಂದರೆಯಾಗಿರುವುದು ಗಮನಕ್ಕೆ ಬಂದಿದೆ. ಜಿಲ್ಲಾಕಾರಿ ಜತೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ. ಮಲ್ಲೇಶ್ ಬಿ.ಪೂಜಾರ್ ತಹಸೀಲ್ದಾರ್, ಶಿಕಾರಿಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net