ಒಣಮೆಣಸಿನಕಾಯಿ ಮೇಳ ಸಮಾರೋಪ, ಕೋಟಿ ರೂ. ದಾಟಿದ ವಹಿವಾಟು

Chilly 2
Published on

ಹುಬ್ಬಳ್ಳಿ: ಇಲ್ಲಿಯ ಮೂರುಸಾವಿರ ಮಠದ ಹೈಸ್ಕೂಲ್ ಮೈದಾನದಲ್ಲಿ ಬೆಳೆಗಾರರು ಹಾಗೂ ಗ್ರಾಹಕರ ಮಧ್ಯೆ ನೇರ ಮಾರಾಟ ಪ್ರೋತ್ಸಾಹಿಸುವ ಸಲುವಾಗಿ ಏರ್ಪಡಿಸಿದ್ದ ಮೂರು ದಿನಗಳ ಒಣ ಮೆಣಸಿನಕಾಯಿ ಮೇಳ ಭಾನುವಾರ ಸಮಾರೋಪಗೊಂಡಿತು.

ಮೂರು ದಿನ ಸುಮಾರು 90ಕ್ಕೂ ಹೆಚ್ಚು ಬೆಳೆಗಾರರು ಮೇಳದಲ್ಲಿ ಪಾಲ್ಗೊಂಡು 30 ಟನ್ ಒಣಮೆಣಸಿನಕಾಯಿ ಮಾರಾಟ ಮಾಡಿದರು. ಇದರಿಂದ ಸುಮಾರು 1.10 ಕೋಟಿ ರೂಪಾಯಿ ವಹಿವಾಟು ನಡೆದಿದೆ. ಮೇಳದ ಮೊದಲ ದಿನ 25 ಲಕ್ಷ ರೂ., ಎರಡನೇ ದಿನ 40 ಲಕ್ಷ ರೂ. ಹಾಗೂ ಮೂರನೇ ದಿನ 45 ಲಕ್ಷ ರೂ. ವಹಿವಾಟು ನಡೆಯಿತು. ದರ ಹೆಚ್ಚಾಗಿದ್ದರಿಂದ ವಹಿವಾಟು ಜಾಸ್ತಿಯಾಗಿದೆ. ಆದರೆ, ಹಿಂದಿನ ಮೇಳಕ್ಕಿಂತ ಈ ಬಾರಿ ಕಡಿಮೆ ಪ್ರಮಾಣದಲ್ಲಿ ಮೆಣಸಿನಕಾಯಿ ಮಾರಾಟವಾಗಿದೆ.

ಕರ್ನಾಟಕ ರಾಜ್ಯ ಸಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ, ತೋಟಗಾರಿಕೆ ಇಲಾಖೆ, ಹುಬ್ಬಳ್ಳಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಉಳುವಾಯೋಗಿ ರೈತ ಉತ್ಪಾದಕ ಸಂಸ್ಥೆ ಹಾಗೂ ಕುಂದಗೋಳದ ಅಮರಶಿವ ರೈತ ಉತ್ಪಾದಕ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಮೇಳ ನಡೆಯಿತು. 11ನೇ ಮೇಳ ಇದಾಗಿದ್ದು, ಇದೇ ಮೊದಲ ಬಾರಿ ಕೋಟಿ ರೂಪಾಯಿ ವಹಿವಾಟು ದಾಟಿದೆ ಎಂದು ಹೇಳಲಾಗಿದೆ.

2018-19ರಲ್ಲಿ ನಡೆದ ಮೇಳದಲ್ಲಿ 120 ರೈತರು ಪಾಲ್ಗೊಂಡಿದ್ದರು. 45 ಟನ್ ಮಾರಾಟ ಮಾಡಿದ್ದರು. ಸುಮಾರು 65 ಲಕ್ಷ ರೂ. ವಹಿವಾಟು ನಡೆದಿತ್ತು. 2019-20ರಲ್ಲಿ 102 ರೈತರು ಒಣಮೆಣಸಿನಕಾಯಿ ಮಾರಾಟಕ್ಕೆ ತಂದಿದ್ದರು. 33 ಟನ್ ಮಾರಾಟವಾಗಿ, ಸುಮಾರು 77 ಲಕ್ಷ ರೂ. ವಹಿವಾಟು ನಡೆದಿತ್ತು ಎಂದು ತೋಟಗಾರಿಕೆ ಇಲಾಖೆಯ ಯೋಗೇಶ ಅವರು ತಿಳಿಸಿದರು.

ರೈತರು, ವಿಜ್ಞಾನಿಗಳು ಹಾಗೂ ಗ್ರಾಹಕರನ್ನು ಒಂದುಗೂಡಿಸುವ ಮೇಳ ಇದಾಗಿತ್ತು. ಇಲಾಖೆ ವಿಜ್ಞಾನಿಗಳು ಮೆಣಸಿನಕಾಯಿ ಬೆಳೆಗಾರರಿಗೆ ಆಧುನಿಕ ತಂತ್ರಜ್ಞಾನ, ಅಧಿಕ ಇಳುವರಿ ಮುಂತಾದ ವಿಷಯಗಳ ಮಾಹಿತಿ ನೀಡಿದರು.

ಮೂರು ದಿನದ ಮೇಳದಲ್ಲಿ ಸುಮಾರು 15 ಚೀಲ ಮೆಣಸಿನಕಾಯಿ ಮಾರಾಟ ಮಾಡಿದೆ. ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು ಎಂದು ವರೂರಿನ ರೈತ ಮಲ್ಲನಗೌಡ ತಿಳಿಸಿದರು.

ಮೇಳದಲ್ಲಿ ಪಾಲ್ಗೊಂಡ ಇಲಾಖೆ ವತಿಯಿಂದ ರೈತರಿಗೆ ಸ್ಮರಣಿಕೆ ಹಾಗೂ ಪ್ರಶಸ್ತಿ ಪತ್ರ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net