

ಬಸವನಬಾಗೇವಾಡಿ: ರೈತರು ಬೆಳೆದ ಒಣದ್ರಾಕ್ಷಿಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಬೆಂಬಲ ಬೆಲೆಯಡಿ ಖರೀದಿಸಲು ಹಾಗೂ ಶಾಲಾ ಮಕ್ಕಳಿಗೆ ಬಿಸಿಯೂಟದಲ್ಲಿ ಒಣದ್ರಾಕ್ಷಿ ನೀಡುವಂತೆ ಆಗ್ರಹಿಸಿ ತಾಲೂಕಿನ ವಿವಿಧ ಮಠಗಳ ಮಠಾಧೀಶರು, ತಾಲೂಕು ದ್ರಾಕ್ಷಿ ಬೆಳೆಗಾರರ ಸಂಘ ಮತ್ತು ರೈತ ಸಂಘದಿಂದ ಗುರುವಾರ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಪಟ್ಟಣದ ಹಿರೇಮಠದಲ್ಲಿ ಜಮಾಯಿಸಿದ ತಾಲೂಕಿನ ವಿವಿಧ ಮಠಗಳ ಮಠಾಧೀಶರು ಹಾಗೂ ರೈತರು, ರೈತ ಸಂಘದ ಮುಖಂಡರು ಘೋಷಣೆ ಕೂಗುತ್ತಾ ಪಟ್ಟಣದ ಮಿನಿ ವಿಧಾನಸೌಧಕ್ಕೆ ತೆರಳಿ ತಹಸೀಲ್ದಾರ್ ಕಚೇರಿಯ ಮುಂದೆ ಕೆಲ ಹೊತ್ತು ಪ್ರತಿಭಟನೆ ನಡೆಸಿದರು.
ಪಟ್ಟಣದ ಹಿರೇಮಠದ ಶಿವಪ್ರಕಾಶ ಶಿವಚಾರ್ಯರು, ಕರಂಭಟನಾಳದ ಶಿವಕುಮಾರ ಶ್ರೀಗಳು ಮಾತನಾಡಿ, ರಾಜ್ಯದ ಅನ್ನದಾತರು ಒಂದು ಬಾರಿ ಬರಗಾಲ, ಇನ್ನೊಂದು ಬಾರಿ ಅತಿವೃಷ್ಟಿಗೆ ತುತ್ತಾಗಿದ್ದಾರೆ. ಈ ಸಮಯದಲ್ಲಿ ಸರ್ಕಾರಗಳು ರೈತರ ನೆರವಿಗೆ ಧಾವಿಸಬೇಕು ಎಂದರು.
ರೈತ ಮುಖಂಡ ಅರವಿಂದ ಕುಲಕರ್ಣಿ ಮಾತನಾಡಿ, ರಾಜ್ಯದಲ್ಲಿ ದ್ರಾಕ್ಷಿ ಬೆಳೆಯನ್ನು ಅಂದಾಜು 90ರಿಂದ 95ಸಾವಿರ ಎಕರೆ ಪ್ರದೇಶದಲ್ಲಿ ಬೆಳೆಯುತ್ತಿದ್ದು, 7.5ರಿಂದ 9.5 ಲಕ್ಷ ಮೆಟ್ರಿಕ್ ಟನ್ ದ್ರಾಕ್ಷಿ ಉತ್ಪಾದನೆಯಾಗುತ್ತಿದೆ. ಮಾರುಕಟ್ಟೆಯಲ್ಲಿ ರೈತರು ಬೆಳೆದ ದ್ರಾಕ್ಷಿ ಹಾಗೂ ಒಣದ್ರಾಕ್ಷಿಗೆ ಸೂಕ್ತವಾದ ಬೆಲೆ ಸಿಗುತ್ತಿಲ್ಲ. ಸರ್ಕಾರವೇ ಒಣದ್ರಾಕ್ಷಿ ಖರೀದಿಸಿ ಅಂಗನವಾಡಿ ಹಾಗೂ ಸರ್ಕಾರಿ ಶಾಲಾ ಮಕ್ಕಳಿಗೆ ವಿತರಿಸುವ ಮೂಲಕ ರೈತರಿಗೆ ನೆರವು ಕಲ್ಪಿಸಬೇಕು ಎಂದರು.
ಚಿಮ್ಮಲಗಿಯ ಸಿದ್ದಾರೇಣುಕ ಶಿವಾಚಾರ್ಯರು ಮಾತನಾಡಿ, ದ್ರಾಕ್ಷಿ ಉತ್ಪಾದನೆಯಲ್ಲಿ ದೇಶದಲ್ಲಿ ಮಹಾರಾಷ್ಟ್ರದ ನಂತರದಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದೆ. ರಾಜ್ಯದ ಒಟ್ಟು ಉತ್ಪಾದನೆಯಲ್ಲಿ ವಿಜಯಪುರ (ಶೇ. 70ರಷ್ಟು ), ಬಾಗಲಕೋಟೆ (ಶೇ. 85ರಷ್ಟು) ಹಾಗೂ ಬೆಳಗಾವಿ (ಶೇ. 15ರಷ್ಟು) ದ್ರಾಕ್ಷಿ ಬೆಳೆಗಳು ಬೆಳೆಯುತ್ತಿವೆ. ಒಟ್ಟು ಉತ್ಪಾದನೆಯಲ್ಲಿ ಪ್ರತಿಶತ 90ರಷ್ಟು ಒಣದ್ರಾಕ್ಷಿಯಾಗಿ ಸಂಸ್ಕರಣೆಯಾಗುತ್ತಿದೆ. 1ಲಕ್ಷ ಕೃಷಿ ಕುಟುಂಬಗಳು ದ್ರಾಕ್ಷಿ ಬೆಳೆಯ ವ್ಯವಸಾಯ ಅವಲಂಬಿಸಿವೆ ಎಂದರು.
ಪಿಕೆಪಿಎಸ್ ಬ್ಯಾಂಕ್ ಅಧ್ಯಕ್ಷ ಸಂಗನಗೌಡ ಚಿಕ್ಕೊಂಡ ಮಾತನಾಡಿ, ಈ ಹಿಂದಿನ ವರ್ಷಗಳಲ್ಲಿ ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ತಾಜಾ ದ್ರಾಕ್ಷಿಯ ಬೆಲೆ 30ರಿಂದ 50 ರೂ.ಗಳಷ್ಟಿದ್ದು, ಒಣದ್ರಾಕ್ಷಿಯು 150ರಿಂದ 250 ರೂ.ಗೆ ಪ್ರತಿ ಕೆಜಿ ದರದಲ್ಲಿ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿತ್ತು. ಆದರೆ ಈ ಸಾರಿ ತಾಜಾ ದ್ರಾಕ್ಷಿ ಬೆಲೆ 15ರಿಂದ 20ರೂ. ಹಾಗೂ ಒಣದ್ರಾಕ್ಷಿಯ ಬೆಲೆ 60ರಿಂದ 110 ರೂ.ಗೆ ಕೆಜಿ ದರದಲ್ಲಿ ಮಾರಾಟವಾಗುತ್ತಿರುವುದರಿಂದ ರೈತರ ಪಾಡು ಬೀದಿಗೆ ಬಂದಂತಾಗಿದೆ. 1 ಎಕರೆ ದ್ರಾಕ್ಷಿ ನಿರ್ವಹಣೆ ಮಾಡಲು ವಾರ್ಷಿಕ ಸುಮಾರು 1.75ರಿಂದ 2.25 ಲಕ್ಷ ರೂ.ಗಳ ವೆಚ್ಚ ತಗಲುತ್ತದೆ. ಉತ್ಪಾದನೆಗೆ ಖರ್ಚು ಮಾಡಿದ ಹಣವು ಕೂಡ ರೈತರಿಗೆ ಸಿಗದಂತಾಗಿದೆ. ಸರ್ಕಾರವು ಉತ್ಪಾದನೆ ವೆಚ್ಚವನ್ನು ಪರಿಗಣಿಸಿ ಒಣದ್ರಾಕ್ಷಿಗೆ ಬೆಂಬಲ ಬೆಲೆಯನ್ನು ಪ್ರತಿ ಟನ್‌ಗೆ ಸುಮಾರು 1.50ಲಕ್ಷ ರೂ.ಗಳಿಂದ 2.50 ಲಕ್ಷ ರೂ.ಗಳವರೆಗೆ ಘೋಷಿಸಬೇಕು ಎಂದು ಒತ್ತಾಯಿಸಿದರು.
ಇಂಗಳೇಶ್ವರ ಹಿರೇಮಠದ ಬೃಂಡೇಶ್ವರ ಶಿವಾಚಾರ್ಯರು, ಶಿವಾನಂದ ವನರೊಟ್ಟಿ, ಪ್ರಭು ಗೊಳಸಂಗಿ, ಅರವಿಂದ ಗೊಳಸಂಗಿ, ರಮೇಶ ಉಕ್ಕಲಿ, ಶಿವರಾಜ ಬಿದರಕುಂದಿ, ಪೀರಾ ಮೇಸ್ತ್ರಿ, ಸಿದ್ದರಾಮ ಬಂಡಿವಡ್ಡರ, ಶಿವರಾಜ ಪಡಶೆಟ್ಟಿ ಇತರರು ಮನವಿ ಸಲ್ಲಿಸುವ ಸಮಯದಲ್ಲಿದ್ದರು.