

ವಿಜಯಪುರ: ಜಿಲ್ಲೆಯ ದ್ರಾಕ್ಷಿ ಬೆಳೆಗಾರರು ಬೆಳೆದ ಒಣದ್ರಾಕ್ಷಿ ಮಾರಾಟವಾಗದೆ ತೀವ್ರ ಸಂಕಷ್ಟದಲ್ಲಿದ್ದು, ಅವರ ನೆರವಿಗೆ ಸರ್ಕಾರ ಮಧ್ಯೆ ಪ್ರವೇಶಿಸಿ ಒಣದ್ರಾಕ್ಷಿಗೆ ಬೆಂಬಲ ಬೆಲೆ ಘೋಷಣೆ ಮಾಡಬೇಕು ಎಂದು ದೇವರಹಿಪ್ಪರಗಿಯ ಬಂಥನಾಳ ಮಠದ ವೃಷಭಲಿಂಗ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.
ಶನಿವಾರ ನಗರದ ಹೇಮರಡ್ಡಿ ಮಲ್ಲಮ್ಮ ಮಂಗಲ ಕಾರ್ಯಾಲಯದಲ್ಲಿ ನಾಡಿನ ಮಠಾಧೀಶರು, ಜಿಲ್ಲಾ ದ್ರಾಕ್ಷಿ ಬೆಳೆಗಾರರು ಹಾಗೂ ರೈತ ಪರ ಸಂಘಟನೆಗಳು ಹಮ್ಮಿಕೊಂಡಿದ್ದ ಚಿಂತನಾ ಸಭೆಯಲ್ಲಿ ಅವರು ಭಾಗವಹಿಸಿ ಮಾತನಾಡಿ, ಈ ಬಾರಿ ಒಣದ್ರಾಕ್ಷಿ ಉತ್ಪಾದನೆ ಅಧಿಕವಾಗಿದ್ದು, ರೈತರಿಗೆ ಸಮರ್ಪಕ ಬೆಲೆ ದೊರೆಯುತ್ತಿಲ್ಲ. ಇಂಥ ಸಂದರ್ಭದಲ್ಲಿ ಸರ್ಕಾರ ಪ್ರತಿ ಟನ್ ಒಣದ್ರಾಕ್ಷಿಗೆ 1.50 ಲಕ್ಷ ರೂ. ದಿಂದ 2 ಲಕ್ಷದವರೆಗೆ ಬೆಂಬಲ ಬೆಲೆ ಘೋಷಿಸಿ, ಖರೀದಿ ಮಾಡಿ ದ್ರಾಕ್ಷಿ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದರು.
ಮಸಬಿನಾಳದ ವಿರಕ್ತಮಠದ ಸಿದ್ದರಾಮ ಮಹಾಸ್ವಾಮೀಜಿ ಮಾತನಾಡಿ, ಒಣ ದ್ರಾಕ್ಷಿ ಮಾನವ ಕುಲಕ್ಕೆ ಅತ್ಯಂತ ಸಹಕಾರಿ. ಮಕ್ಕಳ ಆರೋಗ್ಯ ಹಾಗೂ ಜನ ಸಾಮಾನ್ಯರು ಸೇವಿಸುವುದರಿಂದ 20ಕ್ಕೂ ಅಧಿಕ ರೋಗಗಳಿಗೆ ಔಷಧಿಯಾಗಿದೆ. ಸರ್ಕಾರ ಇದನ್ನು ಮಕ್ಕಳಿಗೆ, ಬಾಣಂತಿಯರಿಗೆ, ರೋಗಿಗಳಿಗೆ ವಿತರಿಸುವ ಮೂಲಕ ಅವರ ಆರೋಗ್ಯ ವೃದ್ಧಿಗೆ ಸಹಕರಿಸುವುದಲ್ಲದೇ, ಬೆಳೆಗಾರರ ಹಿತವನ್ನು ಕಾಪಾಡುವತ್ತ ಚಿಂತನೆ ಮಾಡಬೇಕು ಎಂದರು.
ಅಖಿಲ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಮಾರುಕಟ್ಟೆಯಲ್ಲಿ ತಾಜಾ ದ್ರಾಕ್ಷಿಯ ಬೆಲೆ ಕೆಜಿಗೆ 30 ರಿಂದ 50 ರೂ. ಗಳಷ್ಟಿದ್ದು, ಒಣದ್ರಾಕ್ಷಿ ಕೆಜಿಗೆ 150 ರಿಂದ 250 ದರದಲ್ಲಿ ಮಾರಾಟವಾಗುತ್ತಿತ್ತು. ಆದರೆ ಈ ಬಾರಿ ದ್ರಾಕ್ಷಿ ಬೆಳೆ ಬೆಲೆ ಸಂಪೂರ್ಣ ಕುಸಿದಿದೆ. ಉತ್ಪಾದನೆ ಮಾಡಲು ಖರ್ಚುಮಾಡಿದ ಹಣ ಸಹ ವಾಪಸ್ ಬಂದಿಲ್ಲ. ಹೀಗಾಗಿ ರೈತ ಸಾಲದ ಸುಳಿಗೆ ಸಿಲುಕಿದ್ದಾನೆ. ಸರ್ಕಾರ ಈ ಬಗ್ಗೆ ಗಂಭೀರ ಚಿಂತನೆ ನಡೆಸಿ ದ್ರಾಕ್ಷಿ ಬೆಳೆಗಾರರ ಪರ ನಿಲ್ಲಬೇಕು ಎಂದು ಆಗ್ರಹಿಸಿದರು.
ಅಥಣಿ ಮಾಜಿ ಶಾಸಕ ಶಹಜಾನ್ ಡೊಂಗರಗಾಂವ ಮಾತನಾಡಿ, ನಾನು ದ್ರಾಕ್ಷಿ ಬೆಳೆಗಾರನಾಗಿದ್ದು, ಅವರು ಎದುರಿಸುತ್ತಿರುವ ಸಂಕಷ್ಟಗಳ ಅರಿವಿದೆ. ಜಿಲ್ಲೆಯ ಮಠಾಧೀಶರು ನಮ್ಮ ಬೆಂಬಲಕ್ಕೆ ನಿಂತಿರುವುದು ಆನೆ ಬಲ ತಂದಿದೆ. ಅವರ ನೇತೃತ್ವದಲ್ಲಿ ಹೋರಾಟ ನಡೆಸೋಣ ಎಂದರು.
ಸಭೆಯಲ್ಲಿ ಬಸವನಬಾಗೇವಾಡಿಯ ಹಿರೇಮಠದ ಶಿವಪ್ರಕಾಶ ಶಿವಾಚಾರ್ಯರು, ಕಲಕೇರಿಯ ಮಡಿವಾಳೇಶ್ವರ ಶಿವಾಚಾರ್ಯರು, ಕುಮಸಿಯ ಕಲ್ಲಲಿಂಗ ಸ್ವಾಮೀಜಿ, ದೇವರಹಿಪ್ಪರಗಿಯ ಸದಯ್ಯನಮಠದ ವೀರಗಂಗಾಧರ ಶಿವಾಚಾರ್ಯರು, ಮುಖಂಡರಾದ ಬಿ.ಎಂ. ಕೋಕರೆ, ರಾಜ್ಯ ರೈತ ಸಂಘ ಹಸಿರು ಸೇನೆಯ ಜಿಲ್ಲಾ ಉಪಾಧ್ಯಕ್ಷ ವೀರೇಶ ಗಬ್ಬೂರ, ಸಿದ್ದು ಮಲ್ಲಿಕಾರ್ಜುನ ಮಠ, ರವಿ ತೋರವಿ, ವೀರಣ್ಣ ಸಜ್ಜನ ಇತರರಿದ್ದರು.
ಚಿಂತನಾ ಸಭೆ ನಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ವಿವಿಧ ಮಠದ ಸ್ವಾಮೀಜಿಗಳು, ದ್ರಾಕ್ಷಿ ಬೆಳೆಗಾರರು, ರೈತ ಪರ ಸಂಘಟನೆಗಳು ತಮ್ಮ ಬೇಡಿಕೆಗಳ ಮನವಿಯನ್ನು ಅಪರ ಡಿಸಿ ಮಹಾದೇವ ಮುರಗಿ ಅವರ ಮೂಲಕ ಸರ್ಕಾರಕ್ಕೆ ಸಲ್ಲಿಸಿದರು.