

ಚಾಮರಾಜನಗರ: ತಾಲೂಕಿನ ಉಡಿಗಾಲ ಗ್ರಾಮದ ಮುಖ್ಯರಸ್ತೆಯಲ್ಲಿರುವ ಹಳೆಯದಾದ ಮರಗಳು ಅಪಾಯದ ಸ್ಥಿತಿಯಲ್ಲಿದ್ದು, ಅವುಗಳ ರೆಂಬೆ-ಕೊಂಬೆಗಳನ್ನು ತೆರವುಗೊಳಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಚಾಮರಾಜನಗರ-ಗುಂಡ್ಲುಪೇಟೆ ಮುಖ್ಯರಸ್ತೆಯಲ್ಲಿ ಬರುವ ಉಡಿಗಾಲ ಗ್ರಾಮದ ಬಸ್ ನಿಲ್ದಾಣ, ಪೊಲೀಸ್ ಠಾಣೆ ಹಾಗೂ ಪಶು ಚಿಕಿತ್ಸಾ ಆಸ್ಪತ್ರೆಯ ಸಮೀಪದಲ್ಲಿರುವ ಸುಮಾರು 200 ವರ್ಷಗಳು ಹಳೆಯದಾದ ಮರಗಳಿದ್ದು, ಕೆಲವು ಮರಗಳು ಅಪಾಯದ ಸ್ಥಿತಿಯಲ್ಲಿದೆ. ಇವುಗಳು ಸಾಕಷ್ಟು ಹಳೆಯದಾದ ಮರಗಳಾಗಿದ್ದು, ಈಗಾಗಲೇ ಒಂದು ಮರದ ಕೊಂಬೆ ಮಳೆ-ಗಾಳಿಗೆ ಮುರಿದು ಬಿದ್ದಿತ್ತು. ಕ್ಷಣಮಾತ್ರದಲ್ಲಿ ಹಲವರು ಅಪಾಯದಿಂದ ಪಾರಾಗಿದ್ದರು. ಈಗಲೂ ಬಸ್ ನಿಲ್ದಾಣದ ಸಮೀಪದಲ್ಲಿರುವ ಹಳೆಯದಾದ ಮರದ ಕೊಂಬೆಯೊಂದು ಬಸ್ ತಂಗುದಾಣದ ಛಾವಣಿಯ ಮೇಲೆ ಮುರಿದು ಬಿದ್ದಿದ್ದು, ಅಪಾಯ ಎದುರಾಗುವ ಸಾಧ್ಯತೆಗಳಿದೆ.
ಒಟ್ಟಾರೆಯಾಗಿ ಗ್ರಾಮದ ಮುಖ್ಯರಸ್ತೆಯಲ್ಲಿ ಬೀಳುವ ಸ್ಥಿತಿಯಲ್ಲಿರುವ 3 ಮರದ ರೆಂಬೆ-ಕೊಂಬೆಗಳನ್ನು ತೆರವುಗೊಳಿಸಬೇಕು ಎಂದು ಗ್ರಾಮಸ್ಥರು ಹಲವಾರು ಬಾರಿ ಗ್ರಾಮ ಪಂಚಾಯಿತಿ ಮತ್ತು ಅರಣ್ಯ ಇಲಾಖೆಯವರಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಜೋರಾಗಿ ಗಾಳಿ-ಮಳೆಯಾದರೇ ಮರಗಳ ಕೊಂಬೆಗಳು ಮುರಿದು ಬೀಳುವ ಸಾಧ್ಯತೆ ಇದ್ದು, ಸಂಬಂಧಪಟ್ಟವರು ಇತ್ತ ಗಮಹರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಉಡಿಗಾಲದ ಮುಖ್ಯರಸ್ತೆಯಲ್ಲಿರುವ ಮೂರು ಹಳೆಯದಾದ ಮರಗಳ ಒಣಗಿದ ರೆಂಬೆ-ಕೊಂಬೆಗಳನ್ನು ತೆರವುಗೊಳಿಸುವಂತೆ ಮನವಿ ಮಾಡಲಾಗಿದೆ. ಇತ್ತೀಚೆಗೆ ನಿರಂತರವಾಗಿ ಮಳೆ ಮತ್ತು ಗಾಳಿ ಬೀಸುತ್ತಿದ್ದು, ಮರಗಳು ಮುರಿದು ಬಿದ್ದು ಅಪಾಯಗಳು ಎದುರಾಗುವ ಮೊದಲು ಸಂಬಂಧಪಟ್ಟವರು ಎಚ್ಚೆತ್ತುಕೊಳ್ಳಬೇಕು.
ಬೆಳ್ಳಪ್ಪ, ಹಿರಿಯ ಮುಖಂಡ, ಉಡಿಗಾಲ, ಚಾಮರಾಜನಗರ