

ಶನಿವಾರಸಂತೆ: ಶನಿವಾರಸಂತೆ -ಸೋಮವಾರಪೇಟೆ ಹಾಗೂ ಶನಿವಾರಸಂತೆ -ಕುಶಾಲನಗರ ರಾಜ್ಯ ಹೆದ್ದಾರಿ ಬದಿ ಒಣಗಿರುವ ಬೃಹತ್ ಮರಗಳಿದ್ದು, ಅಪಾಯವನ್ನು ಕೈ ಬೀಸಿ ಕರೆಯುತ್ತಿವೆ.
ಶನಿವಾರಸಂತೆಯಿಂದ ಹೆದ್ದಾರಿಯ ಸುಮಾರು 20 ಕಿ.ಮೀ. ವ್ಯಾಪ್ತಿಯಲ್ಲಿ ರಸ್ತೆ ಪಕ್ಕ ಹೆಗ್ಗಳ, ಗೌಡಳ್ಳಿ, ಹುಣಸೆಕಾಯಿ ಹೊಸಳ್ಳಿ, ಮಾಲಂಬಿ, ಕಣಿವೆ ಬಸವನಹಳ್ಳಿ ಮತ್ತಿತರ ಗ್ರಾಮಗಳಿದ್ದು, ಜನಸಂಚಾರ ಅಧಿಕವಾಗಿರುತ್ತದೆ. ವಿದ್ಯಾರ್ಥಿಗಳು, ವೃದ್ಧರು ಹಾಗೂ ಸಾರ್ವಜನಿಕರು ನಿತ್ಯ ಈ ರಸ್ತೆ ಮೂಲಕ ಸಂಚರಿಸುತ್ತಾರೆ. ರಾಜ್ಯ ಹೆದ್ದಾರಿ ಆಗಿರುವುದರಿಂದ ಕೆಎಸ್ಸಾರ್ಟಿಸಿ ಬಸ್ ಹಾಗೂ ಖಾಸಗಿ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುತ್ತವೆ. ಒಣಗಿ ನಿಂತಿರುವ ರಸ್ತೆ ಬದಿ ಮರಗಳು ಯಾವಾಗ ಬೇಕಾದರೂ ಉರುಳಿ ಅನಾಹುತ ತಂದೊಡ್ಡಬಹುದು. ಗಾಳಿ, ಮಳೆ ಬಂದಾಗಲಂತೂ ಜನರು ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕು.
ಪ್ರತಿವರ್ಷ ಮಳೆ, ಗಾಳಿಗೆ ಬೃಹತ್ ಮರಗಳು ರಸ್ತೆ ಅಡ್ಡಲಾಗಿ ಉರುಳುವುದು ಸಾಮಾನ್ಯವಾಗಿದೆ. ಈ ರಸ್ತೆಗೆ ಪರ್ಯಾಯವಾಗಿ ಬೇರೊಂದು ಮಾರ್ಗ ಇಲ್ಲದಿರುವುದರಿಂದ ನಿತ್ಯ ಶಾಲೆ, ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು, ಉದ್ಯೋಗಸ್ಥರು ಪರಿತಪಿಸುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.
ಒಣಗಿ ನಿಂತ ಬೃಹತ್ ಮರಗಳಿಂದ ಅನಾಹುತ ಸಂಭವಿಸುವ ಸಾಧ್ಯತೆಗಳಿದ್ದರೂ ಸಂಬಂಧಿಸಿದವರು ಯಾರೂ ತಲೆಕೆಡಿಸಿಕೊಳ್ಳದಿರುವುದು ಮಾತ್ರ ವಿಪರ್ಯಾಸ. ಸಾರ್ವಜನಿಕರು ಈ ಬಗ್ಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತಂದು ಅಪಾಯದ ಬಗ್ಗೆ ಮನದಟ್ಟು ಮಾಡುತ್ತಿಲ್ಲ.
ಬೆಲೆ ಬಾಳುವ ಒಣಗಿದ ಮರಗಳನ್ನು ಅರಣ್ಯ ಇಲಾಖೆ ಏಕಾಏಕಿ ಕಡಿಯಲು ಅವಕಾಶವಿಲ್ಲ. ಯಾವುದೇ ಮರ ತೆರವುಗೊಳಿಸಲು ಮೆಲಾಧಿಕಾರಿಗಳಿಗೆ ಪತ್ರ ಬರೆದು ಅಲ್ಲಿಂದ ಆದೇಶ ಬಂದ ನಂತರವಷ್ಟೇ ಮರ ಕಡಿಯಬೇಕು ಎನ್ನಲಾಗುತ್ತಿದೆ.
ಇದೀಗ ಕೆಲವು ಸಂಘ-ಸಂಸ್ಥೆಯವರು ಇನ್ನು ಕಾದು ಕುಳಿತರೆ ಪ್ರಯೋಜವಿಲ್ಲ ಎಂದು ನಿರ್ಧರಿಸಿ ಅರಣ್ಯ ಇಲಾಖೆಗೆ ದೂರು ಸಲ್ಲಿಸಿ ಎಲ್ಲೆಲ್ಲಿ ಒಣಗಿದ ಮರಗಳಿವೆ ಎಂಬುದರ ವಿವರ ಸಮೇತ ಅಧಿಕಾರಿಗಳ ಗಮನ ಸೆಳೆದು ಪರಿಹಾರಕ್ಕೆ ಮನವಿ ಮಾಡಿದ್ದಾರೆ.
ಕಾಫಿ ತೋಟಗಳಲ್ಲೂ ಒಣಗಿವೆ: ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಕಾಫಿ ತೋಟಗಳಲ್ಲೂ ಅನೇಕ ಮರಗಳು ಒಣಗಿವೆ. ತೋಟದ ಮಾಲೀಕರು ಆ ಮರಗಳನ್ನು ತೆರವುಗೊಳಿಸುತ್ತಿಲ್ಲ. ನಾವು ತೆರವುಗೊಳಿಸಿದರೆ ಇಲಾಖೆ ನಮ್ಮ ಮೇಲೆ ಕ್ರಮಕ್ಕೆ ಕೈಗೊಳ್ಳುತ್ತದೆ. ನಾವು ಸಮಸ್ಯೆ ಎದುರಿಸಬೇಕು ಎಂದು ತಿಳಿಸುತ್ತಾರೆ.
ಸದ್ಯ ಮಳೆ ಆರಂಭಗೊಂಡಿದ್ದು, ಯಾವ ಸಂದರ್ಭದಲ್ಲಾದರೂ ಮರಗಳು ಉರುಳಿ ಅನಾಹುತ ಸಂಭವಿಸಬಹುದು. ಜತೆಗೆ, ರಸ್ತೆ ಬಂದ್ ಆಗಿ ತೊಂದರೆ ಅನುಭವಿಸುವ ಸಾಧ್ಯತೆಯೂ ಇದೆ. ಆದ್ದರಿಂದ, ಕಾನೂನು, ಆದೇಶ ಮತ್ತಿತರ ಏನೇ ಪ್ರಕ್ರಿಯೆಗಳನ್ನು ಮುಂದಿಟ್ಟುಕೊಂಡು ತಡ ಮಾಡುವ ಬದಲು ಅಧಿಕಾರಿಗಳು ಒಣಗಿದ ಮರಗಳ ಶೀಘ್ರ ತೆರವಿಗೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಶನಿವಾರಸಂತೆಯಿಂದ ಸೋಮವಾರಪೇಟೆ ಹಾಗೂ ಕುಶಾಲನಗರಕ್ಕೆ ತೆರಳುವ ರಸ್ತೆಯಲ್ಲಿ ಅನೇಕ ಮರಗಳು ಒಣಗಿ ನಿಂತಿವೆ. ಈ ಮರಗಳಿಂದ ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ ತೊಂದರೆ ಆಗುತ್ತಿದೆ. ಸಂಬಂಧಪಟ್ಟವರು ಕ್ರಮ ಕೈಗೊಳ್ಳುತ್ತಾರೆ ಎಂದು ಹಲವು ವರ್ಷಗಳಿಂದ ಕಾದು ಕುಳಿತಿದ್ದೇವೆ. ಈಗಲಾದರೂ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ಮುಂದಾಗುವ ಅಪಾಯಗಳಿಗೆ ಅವರೇ ಹೊಣೆ.
ಫ್ರಾನ್ಸಿಸ್ ಡಿಸೋಜ, ಕರವೇ ಅಧ್ಯಕ್ಷ, ಸೋಮವಾರಪೇಟೆ
ರಸ್ತೆಬದಿ ಒಣಗಿನಿಂತ ಮರಗಳನ್ನು ನಾವು ನೇರವಾಗಿ ಕಟ್ ಮಾಡುವಂತಿಲ್ಲ. ಬೆಲೆಬಾಳುವ ಮರಗಳಿದ್ದರೆ ಟೆಂಡರ್ ಕರೆದು ತೆರವುಗೊಳಿಸಬೇಕು. ನಮಗೆ ಅರ್ಜಿ ಸಲ್ಲಿಸಿದರೆ ಅದನ್ನು ಜಿಲ್ಲಾ ಅರಣ್ಯಾಧಿಕಾರಿಗಳಿಗೆ ಅದರ ಬೆಲೆ ಎಷ್ಟು ಎಂದು ಅಂದಾಜುಪಟ್ಟಿ ತಯಾರಿಸಿ ಕಳುಹಿಸಬೇಕು. ಈಗಾಗಲೇ ಕೆಲವು ಮರಗಳ ತೆರವಿಗೆ ಆದೇಶ ಬಂದಿದೆ. ಅಪಾಯಕಾರಿ ಎನಿಸುವ ಮರಗಳಿದ್ದರೆ ಸಾರ್ವಜನಿಕರು ನಮಗೆ ಮಾಹಿತಿ ನೀಡಬೇಕು.
ಪ್ರಫುಲ್‌ಶೆಟ್ಟಿ, ಶನಿವಾರಸಂತೆ ವಲಯ ಅರಣ್ಯಾಧಿಕಾರಿ, ಶನಿವಾರಸಂತೆ.