ಒಣಗಿ ನಿಂತಿರುವ ಬಿದಿರನ್ನು ತೆರವುಗೊಳಿಸಲು ಆಗ್ರಹ

09 HANUR 5
Published on

ಹನೂರು: ತಾಲೂಕಿನ ತಾಳುಬೆಟ್ಟ ಮಲೆ ಮಹದೇಶ್ವರಬೆಟ್ಟ ಮಾರ್ಗದ ರಸ್ತೆ ಬದಿಯಲ್ಲಿ ಒಣಗಿ ನಿಂತಿರುವ ಬಿದಿರನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಮ.ಬೆಟ್ಟ ಪ್ರಸಿದ್ದ ಧಾರ್ಮಿಕ ಯಾತ್ರಾ ಸ್ಥಳ. ಇಲ್ಲಿಗೆ ರಾಜ್ಯದ ವಿವಿಧೆಡೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಈ ಮಾರ್ಗವು ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ವ್ಯಾಪ್ತಿಯಲ್ಲಿ ಹಾದು ಹೋಗಿದ್ದು, ಬಿದಿರು ಯಥೇಚ್ಛವಾಗಿದೆ. ಬೇಸಿಗೆ ಹಿನ್ನೆಲೆ ಕೆಲವು ಕಡೆಗಳಲ್ಲಿ ಬಿದಿರು ಒಣಗಿ ರಸ್ತೆಗೆ ಬಾಗಿ ಬೀಳುವ ಸ್ಥಿತಿಯಲ್ಲಿದೆ. ಇದರಿಂದ ಅನಾಹುತಕ್ಕೆ ಆಹ್ವಾನ ನೀಡುತ್ತಿದ್ದು, ಸಂಚಾರಕ್ಕೆ ತೊಡಕಾಗಿ ಪರಿಣಮಿಸಿದೆ. ವಾಹನ ಸವಾರರು ಅದರಲ್ಲೂ ಬೈಕ್ ಸವಾರರಲ್ಲಿ ಜೀವಭಯದಿಂದ ಸಂಚರಿಸಬೇಕಾದ ಸ್ಥಿತಿ ಎದುರಾಗಿದೆ.

ಕಳೆದ ವರ್ಷ ಈ ಮಾರ್ಗದಲ್ಲಿ ಬಿದಿರು ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು. ಆದ್ದರಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ಅನಾಹುತ ಸಂಭವಿಸುವ ಮೊದಲು ಒಣಗಿ ನಿಂತಿರುವ ಬಿದಿರನ್ನು ತೆರವುಗೊಳಿಸುವಂತೆ ಸಾಮಾಜಿಕ ಕಾರ್ಯಕರ್ತ ಪೊನ್ನಾಚಿ ರಾಜು ಒತ್ತಾಯಿಸಿದ್ದಾರೆ. ಜತೆಗೆ ಶ್ರೀ ಮಲೆಮಹದೇಶ್ವರ ಸ್ವಾಮಿ ದಕ್ಷಿಣ ದ್ವಾರ ಹನೂರು ಕ್ಷೇತ್ರ ಫೇಸ್‌ಬುಕ್ ಖಾತೆಯಲ್ಲೂ ಈ ಬಗ್ಗೆ ಒತ್ತಾಯ ಕೇಳಿ ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net