ಒಡೆಯುವ ಭೀತಿಯಲ್ಲಿ ಮಿರಖಲ್ ಕೆರೆ

Mirkhal
ಹುಲಸೂರು ತಾಲೂಕಿನ ಮಿರಖಲ್ ಗ್ರಾಮಕ್ಕೆ ಶಾಸಕ ಶರಣು ಸಲಗರ ಭೇಟಿ ನೀಡಿ ಐತಿಹಾಸಿಕ ಕೆರೆ ವೀಕ್ಷಿಸಿದರು. ತಹಸೀಲ್ದಾರ್ ಶಿವಾನಂದ ಮೇತ್ರೆ, ತಾಪಂ ಇಒ ಮಹಾದೇವ ಜಮ್ಮು, ಪಿಡಿಒ ರಮೇಶ ಮಿಲಿಂದಕರ್, ಸತೀಶ್ ಪಾಟೀಲ್, ಅರ್ಜುನ ಲಂಬೆ ಇತರರಿದ್ದರು.
Published on

ಹುಲಸೂರು: ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಮಿರಖಲ್ ಗ್ರಾಮದ ಐತಿಹಾಸಿಕ ಕೆರೆ ಒಡೆಯುವ ಭೀತಿಯಲ್ಲಿದೆ. ಅತಿವೃಷ್ಟಿಯಿಂದ ಕೆರೆಯಲ್ಲಿ ಸಾಕಷ್ಟು ನೀರು ಸಂಗ್ರಹವಾಗಿದ್ದು, ಕೆಳಭಾಗದಲ್ಲಿ ಮರ‍್ನಾಲ್ಕು ರಂಧ್ರಗಳಿಂದ ನೀರು ಸೋರಿಕೆ ಆಗುತ್ತಿದ್ದರಿಂದ ಒಡೆಯುವ ಆತಂಕ ಎದುರಾಗಿದೆ.

ಕೆರೆ ಅಪಾಯದಲ್ಲಿ ಇರುವುದನ್ನು ಅರಿತ ಶಾಸಕ ಶರಣು ಸಲಗರ ಅಧಿಕಾರಿಗಳೊಂದಿಗೆ ಗ್ರಾಮಕ್ಕೆ ಭೇಟಿ ನೀಡಿ ಪರಿಸ್ಥಿತಿ ಅರಿತು ವಾಂಜರವಾಡಿ ಹಾಗೂ ಕೋಟಮಾಳ ರಸ್ತೆಯಿಂದ ಕೆರೆಗೆ ಬರುವ ನೀರನ್ನು ಜೆಸಿಬಿ ಯಂತ್ರದಿಂದ ಬೇರೆಡೆ ಹೋಗಲು ದಾರಿ ಮಾಡಿಕೊಡುವಲ್ಲಿ ಸಕಲರಾಗಿದ್ದಾರೆ. ಕೆರೆ ನೀರು ಸೋರಿಕೆ ಆಗುತ್ತಿದ್ದು, ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಕ್ರಮ ವಹಿಸಬೇಕೆಂದು ಶಾಸಕರು ದೂರವಾಣಿಯಲ್ಲಿ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಮಿರಖಲ್‌ನಿಂದ ಹಣಮಂತ ವಾಡಿ ರಸ್ತೆ ಮಧ್ಯೆ ವಿದ್ಯುತ್ ಟಿಸಿ ನೀರಿನಲ್ಲಿ ನಿಂತು ಬೀಳುವ ಹಂತಕ್ಕೆ ತಲುಪಿದೆ. ತಂತಿ ಬೇಲಿ ಇಲ್ಲದ್ದರಿಂದ ಪಾದಚಾರಿ, ಜನಜಾನುವಾರುಗಳಿಗೆ ಅಪಾಯ ಎದುರಾಗುವ ಸಾಧ್ಯತೆ ಇದೆ. ಇದನ್ನು ಕೂಡಲೇ ಸ್ಥಳಾಂತರಿಸಿ ಎಂದು ಜೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.

ತಹಸೀಲ್ದಾರ್ ಶಿವಾನಂದ ಮೇತ್ರೆ, ತಾಪಂ ಇಒ ಮಹದೇವ ಜಮ್ಮು, ಪಿಡಿಒ ರಮೇಶ ಮಿಲಿಂದಕರ್, ಜೆಸ್ಕಾಂ ಜೆಇ ಚಂದ್ರಕಾಂತ ಚಿರಡೆ, ಗ್ರಾಪಂ ಸದಸ್ಯರಾದ ಸತೀಶ ಪಾಟೀಲ್, ಅರ್ಜುನ್ ಲಂಬೆ, ಸತ್ಯವಾನ ಸಿಂಧೆ, ಪ್ರಮುಖರಾದ ನಾಗೇಶ ಮದ್ನೆ, ಮಹಾದೇವ ರಣಮಲ್ಲೆ, ಅಶೋಕ ಲಂಬೆ, ಗಣೇಶ ಪಾಟೀಲ್, ರಮೇಶ ಸೂರ್ಯವಂಶಿ ಇತರರಿದ್ದರು.

ಸತತ ಮಳೆಗೆ ರಸ್ತೆ ಜಲಾವೃತ, ಹೆದ್ದಾರಿ ಸಂಚಾರ ಬಂದ್ ಹುಲಸೂರು ಸೇರಿ ತಾಲೂಕಿನಾದ್ಯಂತ ಧಾರಾಕಾರ ಮಳೆ ಸುರಿಯುತ್ತಿದ್ದು, ವಿವಿಧ ರಸ್ತೆಗಳ ಸಂಚಾರ ಬಂದ್ ಆಗಿದೆ. ಭಾಲ್ಕಿ ತಾಲೂಕಿನ ಇಂಚೂರ ಸೇತುವೆ ಮೇಲಿಂದ ಅಪಾರ ಪ್ರಮಾಣದಲ್ಲಿ ನೀರು ಹರಿಯುತ್ತಿದರಿಂದ ಬೀದರ್-ಲಾತೂರ-ಭಾಲ್ಕಿ ರಾಷ್ಟ್ರೀಯ ಹೆದ್ದಾರಿ ಸಂಚಾರ ಬಂದ್ ಆಗಿ ಪ್ರಯಾಣಿಕರು ಪರದಾಡುತ್ತಿದ್ದಾರೆ. ತುಳಜಾಪುರ ದೇವಿ ದರ್ಶನಕ್ಕೆ ಹೋಗುವ ಪಾದಚಾರಿಗಳು ಏನೂ ತೋಚದೆ ಅಲ್ಲಲ್ಲಿ ಆಸರೆ ಪಡೆಯುತ್ತಿದ್ದಾರೆ. ಹಲವು ಮನೆಗಳಿಗೆ ನೀರು ನುಗ್ಗಿದ್ದರಿಂದ ದಿನಸಿ ವಸ್ತು ಹಾಗೂ ದವಸ-ಧಾನ್ಯಗಳು ಹಾಳಾಗಿವೆ. ಪಟ್ಟಣದ ದತ್ತು ಪಾಂಚಾಳ, ಮಲ್ಲಿಕಾರ್ಜುನ ಎಲಗುಂದೆ, ಶಕುಂತಲಾ ರಾಮರಾವ, ಸೂರ್ಯಕಾಂತ ಮೇತ್ರೆ, ನೈಮೊನಿಸಾ ಮಹ್ಮದ್, ದೇವಿತಾ ಬಸವರಾಜ ಸೇರಿ ಅನೇಕ ಮನೆಗಳು ಕುಸಿದಿವೆ. ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮಹಾರಾಷ್ಟ್ರದ ಧನೇಗಾಂವ್ ಜಲಾಶಯದಿಂದ ಹೆಚ್ಚುವರಿ ನೀರು ಬೀಡುತ್ತಿರುವುದರಿಂದ ಮಾಂಜ್ರಾ ತೀರದಲ್ಲಿ ಪ್ರವಾಹ ಭೀತಿ ಉಂಟಾಗಿದೆ. ಹುಲಸೂರು-ಕೊಂಗಳಿ ರಸ್ತೆ ಬಂದ್ ಆಗಿದ್ದರಿಂದ ಕೊಂಗಳಿ, ವಾಂಜರಖೇಡ ಗ್ರಾಮಗಳು ಸಂಪರ್ಕ ಕಳೆದುಕೊಂಡಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net