

ನಾಪೋಕ್ಲು: ಕೊಡವ ಜನಾಂಗ ಒಗ್ಗೂಡಿ ಕೆಲಸ ನಿರ್ವಹಿಸಿದರೆ ಜಿಲ್ಲೆಯ ಪ್ರಗತಿ ಸಾಧ್ಯ ಎಂದು ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಹೇಳಿದರು.
ಭಾನುವಾರ ಕೊಡವ ಸಮಾಜದ ಕ್ರೀಡಾ, ಸಾಂಸ್ಕೃತಿಕ ಮತ್ತು ಮನೋರಂಜನಾ ಕೂಟದ ವಾರ್ಷಿಕ ಒತ್ತೋರ್ಮೆ ಕೂಟದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.ಚುನಾವಣೆ ಸಂದರ್ಭ ಗೆಲುವಿಗಾಗಿ ಹೋರಾಟ ನಡೆಸುವುದು ಅನಿವಾರ್ಯ. ಬಳಿಕ ಸಾಮಾಜಿಕ ಸೇವೆಯಲ್ಲಿ ಪಕ್ಷಾತೀತವಾಗಿ ಕಾರ್ಯನಿರ್ವಹಿಸಿದರೆ ಎಲ್ಲರ ವಿಶ್ವಾಸ ಗಳಿಸಲು ಸಾಧ್ಯ ಎಂದರು.ನಾಪೋಕ್ಲುವಿನಲ್ಲಿ ಸಮುದಾಯ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಲಾಗುವುದು. ಡಯಾಲಿಸಿಸ್ ಕೇಂದ್ರ ಸ್ಥಾಪಿಸಲು ಕ್ರಮ ವಹಿಸಲಾಗುವುದು ಎಂದರು.
ವಿಧಾನ ಪರಿಷತ್ ಸದಸ್ಯ ಮಂಡೆಪಂಡ ಸುಜಾ ಕುಶಾಲಪ್ಪ ಮಾತನಾಡಿ, ಹವಾಮಾನ ವೈಪರೀತ್ಯದಿಂದ ಕೊಡವರ ಕೃಷಿಗೆ ಸಮಸ್ಯೆ ಎದುರಾಗಿವೆ. ಇದನ್ನು ನಿವಾರಿಸಲು ಗಮನ ಹರಿಸುವೆ ಎಂದರು.