

ಚನ್ನರಾಯಪಟ್ಟಣ: ಗ್ರಾಮಸ್ಥರಲ್ಲಿ ಒಗ್ಗಟ್ಟು ಹಾಗೂ ಸಹಬಾಳ್ವೆ ಇದ್ದಲ್ಲಿ ಮಾತ್ರ ಗ್ರಾಮದ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.
ತಾಲೂಕಿನ ಹೊನ್ನಶೆಟ್ಟಿಹಳ್ಳಿ ಗ್ರಾಮದಲ್ಲಿ ಹೊನ್ನಾದೇವಿ ರಂಗಮಂಟಪ ನಿರ್ಮಾಣ ಕಾಮಗಾರಿಗೆ ಗುರುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಊರಿನಲ್ಲಿ ಧಾರ್ಮಿಕ ಹಾಗೂ ಇತರ ಯಾವುದೇ ಅಭಿವೃದ್ಧಿ ಕಾರ್ಯಗಳಿದ್ದರೂ ಪಕ್ಷ-ಭೇದ ಬದಿಗೊತ್ತಿ ನಿಲ್ಲಬೇಕು ಎಂದರು.
ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣಕ್ಕೆ ಈಗಾಗಲೇ ಭೂಮಿಪೂಜೆ ನೆರವೇರಿಸಲಾಗಿದ್ದು, ಜನವರಿ ತಿಂಗಳ ಅಂತ್ಯದೊಳಗೆ ಕಾರ್ಯಾರಂಭವಾಗಲಿದೆ. ಗ್ರಾಮದಲ್ಲಿ ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಇದ್ದು, ಶೀಘ್ರ ಬಗೆಹರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಈ ಬಾರಿ ತೀವ್ರವಾಗಿ ಮಳೆ ಸುರಿದ ಪರಿಣಾಮ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ಹದಗೆಟ್ಟಿದ್ದು, ಪಿಡಬ್ಲುೃಡಿ, ಜಿಲ್ಲಾ ಪಂಚಾಯಿತಿ ಹಾಗೂ ವಿವಿಧ ಇಲಾಖೆಗಳ ಯೋಜನೆಗಳಡಿ ಅನುದಾನ ಕಲ್ಪಿಸಿ ಡಾಂಬರೀಕರಣದೊಂದಿಗೆ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಎಚ್.ಜಿ.ರಾಮಕೃಷ್ಣ, ಟಿಎಪಿಸಿಎಂಎಸ್ ಅಧ್ಯಕ್ಷ ಕುಂಬಾರಹಳ್ಳಿ ರಮೇಶ್, ಬಾಳಗಂಚಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜೇಗೌಡ, ಗ್ರಾಮದ ಪ್ರಮುಖರಾದ ಚಂದ್ರಣ್ಣ, ಕುಮಾರ್, ಡೇರಿ ಕಿಟ್ಟಣ್ಣ, ನಾರಾಯಣ್, ಹೊನ್ನಶೆಟ್ಟಿಗೌಡ ಇದ್ದರು.