ಒಗ್ಗಟ್ಟಿನಿಂದ ಪರಿಸ್ಥಿತಿ ನಿಭಾಯಿಸಿ, ಜನರಲ್ಲಿ ಆತ್ಮಸ್ಥೈರ್ಯ ತುಂಬಿ

Nitesh Patil DC
Published on

ಧಾರವಾಡ: ಖಾಸಗಿ ಆಸ್ಪತ್ರೆಗಳು ತಮ್ಮಲ್ಲಿ ಲಭ್ಯವಿರುವ ಮಾನವ ಸಂಪನ್ಮೂಲ ಹಾಗೂ ಹಾಸಿಗೆಗಳ ಸಂಖ್ಯೆಗೆ ಅನುಗುಣವಾಗಿ ಸೌಲಭ್ಯಗಳನ್ನು ಕ್ರೋಡೀಕರಿಸಿ ದೇಶಕ್ಕೆ ಎದುರಾಗಿರುವ ಕೋವಿಡ್ ಸಂಕಷ್ಟವನ್ನು ಸಮರ್ಥವಾಗಿ ಎದುರಿಸಲು ಕೈ ಜೋಡಿಸಬೇಕು. ಸೋಂಕಿತರಿಗೆ ಭರವಸೆದಾಯಕ ಚಿಕಿತ್ಸೆ ನೀಡಿ, ಆತ್ಮಸ್ಥೈರ್ಯ ಹೆಚ್ಚಿಸಬೇಕು. ಸರ್ಕಾರ ಮತ್ತು ಜಿಲ್ಲಾಡಳಿತ ಆಸ್ಪತ್ರೆಗಳಿಗೆ ಅಗತ್ಯ ಸಹಕಾರ ನೀಡುತ್ತಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಖಾಸಗಿ ಆಸ್ಪತ್ರೆಗಳ ವೈದ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆಗೆ ಅನುಗುಣವಾಗಿ ಪ್ರತಿ ಸೋಂಕಿತರಿಗೂ ಹಾಸಿಗೆ, ಚಿಕಿತ್ಸೆ ದೊರೆಯುವಂತೆ ಮಾಡುವುದು ಸರ್ಕಾರದ ಜತೆಗೆ ಖಾಸಗಿ ಆಸ್ಪತ್ರೆಗಳ ಜವಾಬ್ದಾರಿಯೂ ಆಗಿದೆ ಎಂದರು.

ಖಾಸಗಿ ಆಸ್ಪತ್ರೆಗಳು ಸೌಮ್ಯ ಲಕ್ಷಣ ಇರುವ ಹಾಗೂ ಲಕ್ಷಣ ರಹಿತ ರೋಗಿಗಳನ್ನು ಹೋಂ ಐಸೊಲೇಷನ್​ಗೆ ಶಿಫಾರಸು ಮಾಡಬೇಕು. ಜಿಲ್ಲಾಡಳಿತ ಕೂಡ ಅಂತಹ ವ್ಯಕ್ತಿಗಳಿಗೆ ಕೋವಿಡ್ ಕೇರ್ ಸೆಂಟರ್​ಗಳಲ್ಲಿ 5 ಸಾವಿರಕ್ಕೂ ಅಧಿಕ ಹಾಸಿಗೆಗಳನ್ನು ಸಿದ್ಧಮಾಡಿದೆ. ತೀವ್ರ ಉಸಿರಾಟದ ತೊಂದರೆ ಹಾಗೂ ಇತರ ಲಕ್ಷಣಗಳಿರುವ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಬೇಕು. ಯಾವುದೇ ಆಸ್ಪತ್ರೆಗಳು ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯಡಿ ನೋಂದಣಿಯಾಗಲು ಬಯಸಿದರೆ ತಕ್ಷಣ ಅಗತ್ಯ ಆಡಳಿತಾತ್ಮಕ ಕ್ರಮ ಕೈಗೊಂಡು ಸಹಕರಿಸಬೇಕು. ಕರೊನಾ ವ್ಯಾಪಕವಾಗಿ ಹರಡುತ್ತಿರುವ ಈ ಸಂದರ್ಭದಲ್ಲಿ ಜೀವ ಉಳಿಸುವುದು ಮುಖ್ಯ ಎಂದರು.

ವಿವಿಧ ಖಾಸಗಿ ಆಸ್ಪತ್ರೆಗಳ ವೈದ್ಯರು ಮಾತನಾಡಿ, ಮಕ್ಕಳು, ಹೆರಿಗೆ, ಕ್ಯಾನ್ಸರ್ ಮತ್ತಿತರ ವಿಶೇಷ ಪ್ರಕರಣಗಳಿಗೆ ಮೀಸಲಾಗಿರುವ ಆಸ್ಪತ್ರೆಗಳಿಗೆ ಅದೇ ವರ್ಗದ ಕೋವಿಡ್ ಸೋಂಕಿತರನ್ನು ಕಳುಹಿಸಿದರೆ ಚಿಕಿತ್ಸೆ ನೀಡಲು ಸಹಕಾರಿಯಾಗುತ್ತದೆ ಎಂದರು.

ಹೆಸ್ಕಾಂ ಪ್ರಧಾನ ವ್ಯವಸ್ಥಾಪಕ ಇಬ್ರಾಹಿಂ ಮೈಗೂರ, ಡಿಮ್ಹಾನ್ಸ್ ಮುಖ್ಯ ಆಡಳಿತಾಧಿಕಾರಿ ಡಾ. ಷಣ್ಮುಖ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಯಶವಂತ ಮದೀನಕರ್, ಜಿಲ್ಲಾ ಆರ್​ಸಿಚ್ ಅಧಿಕಾರಿ ಡಾ. ಎಸ್.ಎಂ. ಹೊನಕೇರಿ, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ. ಶಶಿ ಪಾಟೀಲ, ಹಿರಿಯ ಕೆಎಎಸ್ ಅಧಿಕಾರಿ ಶಾರದಾ ಕೋಲಕಾರ, ಐಎಂಎ ಅಧ್ಯಕ್ಷ ಡಾ. ಸಂದೀಪ್ ಪ್ರಭು, ಇತರರು ಇದ್ದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net