

ಧಾರವಾಡ: ತಳಮಟ್ಟದಲ್ಲಿ ಪಕ್ಷ ಸಂಘಟನೆ ಮಾಡುವವರಿಗೆ ಮಾತ್ರ ಪಕ್ಷದಲ್ಲಿ ಹೆಚ್ಚಿನ ಅವಕಾಶವಿವೆ. ವಿಮಾನ ಇಳಿದು ಬಂದು ಟಿಕೆಟ್ ಕೊಡಿ ಎಂದು ಕೇಳುವವರನ್ನು ಪಕ್ಷ ಎಂದಿಗೂ ಸಹಿಸುವುದಿಲ್ಲ ಎಂದು ಹೇಳುವ ಮೂಲಕ ಕೇವಲ ಟಿಕೆಟ್ ಕೇಳಬೇಡಿ, ಪಕ್ಷ ಸಂಘಟನೆಗೆ ಮೊದಲು ಆದ್ಯತೆ ನೀಡಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಪಕ್ಷದ ನಾಯಕರಿಗೆ ಕಿವಿಮಾತು ಹೇಳಿದ್ದಾರೆ.
ನಗರದ ಖಾಸಗಿ ಹೋಟೆಲ್ನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬೆಳಗಾವಿ ವಿಭಾಗ ಮಟ್ಟದ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಪಕ್ಷದಿಂದ ಪಡೆಯುವ ಲಾಭದ ಲೆಕ್ಕ ಮಾಡುವುದನ್ನು ಬಿಟ್ಟು ಪಕ್ಷ ಬೆಳೆಸಲು ಏನೆಲ್ಲಾ ಕೆಲಸ ಮಾಡಿದ್ದೀರಿ ಎಂದು ನಿಮ್ಮನ್ನೇ ನೀವು ಕೇಳಿಕೊಳ್ಳಿ. ಶಾಸಕರಾಗಲಿ, ಮಾಜಿ ಶಾಸಕರಾಗಲಿ, ಪಕ್ಷದ ಉತ್ತಮ ಹುದ್ದೆಯಲ್ಲಿರಲಿ ಪಕ್ಷ ಸಂಘಟನೆಗೆ ತಳಮಟ್ಟದಲ್ಲಿ ಕಾರ್ಯ ಮಾಡಲೇಬೇಕು ಎಂದರು.
ಧಾರವಾಡ ಸೇರಿ ಹಲವು ಜಿಲ್ಲೆಗಳಲ್ಲಿ ಪಕ್ಷದ ಮುಖಂಡರಲ್ಲೇ ಒಳಬೇಗುದಿಗಳಿವೆ. ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಆಗುತ್ತಿಲ್ಲ. ಇದರ ಲಾಭವನ್ನು ಬಿಜೆಪಿ ಪಡೆಯುತ್ತಿದೆ. ಹೀಗಾಗಿ ಪಕ್ಷ ಒಡೆಯುವ ಕೆಲಸ ಮಾಡದೆ ಒಗ್ಗಟ್ಟಾಗಿ ಕೆಲಸ ಮಾಡಬೇಕು. ಪಕ್ಷ ಒಡೆಯುವ ಕೆಲಸ ಮಾಡುವವರ ವಿರುದ್ಧ ಶಿಸ್ತು ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್.ಆರ್. ಪಾಟೀಲ ಮಾತನಾಡಿ ಜಿಲ್ಲಾಧ್ಯಕ್ಷರು, ಬ್ಲಾಕ್ ಅಧ್ಯಕ್ಷರು ಹಾಗೂ ಮುಖಂಡರು ಆಗಾಗ ಸಭೆ ನಡೆಸಿ, ಸಂಘಟನೆ ಕುರಿತು ರ್ಚಚಿಸಬೇಕು. ಆರೋಗ್ಯ ಹಸ್ತ ಕಾರ್ಯಕ್ರಮವನ್ನು ಎಲ್ಲರಿಗೂ ಮುಟ್ಟಿಸಬೇಕು ಎಂದರು. ಮಾಜಿ ಸಚಿವೆ ಉಮಾಶ್ರೀ, ಶಾಸಕರಾದ ಲಕ್ಷ್ಮೀ ಹೆಬ್ಬಾಳಕರ, ಅಂಜಲಿ ನಿಂಬಾಳ್ಕರ, ಕುಸುಮಾವತಿ ಶಿವಳ್ಳಿ, ಪ್ರಸಾದ ಅಬ್ಬಯ್ಯ, ಜಿಲ್ಲಾಧ್ಯಕ್ಷ ಅಲ್ತಾಫ ಹಳ್ಳೂರ, ವೀರಣ್ಣ ಮತ್ತಿಕಟ್ಟಿ, ಕೆಪಿಸಿಸಿ ಪದಾಧಿಕಾರಿ ನಾಗರಾಜ ಗೌರಿ, ಬಸವರಾಜ ಮಲಕಾರಿ, ಧಾರವಾಡ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಉತ್ತರ ಕನ್ನಡ, ಹಾವೇರಿ, ಗದಗ ಜಿಲ್ಲೆಗಳ ಪದಾಧಿಕಾರಿಗಳು ಇದ್ದರು.
ಬಿಜೆಪಿ ಅಧಿಕಾರಕ್ಕೆ ಬಂದಾಗಲೇ ಪ್ರವಾಹ
ಧಾರವಾಡ: ಬಿಜೆಪಿ ಪಕ್ಷ ಯಾವಾಗಲೂ ಒಡೆದ ಮನೆ. ಆ ಪಕ್ಷ ಅಧಿಕಾರಕ್ಕೆ ಬಂದಾಗಲೆಲ್ಲ ಪ್ರವಾಹ ಉಂಟಾಗುತ್ತದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಎಸ್.ಆರ್. ಪಾಟೀಲ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಈ ಹಿಂದೆ ಅಧಿಕಾರಿದಲ್ಲಿದ್ದಾಗ ಮೂರು ಜನ ಮುಖ್ಯಮಂತ್ರಿಗಳಾಗಿ ಹೋಗಿದ್ದಾರೆ. ಈಗಲೂ ಪಕ್ಷದಲ್ಲಿ ಆಂತರಿಕ ಭಿನ್ನಾಭಿಪ್ರಾಯವಿದೆ. ಈ ಸರ್ಕಾರ ಅಧಿಕಾರಕ್ಕೆ ಬಂದಾಗ ಪ್ರವಾಹ ಉಂಟಾಗುವುದರ ಜೊತೆಗೆ ಭ್ರಷ್ಟಾಚಾರ ಸಹ ಮಿತಿಮೀರುತ್ತದೆ ಎಂದರು.
ಸಾರ್ವಜನಿಕ ಲೆಕ್ಕ ಪತ್ರ ಸಮಿತಿಗೆ ನಮ್ಮವರೇ ಆದ ಎಚ್.ಕೆ. ಪಾಟೀಲ ಅಧ್ಯಕ್ಷರಾಗಿದ್ದಾರೆ. ನಾನು ಸಮಿತಿ ಸದಸ್ಯನಾಗಿ ಕೆಲಸ ಮಾಡುತ್ತಿದ್ದೇನೆ. ಯಾವುದಾದರೂ ದೂರು ಬಂದಾಗ ಪರಿಶೀಲನೆ ಮಾಡುವ ಅಧಿಕಾರ ಇದೆ. ಆದರೆ ಪರಿಶೀಲನೆಗೆ ಹೋಗದಂತೆ ಸ್ಪೀಕರ್ ಹೇಳಿದ್ದಾರೆ. ಅವರೇ ಹೀಗೆ ಹೇಳಿದರೆ ಅದರ ಅರ್ಥ ಏನು? ಎಂದು ಪಾಟೀಲ ಅಸಮಾಧಾನ ವ್ಯಕ್ತಪಡಿಸಿದರು.