ಒಗ್ಗಟ್ಟಿಗೆ ಒಲಿದ ಅಭೂತಪೂರ್ವ ಗೆಲುವು

Umesh Katti
Published on

ಹುಕ್ಕೇರಿ: ಬೆಳಗಾವಿ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಬಹುಮತ ಸಾಧಿಸುವ ಮೂಲಕ ಮೊದಲ ಬಾರಿಗೆ ಪಾಲಿಕೆಯ ಮೇಲೆ ಕನ್ನಡ ಧ್ವಜ ಹಾರಿಸಿದೆ ಎಂದು ಸಚಿವ ಉಮೇಶ ಕತ್ತಿ ಹೇಳಿದರು.

ಸ್ಥಳೀಯ ಪಿಕಾರ್ಡ್ ಬ್ಯಾಂಕ್ ಆವರಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಜನ ಬುದ್ಧಿವಂತರು ಎನ್ನುವುದನ್ನು ಈ ಗೆಲುವು ನೀಡುವ ಮೂಲಕ ತೋರಿಸಿದ್ದಾರೆ. 58 ಸ್ಥಾನಗಳ ಪೈಕಿ 35 ಸ್ಥಾನಗಳಲ್ಲಿ ಬಿಜೆಪಿಗೆ ಗೆದ್ದಿದೆ ಎಂದರು.

ಸಂಘ ಪರಿವಾರದವರು ನಗರದ ಮನೆ ಮನೆಗೆ ತೆರಳಿ ನಮ್ಮ ಸರ್ಕಾರಗಳ ಜನಪರ ಸೇವೆ ತಿಳಿಸಿಕೊಡುವಲ್ಲಿ ಮುತುವರ್ಜಿ ವಹಿಸಿದ್ದರು. ಇದು ಬಿಜೆಪಿ ಗೆಲುವಿಗೆ ಮೂಲ ಕಾರಣವಾಗಿದೆ. ಹೈಕಮಾಂಡ್ ನಿರ್ದೇಶನ ಮತ್ತು ಜವಾಬ್ದಾರಿ ಹಂಚಿಕೆ ಮಾಡಿದಂತೆ ಸಚಿವರು, ಶಾಸಕರು ಹಾಗೂ ಮುಖಂಡರು ವಾರ್ಡ್‌ಗಳಲ್ಲಿ ಹಗಲಿರುಳು ದುಡಿಯುವ ಮೂಲಕ ಜನರ ಮನೆ-ಮನ ತಲುಪಿದ್ದರಿಂದಲೇ ಗೆಲುವು ಲಭಿಸಿದೆ. ಜನರಿಗೆ ನೀಡಿದ ಆಶ್ವಾಸನೆಯಂತೆ ಅಭಿವೃದ್ಧಿ ಕೈಗೊಳ್ಳುವ ಮೂಲಕ ನುಡಿದಂತೆ ನಡೆಯುವ ಪಕ್ಷ ನಮ್ಮದು ಎಂಬುದನ್ನು ಸಾಬೀತು ಮಾಡುವುದಾಗಿ ಕತ್ತಿ ತಿಳಿಸಿದರು.

ಚಿಕ್ಕೋಡಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಜಯಗೌಡ ಪಾಟೀಲ, ತಾಲೂಕಾಧ್ಯಕ್ಷ ರಾಚಯ್ಯ ಹಿರೇಮಠ, ಪುರಸಭೆ ಅಧ್ಯಕ್ಷ ಎ.ಕೆ.ಪಾಟೀಲ, ಆನಂದ ಗಂಧ, ಕಲಗೌಡ ಪಾಟೀಲ, ಪರಗೌಡ ಪಾಟೀಲ, ಪವನ ಪಾಟೀಲ, ರಾಜು ಮುನ್ನೋಳಿ, ಶಿವನಗೌಡ ಪಾಟೀಲ, ನೀಲಪ್ಪ ಕೋಲೆ, ಶಹಜಾನ ಬಡಗಾವಿ, ಗಿರೀಶ ಕುಲಕರ್ಣಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net