ಒಗ್ಗಟ್ಟಾಗಿ ಜಿಲ್ಲೆ ಅಭಿವೃದ್ಧಿ ಮಾಡೋಣ

28BK1
ಬಸವಕಲ್ಯಾಣದಲ್ಲಿ ಬ್ಲಾಕ್ ಕಾಂಗ್ರೆಸ್ ಸೋಮವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭವನ್ನು ಸಂಸದ ಸಾಗರ್ ಖಂಡ್ರೆ ಉದ್ಘಾಟಿಸಿದರು. ಎಂಎಲ್‌ಸಿ ಡಾ.ಚಂದ್ರಶೇಖರ ಪಾಟೀಲ್, ಮಾಜಿ ಎಂಎಲ್‌ಸಿ ವಿಜಯಸಿಂಗ್, ಮಾಲಾ ಬಿ.ನಾರಾಯಣರಾವ, ಬಸವರಾಜ ಜಾಬಶೆಟ್ಟಿ, ಧನರಾಜ ತಾಳಂಪಳ್ಳಿ, ಅಮೃತರಾವ ಚಿಮಕೋಡೆ, ನೀಲಕಂಠ ರಾಠೋಡ್, ಬಾಬು ಹೊನ್ನಾನಾಯಕ, ರವಿ ಗಾಯಕವಾಡ ಇದ್ದರು.
Published on

ಬಸವಕಲ್ಯಾಣ: ಸಮಸ್ಯೆಗಳಿಗೆ ಸ್ಪಂದಿಸುವುದರ ಜತೆಗೆ ಸಂಸತ್‌ನಲ್ಲಿ ನಿಮ್ಮ ಧ್ವನಿಯಾಗಿ ಕಾರ್ಯನಿರ್ವಹಿಸುವೆ ಎಂದು ಸಂಸದ ಸಾಗರ್ ಖಂಡ್ರೆ ಭರವಸೆ ನೀಡಿದರು.

ವರ್ಷಾ ಫಂಕ್ಷನ್ ಹಾಲ್‌ನಲ್ಲಿ ಮಾಜಿ ಎಂಎಲ್‌ಸಿ ವಿಜಯಸಿಂಗ್ ನೇತೃತ್ವದಲ್ಲಿ ಬಸವಕಲ್ಯಾಣ ಬ್ಲಾಕ್ ಕಾಂಗ್ರೆಸ್ ಸೋಮವಾರ ಆಯೋಜಿಸಿದ್ದ ಸಂಸದ, ಎಂಎಲ್‌ಸಿ ಹಾಗೂ ನಿಗಮ ಮಂಡಳಿಗೆ ನೇಮಕವಾದ ಪ್ರಮುಖರ ಅಭಿನಂದನಾ ಸಮಾರಂಭ ಉದ್ಘಾಟಿಸಿದ ಅವರು, ಕಿರಿಯ ವಯಸ್ಸಿನಲ್ಲೇ ನನ್ನನ್ನು ಆಯ್ಕೆ ಮಾಡಿ ಸೇವೆಗೆ ಅವಕಾಶ ಕಲ್ಪಿಸಿದ ಮತದಾರರು, ಗೆಲುವಿಗೆ ಶ್ರಮಿಸಿದ ಮುಖಂಡರು ಹಾಗೂ ಕಾರ್ಯಕರ್ತರನ್ನು ನಾನೆಂದೂ ಮರೆಯುವುದಿಲ್ಲ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದು, ಪಕ್ಷದ ಕಾರ್ಯಕರ್ತರು ಏನೇ ಸಮಸ್ಯೆ ಇದ್ದರೂ ಸ್ಪಂದಿಸಲು ಇಲ್ಲಿ ವಿಜಯಸಿಂಗ್ ಇದ್ದಾರೆ. ಅಗತ್ಯವೆನಿಸಿದರೆ ನನ್ನನ್ನೂ ಸಂಪರ್ಕಿಸಬಹುದು. ಎಲ್ಲರೂ ಸೇರಿ ಜಿಲ್ಲೆಯ ಅಭಿವೃದ್ಧಿ ಮಾಡೋಣ. ಪಕ್ಷಕ್ಕಾಗಿ ದುಡಿದ ಅನೇಕರನ್ನು ಗುರುತಿಸಿ ವಿವಿಧ ಸ್ಥಾನಮಾನ ನೀಡಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಜನರಿಗೆ ಜವಾಬ್ದಾರಿ ನೀಡಲಿದೆ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ್ ಮಾತನಾಡಿ, ಕಾಂಗ್ರೆಸ್ ಸೋಲಿಸಲು ವಿರೋಧಿಗಳಿಗೆ ಆಗುವುದೇ ಇಲ್ಲ. ಒಗ್ಗಟಿದ್ದರೆ ಗೆಲುವು ನಮ್ಮದೇ ಆಗುತ್ತದೆ. ವಿಜಯಸಿಂಗ್ ಸೋತರೂ ಕ್ಷೇತ್ರದಲ್ಲಿ ಉಳಿದು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ. ಇದೇ ಒಗ್ಗಟ್ಟು ಪಕ್ಷದಲ್ಲಿದ್ದರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಬಾವುಟ ಹಾರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ ಬಿ.ನಾರಾಯಣರಾವ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿಗಳ ಜಾರಿ ಪ್ರತಿಪಕ್ಷಗಳಿಗೆ ಸಹಿಸಲು ಆಗುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಲು ಷಡ್ಯಂತ್ರ ನಡೆಸಲಾಗುತ್ತಿದೆ. ಸಿಎಂ ಪರ ಇಡೀ ಕಾಂಗ್ರೆಸ್ ಇದೆ. ಕ್ಷೇತ್ರದಲ್ಲಿ ಬಿ.ನಾರಾಯಣರಾವ ಶಾಸರಾಗಿದ್ದಾಗ ಅನೇಕ ಅಭಿವೃದ್ಧಿ ಕೆಲಸ ಮಾಡಿದ್ದರು. ಅವರ ಕನಸು ಸಾಕಾರಕ್ಕೆ ಪ್ರಯತ್ನಿಸೋಣ ಎಂದರು.

ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಅಮೃತರಾವ ಚಿಮಕೋಡೆ ಮಾತನಾಡಿ, ಗ್ಯಾರಂಟಿ ಯೋಜನೆಗಳಿಂದ ಸರ್ಕಾರ ಸ್ತ್ರೀ ಶಕ್ತಿಗೆ ಆರ್ಥಿಕ ಬಲ ತುಂಬುವ ಕೆಲಸ ಮಾಡಿದೆ. ಯೋಜನೆಗಳ ಕುರಿತು ಕಾರ್ಯಕರ್ತರು ಜನಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್ ಮಾತನಾಡಿ, ೨೦೧೯ರ ಲೋಕಸಭೆ ಚುನಾವಣೆಯಲ್ಲಿ ಬಸವಕಲ್ಯಾಣ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಗೆ ೩೮ ಸಾವಿರ ಮತಗಳ ಲೀಡ್ ಸಿಕ್ಕಿತ್ತು. ಆದರೆ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ೯೦೦೦ಕ್ಕೂ ಹೆಚ್ಚು ಮತಗಳ ಲೀಡ್ ದೊರೆತಿದೆ. ಕಾರ್ಯಕರ್ತರು ಹೀಗೆ ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಇದು ಇನ್ನಷ್ಟು ಹೆಚ್ಚಾಗಲಿದೆ ಎಂದರು.

ಬೀದರ್ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನೀಲಕಂಠ ರಾಠೋಡ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಮುಖಂಡರಾದ ಧನರಾಜ ತಾಳಂಪಳ್ಳಿ, ರವಿ ಗಾಯಕವಾಡ, ವೈಜಿನಾಥ ಕಾಮಶೆಟ್ಟಿ, ಬಾಬು ಹೊನ್ನಾನಾಯಕ, ಬಸವರಾಜ ಸ್ವಾಮಿ, ಶಿವರಾಜ ನರಶೆಟ್ಟೆ, ಸುನೀಲ ಪಾಟೀಲ್, ಅರ್ಜುನ ಕನಕ, ಡಿ.ಕೆ. ದಾವೂದ್, ತಹಸೀನ್ ಅಲಿ ಜಮಾದಾರ, ದಿಲೀಪ ಸಿಂಧೆ, ಯುವರಾಜ ಬೆಂಡೆ, ದತ್ತಾತ್ರೇಯ ಮೂಲಗೆ, ರವೀಂದ್ರ ಬೋರಾಳೆ, ಸವಿತಾ ಕಾಂಬಳೆ, ಅನುಸೂಯಾ ಮಂಠಾಳಕರ್, ರಾಮ ಜಾಧವ್, ಡಾ.ಖದೀರೋದ್ದಿನ್, ಜಿ.ಆರ್. ಪಾಟೀಲ್, ವಿಲಾಸ ಮಾಶೆಟ್ಟೆ, ಮನೋಜ ಮಾಶೆಟ್ಟೆ, ರವೀಂದ್ರ ಕೊಳಕೂರ, ಶಿವಕುಮಾರ ಬಿರಾದಾರ, ಅಂಗದರಾವ ಜಗತಾಪ, ದತ್ತು ಬೆಂಡೆ, ವಿಶ್ವನಾಥ ಖಳಾಳೆ, ಓಂಪ್ರಕಾಶ ಪಾಟೀಲ್, ಗಿರೀಶ ತಾಂಬೋಳೆ, ಖಲೀಲ್ ಅಹ್ಮದ್, ಏಜಾಜ್ ಲಾತೂರೆ, ರೈಸೋದ್ದಿನ್, ಸದಾನಂದ ಹಳ್ಳೆ ಇತರರಿದ್ದರು. ನಿತ್ಯಾನಂದ ಮಂಠಾಳಕರ್ ನಿರೂಪಣೆ ಮಾಡಿದರು.

ಸಂಸದ ಸಾಗರ್ ಖಂಡ್ರೆ, ಎಂಎಲ್‌ಸಿ ಡಾ.ಚಂದ್ರಶೇಖರ ಪಾಟೀಲ್, ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ ಬಿ.ನಾರಾಯಣರಾವ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಅಮೃತರಾವ ಚಿಮಕೋಡೆ, ಬುಡಾ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಮತ್ತು ನಗರಸಭೆ, ಆಶ್ರಯ ಸೇರಿ ವಿವಿಧ ಸಮಿತಿ ನಾಮನಿರ್ದೇಶಿತ ಸದಸ್ಯರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

ದಿನದ ೨೪ ಗಂಟೆ ಮೊಬೈಲ್ ಆನ್: ಕೆಲಸ ಮಾಡಲು ಬಸವಕಲ್ಯಾಣ ಕ್ಷೇತ್ರಕ್ಕೆ ಬಂದಿದ್ದೇನೆ. ಸದಾ ನಿಮ್ಮ ಜತೆಗಿದ್ದು ಕಷ್ಟ-ಸುಖಗಳಲ್ಲಿ ಭಾಗವಹಿಸುವೆ. ದಿನದ ೨೪ ಗಂಟೆ ನನ್ನ ಮೊಬೈಲ್ ಆನ್ ಇರುತ್ತದೆ. ಯಾವಾಗ ಬೇಕಾದರೂ ಮಾತಾಡಬಹುದು ಎಂದು ಮಾಜಿ ಎಂಎಲ್‌ಸಿ ವಿಜಯಸಿಂಗ್ ಅಭಯ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಅವರು, ಅಧಿಕಾರ ಮುಖ್ಯವಲ್ಲ. ಜನಸೇವೆ ಮಾಡಬೇಕು ಎಂಬುದೇ ನನ್ನ ಮುಖ್ಯ ಆಶಯ. ಕೆಲಸ ಮಾಡಲು ನಿಮ್ಮ ಪ್ರೀತಿ ವಿಶ್ವಾಸ, ಬೆಂಬಲ ಸಾಕು. ರಾಜ್ಯದಲ್ಲಿ ನಮ್ಮ ಪಕ್ಷದ ಸರ್ಕಾರವಿದೆ. ಜನರ ಹಾಗೂ ನಿಮ್ಮೆಲ್ಲರ ಸಮಸ್ಯೆಗಳಿಗೆ ಸ್ಪಂದಿಸಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ವಿಜಯಸಿಂಗ್ ಸೋತರೂ ಕ್ಷೇತ್ರದಲ್ಲಿ ಜನರ ಮಧ್ಯೆ ಬೆರೆತು ಕೆಲಸ ಮಾಡುತ್ತಿದ್ದಾರೆ. ಮುಖಂಡರು ಮತ್ತು ಕಾರ್ಯಕರ್ತರ ಪರಿಶ್ರಮದಿಂದಾಗಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬಸವಕಲ್ಯಾಣ ಕ್ಷೇತ್ರದಲ್ಲೂ ಲೀಡ್ ಸಿಕ್ಕಿದೆ.

| ನೀಲಕಂಠ ರಾಠೋಡ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net