

ಚಿತ್ರದುರ್ಗ: ಬಹುತ್ವ ಭಾರತದಲ್ಲಿ ಧರ್ಮ ಗುರಿಯಾಗಿಸಿಕೊಂಡು 10 ವರ್ಷಗಳಿಂದಲೂ ಆಕ್ರಮಣ ನಡೆಸುತ್ತಿರುವ ಕೇಂದ್ರದ ಸರ್ವಾಧಿಕಾರಿ ನಡೆ ವಿರೋಧಿಸಿ, ಪ್ರತಿಭಟಿಸುವ ಉದ್ದೇಶದಿಂದ ಸೆ. 14ರಂದು ಬೆಂಗಳೂರಿನಲ್ಲಿ ಸಮಾಲೋಚನಾ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಇಡೀ ಒಕ್ಕೂಟ ವ್ಯವಸ್ಥೆಯನ್ನೇ ನಾಶಪಡಿಸಲು ಹೊರಟಿದೆ. ಇದನ್ನು ರಕ್ಷಿಸದ ಹೊರತು ಪ್ರಜಾಪ್ರಭುತ್ವದಲ್ಲಿ ಸಂವಿಧಾನವೂ ಉಳಿಯದು. ಪ್ರಶ್ನಿಸುವ ವಿರೋಧ ಪಕ್ಷಗಳೆ, ಇರಬಾರದೆನ್ನುವ ರೀತಿಯಲ್ಲಿ ವರ್ತಿಸುತ್ತಿದೆ ಎಂದು ದೂರಿದರು.
ರಾಷ್ಟ್ರಪತಿ, ರಾಜ್ಯಪಾಲರನ್ನು ನಾಮಕಾವಸ್ಥೆಗಷ್ಟೆ ಇಟ್ಟುಕೊಂಡಿದೆ. ಕೇಂದ್ರ ಮತ್ತು ರಾಜ್ಯಗಳ ನಡುವೆ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕಾದ ರಾಜ್ಯಪಾಲರು ಕೀ ಕೊಟ್ಟ ಗೊಂಬೆಯಂತೆ ಕುಣಿಯುತ್ತ, ಸಂವಿಧಾನ ವಿರೋಧಿ ನಡೆ ಅನುಸರಿಸುತ್ತಿದ್ದಾರೆ ಎಂದು ಬೇಸರಿಸಿದರು.
ಹಿಂದಿ ರಾಷ್ಟ್ರ ಭಾಷೆಯಲ್ಲ. ತ್ರಿಭಾಷ ಸೂತ್ರ ಒಪ್ಪಿಕೊಂಡ ಕಾರಣ ಭಾಷೆಯ ಜೊತೆ ಬದುಕೂ ಕಳೆದುಕೊಳ್ಳುತ್ತಿದ್ದೇವೆ. ಜನಪ್ರತಿನಿಧಿಗಳು ಮೌನ ವಹಿಸಿದ್ದಾರೆ. ರಾಜ್ಯದ ಸಂಸದರು ತಮ್ಮ ಪಾಲಿನ ಹಕ್ಕು ಕೇಳದಷ್ಟು ದುರ್ಬಲರಾಗಿದ್ದಾರೆ. ವಿಲೀನಿಕರಣದ ಹೆಸರಿನಲ್ಲಿ ಬ್ಯಾಂಕ್‌ಗಳಲ್ಲಿ ಕನ್ನಡಿಗರ ಉದ್ಯೋಗ ಕಿತ್ತುಕೊಳ್ಳಲಾಗುತ್ತಿದೆ. ಹೀಗಾಗಿ ಪ್ರಸ್ತುತ ಅಪಾಯಕಾರಿ ಪರಿಸ್ಥಿತಿಯಲ್ಲಿ ಪ್ರಾದೇಶಿಕ ಅಸ್ಮಿತೆ ಉಳಿಸಿಕೊಳ್ಳುವ ಹೊಣೆಗಾರಿಕೆ ಎಲ್ಲರ ಮೇಲಿದೆ ಎಂದು ಹೇಳಿದರು.
ಜಾಣಗೆರೆ ವೆಂಕಟರಾಮಯ್ಯ ಮಾತನಾಡಿ, ಕೇಂದ್ರ ಸರ್ಕಾರ ಅನ್ಯಾಯ ಪ್ರಶ್ನಿಸುವವರನ್ನು ಧಮನ ಮಾಡಲು ಹೊರಟಿದೆ. ರೈತ, ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದ್ದು, ದೇಶದ ಜನಸಾಮಾನ್ಯರ ಆದಾಯ ದುಪ್ಪಟ್ಟಾಗಿಲ್ಲ. ಜಸ್ಟಿಸ್ ಗೋಪಾಲಗೌಡ, ನಾಗಮೋಹನ್‌ದಾಸ್, ಸಾಹಿತಿ ದೇವನೂರು ಮಹದೇವ ನೇತೃತ್ವದಲ್ಲಿ ಸಭೆ ನಡೆಸಲಿದ್ದೇವೆ ಎಂದರು.
ಚಿಂತಕ ಜೆ.ಯಾದವರೆಡ್ಡಿ ಮಾತನಾಡಿ, ರಾಷ್ಟ್ರೀಯತೆ ಹೆಸರಿನಲ್ಲಿ ಕೇಂದ್ರ ಸರ್ಕಾರ ಪ್ರಾದೇಶಿಕ ಭಾಷೆ, ಸಂಸ್ಕೃತಿಯನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಸರ್ವಾಧಿಕಾರಿ ಧೋರಣೆ ವಿರುದ್ಧ ಎಚ್ಚೆತ್ತುಕೊಂಡು ಹೋರಾಟ ನಡೆಸಬೇಕಾದ ಅನಿವಾರ್ಯತೆ ಇದೆ ಎಂದು ಸಲಹೆ ನೀಡಿದರು.
ಪ್ರೊ.ರುದ್ರಪ್ಪ ಹನಗವಾಡಿ, ರೈತ ಮುಖಂಡರಾದ ಧನಂಜಯ, ರುದ್ರಸ್ವಾಮಿ, ಜಿ.ಎಸ್.ಉಜ್ಜಿನಪ್ಪ ಇತರರಿದ್ದರು.