

ಬೇತಮಂಗಲ: ಕುಟುಂಬದಲ್ಲಿ ಅಣ್ಣ&ತಮ್ಮಂದಿರು ಪ್ರತ್ಯೇಕವಾಗಿ ಜೀವನ ನಡೆಸುತ್ತಾರೆ. ಅದರಂತೆ ಕೋಲಾರ&ಚಿಕ್ಕಬಳ್ಳಾಪುರ ಜಿಲ್ಲೆಗಳ ಒಕ್ಕೂಟ ಪ್ರತ್ಯೇಕವಾಗಿದೆ ಇದಕ್ಕೆ ನನ್ನ ಅಭ್ಯಂತರವಿಲ್ಲ ಎಂದು ಕೆಜಿಎ್&ಬಂಗಾರಪೇಟೆ ಕೋಚಿಮುಲ್ ನಿರ್ದೇಶಕ ಜಯಸಿಂಹ ಕೃಷ್ಣಪ್ಪ ಪ್ರತಿಕ್ರಿಯೆ ನೀಡಿದ್ದಾರೆ.
ಕೋಲಾರ ಹಾಲು ಒಕ್ಕೂಟ ಸಂಸ್ಥಾಪಕ, ಮಾಜಿ ಸಚಿವ ದಿ.ಎಂ.ವಿ.ಕೃಷ್ಣಪ್ಪ ಅವರ ಪುತ್ರ, ಎರಡು ಬಾರಿ ಅಧ್ಯಕ್ಷರೂ, ಹಾಲಿ ನಿರ್ದೇಶಕರೂ ಆದ ಜಯಸಿಂಹ ಶುಕ್ರವಾರ ಅವರ ದೊಡ್ಡಕಾರಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೋಚಿಮುಲ್ ಪ್ರತ್ಯೇಕತೆಗೆ ಆದೇಶವಾಗಿರುವ ಹಿನ್ನೆಲೆ ತಮ್ಮಅಭಿಪ್ರಾಯ ವ್ಯಕ್ತಪಡಿಸಿದರು. ಪ್ರತ್ಯೇಕತೆ ನಂತರ ಅನೇಕ ಸವಾಲುಗಳು ಎದುರಾಗುತ್ತವೆ. ಅದನ್ನು ಮೆಟ್ಟಿನಿಂತು ಯಶಸ್ವಿಯಾಗುವುದು ಮುಖ್ಯವಾಗುತ್ತದೆ ಎಂದರು. ಹಲವು ವರ್ಷಗಳಿಂದ ಪ್ರತ್ಯೇಕತೆಗೆ ಚರ್ಚೆಗಳು ನಡೆದಿದ್ದವು. ಯಾವಾಗಲೂ ನಾನು ವಿರೋಧ ಮಾಡಿಲ್ಲ. ಒಕ್ಕೂಟ ಪ್ರತ್ಯೇಕವಾದರೆ ಮಾರುಕಟ್ಟೆ ವ್ಯವಸ್ಥೆ ಅತ್ಯಂತ ಕಷ್ಟ ಎಂದು ಹೇಳಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಎರಡೂ ಒಕ್ಕೂಟಗಳು ಪೈಪೋಟಿ ರೀತಿಯಲ್ಲಿ ಶ್ರಮಿಸಬೇಕಾಗುತ್ತದೆ ಎಂದರು.
ನಾನು 20 ವರ್ಷಗಳಿಂದ ನಿರ್ದೇಶಕನಾಗಿದ್ದು, ಎರಡು ಬಾರಿ ಅಧ್ಯಕ್ಷನಾಗಿದ್ದೇನೆ. ನಮ್ಮ ತಂದೆ ಆದರ್ಶಗಳನ್ನು ಪಾಲಿಸಿಕೊಂಡು ರೈತರ ಹಾಗೂ ಒಕ್ಕೂಟದ ಬೆಳವಣಿಗೆಗೆ ಶ್ರಮಿಸಿದ್ದೇನೆ. ನನ್ನೊಂದಿಗೆ ನಿರ್ದೇಶಕರಾಗಿದ್ದ ಸಾಕಷ್ಟು ಮಂದಿ ಚಿಕ್ಕಬಳ್ಳಾಪುರ ಒಕ್ಕೂಟಕ್ಕೆ ಸೇರಲಿದ್ದಾರೆ ಅವರೆಲ್ಲರಿಗೂ ಒಳ್ಳೆಯದಾಗಲಿ ಎಂದರು.
ವಿಭಜನೆ ಸ್ವಾಗತಾರ್ಹ
ಶ್ರೀನಿವಾಸಪುರ: ಕೋಚಿಮುಲ್ ವಿಭಜನೆಯಾಗಿರುವುದು ಒಳ್ಳೆಯದೆ. ಇದರಿಂದಾಗಿ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿನ ರೈತರ ಉಪಕಸುಬಾದ ಹೈನುಗಾರಿಕೆಯನ್ನು ಪೋತ್ಸಾಹಿಸಿದಂತೆ ಎಂದು ಕೋಚಿಮುಲ್ ನಿರ್ದೇಶಕ ಹನುಮೇಶ್ ಅಭಿಪ್ರಾಯಪಟ್ಟರು. ಕೋಚಿಮುಲ್ನ ತಾಲೂಕು ಕಚೇರಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕೋಲಾರ& ಚಿಕ್ಕಬಳ್ಳಾಪುರ ಜಿಲ್ಲೆಗಳ ಹಾಲು ಒಕ್ಕೂಟವನ್ನು ಪ್ರತ್ಯೇಕ ಮಾಡಿರುವುದಕ್ಕೆ ಸ್ವಾಗತಿಸಿದರಲ್ಲದೆ ಎರಡೂ ಜಿಲ್ಲೆಗಳಿಗೆ ರಾಜ್ಯ ಸರ್ಕಾರ ಎಲ್ಲ ರೀತಿಯ ನೆರವನ್ನು ಕಲ್ಪಸಿಕೊಡಬೇಕು ಎಂದು ಒತ್ತಾಯಿಸಿದರು. ಆದೇಶದಿಂದ ಹಾಲು ಉತ್ಪಾದಕರಿಗೆ ತೊಂದರೆಯಾಗದ ರೀತಿಯಲ್ಲಿ ಸರ್ಕಾರ ಜವಾಬ್ದಾರಿ ವಹಿಸಿಕೊಳ್ಳಬೇಕಾಗಿದೆ. ಕೋಲಾರ&ಚಿಕ್ಕಬಳ್ಳಾಪುರ ಹಾಲು ಒಕ್ಕೂಟವನ್ನು ಬೇರ್ಪಡೆಯಿಂದಾಗಿ ಜಿಲ್ಲೆಯ ಹಾಲು ಉತ್ಪಾದಿಸುವ ರೈತರಿಗೆ ಹೆಚ್ಚಿನ ರೀತಿಯಲ್ಲಿ ಸಹಾಯ ಮಾಡಲು ಅನುಕೂಲವಾಗುತ್ತದೆ. ಸರ್ಕಾರವು ಕೋಲಾರ ಡೇರಿ ಹಳೆ ಕಟ್ಟಡವನ್ನು ಹೊಂದಿದ್ದು, ಅಲ್ಲದೆ ಯಂತ್ರೋಪಕರಣಗಳು ಸಹ ಹಳೆಯದಾಗಿದ್ದು, ಕೂಡಲೇ ನೂತನ ಕಟ್ಟಡವನ್ನು ಹಾಗೂ ಯಂತ್ರಗಳನ್ನು ಆಧುನಿಕರಿಸುವಂತೆ ಮನವಿ ಮಾಡಿದರು.