

ಸಕಲೇಶಪುರ: ನಾಡಪ್ರಭು ಕೆಂಪೇಗೌಡ ಪ್ರತಿಮೆ ಸ್ಥಾಪನೆಗೆ ಅವಕಾಶ ನೀಡುವಂತೆ ಒತ್ತಾಯಿಸಿ ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಸೋಮವಾರ ತಾಲೂಕು ಒಕ್ಕಲಿಗರ ಸಮಾಜದಿಂದ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ಹೊಸ ಬಸ್ ನಿಲ್ದಾಣ ಎದುರು ಕೆಂಪೇಗೌಡ ಪ್ರತಿಮೆ ಸ್ಥಾಪನೆಗಾಗಿ ಜಾಗ ಗುರುತಿಸಿ, ಬೇಲಿ ನಿರ್ಮಿಸಿರುವ ಒಕ್ಕಲಿಗ ಸಮಾಜದ ಮುಖಂಡರಿಗೆ ಉಪವಿಭಾಗಾಧಿಕಾರಿ ನೋಟಿಸ್ ನೀಡಿದ್ದು, ಸಾರ್ವಜನಿಕ ಪ್ರದೇಶದಲ್ಲಿ ಪ್ರತಿಮೆ ಸ್ಥಾಪನೆಗೆ ಅವಕಾಶವಿಲ್ಲ ಎಂದು ತಿಳಿಸಿದ್ದಾರೆ. ಹಾಗಾದರೆ ಪಟ್ಟಣದ ಹೇಮಾವತಿ ಸೇತುವೆ ಸಮೀಪ ಹೇಮಾವತಿ ಪುತ್ಥಳಿ, ಹಳೇ ಬಸ್ ನಿಲ್ದಾಣ ಸಮೀಪ ಅಂಬೇಡ್ಕರ್ ಪುತ್ಥಳಿ ಹಾಗೂ ಬಸವೇಶ್ವರ ರಸ್ತೆಯಲ್ಲಿ ಬಸವೇಶ್ವರ ಪ್ರತಿಮೆಯನ್ನು ನಿರ್ಮಿಸಲಾಗಿದೆ. ಇವುಗಳನ್ನೆಲ್ಲ ಸಾರ್ವಜನಿಕ ಸ್ಥಳದಲ್ಲೇ ನಿರ್ಮಾಣ ಮಾಡಲಾಗಿದೆ. ಈ ಪ್ರತಿಮೆ, ಪುತ್ಥಳಿಗಳ ನಿರ್ಮಾಣಕ್ಕೆ ಇಲ್ಲದ ನಿಬಂಧನೆ ಕೆಂಪೇಗೌಡ ಪ್ರತಿಮೆ ಸ್ಥಾಪನೆಗೆ ಏಕೆ ಎಂದು ಮುಖಂಡರು ಪ್ರಶ್ನಿಸಿದ್ದಾರೆ.
ಕಳೆದ ಹಲವು ವರ್ಷಗಳ ಹಿಂದೆ ಕೆಂಪೇಗೌಡ ಪ್ರತಿಮೆ ಸ್ಥಾಪನೆಗೆ ಐದು ಗುಂಟೆ ಜಮೀನು ನೀಡುವಂತೆ ತಾಲೂಕು ಆಡಳಿತಕ್ಕೆ ಮನವಿ ಮಾಡಲಾಗಿತ್ತು. ಆದರೆ, ಇದುವರೆಗೆ ತಾಲೂಕು ಆಡಳಿತದಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಸಮಾಜದ ಮುಖಂಡರೇ ಜಾಗ ಗುರುತಿಸುವ ಕೆಲಸ ಮಾಡಿದ್ದಾರೆ. ಆದರೆ, ಕಾಣದ ಕೈಗಳು ಅಧಿಕಾರಿಗಳಿಂದ ನೋಟಿಸ್ ಕೊಡಿಸಲು ಯಶಸ್ವಿಯಾಗಿವೆ. ಇದನ್ನು ವಿರೋಧಿಸಿ ಇಂದು ಸಾಂಕೇತಿಕವಾಗಿ ಪ್ರತಿಭಟನೆ ನಡೆಸಲಾಗುತ್ತಿದ್ದು, ಮುಂದಿನ ಕೆಂಪೇಗೌಡ ಜಯಂತಿಯಂದು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಬಳಿಕ ಪ್ರತಿಭಟನಾಕಾರರು ಉಪವಿಭಾಗಾಧಿಕಾರಿ ಅನ್ಮುಲ್ ಜೈನ್ ಅವರಿಗೆ ಮನವಿ ಸಲ್ಲಿಸಿದರು. ಸಮಾಜದ ಮುಖಂಡರಾದ ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೈರಮುಡಿ ಚಂದ್ರು, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಉದಯ್, ಸಚಿನ್‌ಪ್ರಸಾದ್ ಇತರರಿದ್ದರು.