ಒಕ್ಕಲಿಗ ಸಮಾಜಕ್ಕೆ ಕಪ್ಪುಚುಕ್ಕೆ ತಂದಿಲ್ಲ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ

HD Devegowda
Published on

ಮೈಸೂರು: ಸಾಮಾನ್ಯ ರೈತನ ಮಗನಾಗಿ ದೇಶದ ಪ್ರಧಾನಿ ಹುದ್ದೆ ಅಲಂಕರಿಸಿ ದೇಶವನ್ನಾಳಿರುವ ನಾನು ಒಕ್ಕಲಿಗ ಸಮಾಜಕ್ಕೆ ಕಪ್ಪುಚುಕ್ಕೆ ತರುವಂತಹ ಯಾವುದೇ ಕೆಲಸ ಮಾಡಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು.
ಪ್ರಧಾನಿ, ಮುಖ್ಯಮಂತ್ರಿ, ಸಚಿವನಾಗಿ ಬೊಕ್ಕಸಕ್ಕೆ ಒಂದು ರೂಪಾಯಿಯೂ ನಷ್ಟವಾಗದಂತೆ ಆಡಳಿತ ನಡೆಸಿದ್ದೇನೆ. ಅಂದೇ ವಾಜಪೇಯಿ ಅವರಿಗೆ ನನ್ನ ಆಡಳಿತದಲ್ಲಿ ಸಣ್ಣ ತಪ್ಪು ಮಾಡಿದ್ರೆ ಗಲ್ಲಿಗೇರಿಸಿ ಎಂದು ಸವಾಲು ಹಾಕಿದ್ದೆ. ಒಂದು ಕಾಲದಲ್ಲಿ ಎಲ್ಲರೂ ಜತೆಯಲ್ಲಿ ಇದ್ದವರು. ಬದಲಾದ ಸನ್ನಿವೇಶದಲ್ಲಿ ಸಾಕಷ್ಟು ಮಂದಿ ನನ್ನನ್ನು ಬಿಟ್ಟು ಹೋಗಿದ್ದಾರೆ. ಜಿ.ಟಿ.ದೇವೇಗೌಡ, ಪುಟ್ಟರಾಜು ಕೂಡ ನನ್ನ ಬಿಟ್ಟು ಹೋಗುತ್ತಾರೆಂದು ಹಲವರು ಹೇಳಿದರು. ಆದರೆ ಅವರು ನನ್ನನ್ನು ಬಿಟ್ಟು ಹೋಗಲಿಲ್ಲ ಎಂದು ಹೇಳಿದ ಅವರು, ಆದಿಚುಂಚನಗಿರಿ ಮಠದ ಸೇವೆ ಸ್ಮರಿಸುತ್ತ ಕೆಲಕಾಲ ಭಾವುಕರಾದರು.
ನನ್ನನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಕ್ಕೆ ಆಭಾರಿಯಾಗಿದ್ದೇನೆ ಎಂದು ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರಿಗೆ ಕೃತಜ್ಞತೆ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net