ಒಕ್ಕಲಿಗ ಸಂಘದ ಹೆಸರಲ್ಲಿ ಟೀಕೆ ಸರಿಯಲ್ಲ

05 H.P.GOPAL-2
ಎಚ್.ಪಿ.ಗೋಪಾಲ್
Published on


ಕೆ.ಆರ್.ನಗರ: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರನ್ನು ಟೀಕೆ ಮಾಡಿರುವ ಮಿರ್ಲೆ ಅಣ್ಣೇಗೌಡ ಒಕ್ಕಲಿಗರ ಸಂಘದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಜೆಡಿಎಸ್ ಸೇರಲಿ ಎಂದು ಬಿಜೆಪಿ ಜಿಲ್ಲಾ ಮಾಧ್ಯಮ ಪ್ರಮುಖ ಎಚ್.ಪಿ.ಗೋಪಾಲ್ ಆಕ್ರೋಶ ವ್ಯಕ್ತ ಪಡಿಸಿದರು.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಯಾವ ಅರ್ಥದಲ್ಲಿ ರವಿ ಅವರು ಟೀಕಿಸಿದ್ದಾರೆ ಎಂಬುದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಒಕ್ಕಲಿಗರ ಸಂಘದ ಹೆಸರು ಹೇಳಿಕೊಂಡು ಇತರ ವ್ಯಕ್ತಿಗಳನ್ನು ಟೀಕೆ ಮಾಡುವುದು ಎಷ್ಟು ಸರಿ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

ಮಿರ್ಲೆ ಅಣ್ಣೇಗೌಡ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷರೋ ಅಥವಾ ಶಾಸಕ ಸಾ.ರಾ.ಮಹೇಶ್ ಅವರ ಒಕ್ಕಲಿಗರ ಸಂಘದ ಅಧ್ಯಕ್ಷರೋ ಎಂಬುದನ್ನು ಸ್ಪಷ್ಟಪಡಿಸಲಿ. 15 ವರ್ಷಗಳಿಂದ ಅನಧಿಕೃತವಾಗಿ ಸಂಘದ ಅಧ್ಯಕ್ಷರಾಗಿ ಮುಂದುವರಿಯುತ್ತಿದ್ದು, ಮೃತ ಆರೇಳು ನಿರ್ದೇಶಕರ ಬದಲಿಗೆ ಬೇರೆಯವರನ್ನು ನಾಮ ನಿದೇರ್ರ್ಶನ ಮಾಡಿ ಅಧಿಕಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಸಾ.ರಾ.ಮಹೇಶ್ ಅವರನ್ನು ತೆಗಳುತ್ತ ಎಚ್.ವಿಶ್ವನಾಥ್ ಪರ ಪ್ರಚಾರ ಮಾಡಿರುವ ಇವರು ಒಕ್ಕಲಿಗರ ಹಿತೈಷಿಯೇ? ಸ್ವಾರ್ಥಕ್ಕಾಗಿ ಬೇಕಾದಾವರ ಪರವಾಗಿ ನಿಲ್ಲುವತನವನ್ನು ಬಿಟ್ಟು ಸಂಘದ ಹೆಸರೇಳಿಕೊಂಡು ರಾಜಕೀಯ ಮಾಡುವ ಬದಲು ರಾಜೀನಾಮೆ ನೀಡಿ ಹೊರಬಂದು ರಾಜಕೀಯ ಮಾಡಲಿ ಎಂದು ಸವಾಲು ಹಾಕಿದರು.

ಪುರಸಭಾ ನಾಮ ನಿರ್ದೇಶನ ಸದಸ್ಯ ಜಿ.ಪಿ.ಮಂಜು, ಬಿಜೆಪಿ ತಾಲೂಕು ಮಾಧ್ಯಮ ವಕ್ತಾರ ನಾಗೇಶ್, ನಗರ ಯೋಜನಾ ಪ್ರಾಧಿಕಾರದ ನಿರ್ಧೇಶಕ ಗೋಪಾಲ್ ರಾಜ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net