ಒಂಬತ್ತು ಒಂಟೆಗಳ ರಕ್ಷಣೆ ; ನಾಲ್ವರ ಬಂಧನ ; ಭಗತ್ ಕ್ರಾಂತಿ ಸೇನೆ ಕಾರ್ಯಾಚರಣೆ

27Tmk_Camel_Save
Published on

ತುಮಕೂರು: ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ಒಂಬತ್ತು ಒಂಟೆಗಳನ್ನು ಭಗತ್ ಕ್ರಾಂತಿ ಸೇನೆ ಕಾರ್ಯಕರ್ತರು ಮಿಂಚಿನ ಕಾರ್ಯಾಚರಣೆ ಮೂಲಕ ರಕ್ಷಣೆ ಮಾಡಿದ್ದಾರೆ.

ಭಗತ್ ಕ್ರಾಂತಿ ಸೇನೆ ಕುಣಿಗಲ್ ಕಾರ್ಯಕರ್ತ ಮಂಜುನಾಥ್ ನೀಡಿದ ಖಚಿತ ಮಾಹಿತಿಯೊಂದಿಗೆ ಕ್ಯಾತಸಂದ್ರ ಸರ್ಕಲ್ನಲ್ಲಿ ಭಾನುವಾರ ಬೆಳಗ್ಗೆ 7 ಗಂಟೆಗೆ ಮಹಾರಾಷ್ಟ್ರದ ಕೊಲ್ಹಾಪುರದಿಂದ ಬರುತ್ತಿದ್ದ ಲಾರಿಯನ್ನು ಸೇನೆ ಕಾರ್ಯಕರ್ತರು ತಡೆದು ಪರಿಶೀಲಿಸಿದಾಗ ಅಕ್ರಮವಾಗಿ ಸಾಗಿಸುತ್ತಿದ್ದು ಕಂಡುಬಂತು. ತಕ್ಷಣವೇ ಕ್ಯಾತಸಂದ್ರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿ, ಲಾರಿ ಚಾಲಕ, ಕ್ಲೀನರ್ ಹಾಗೂ ಲಾರಿಯಲ್ಲಿದ್ದ ಇನ್ನಿಬ್ಬರನ್ನು ಪೊಲೀಸರ ವಶಕ್ಕೆ ಒಪ್ಪಿಸಿದರು.

ಭಗತ್ ಕ್ರಾಂತಿ ಸೇನೆಯ ಮಂಚಲದೊರೆ ಆರಾಧ್ಯ, ಪ್ರವೀಣ್, ಚೇತನ್, ರಾಧಾಕೃಷ್ಣ, ರಾಜು, ರಾಕೇಶ್ ಈ ಸಂದರ್ಭದಲ್ಲಿ ಇದ್ದರು.

ನಾಲ್ವರ ಬಂಧನ: ಮಹಾರಾಷ್ಟ್ರದ ಕೊಲ್ಹಾಪುರದಿಂದ ತಮಿಳುನಾಡಿಗೆ ಸೇಲಂಗೆ ಒಂಟೆಗಳನ್ನು ಸಾಗಿಸಲಾಗುತ್ತಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ರವೀಂದ್ರ, ಅನಿಲ್, ರಾಮಪಾಲ್ ಸಾಬ್, ಅಭಿಜಿತ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.

ರಕ್ಷಣೆ ಮಾಡಿದ ಒಂಟೆಗಳನ್ನು ಕೆಆರ್ ಪುರಂನ ಮಹದೇವಪುರ ಗೋಶಾಲೆಗೆ ತಲುಪಿಸಲಾಗಿದೆ. ಕ್ಯಾತಸಂದ್ರ ಠಾಣೆ ಪಿಎಸ್ಸೈ ಓಂಪ್ರಕಾಶ್ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net