ಒಂದೇ ಹುದ್ದೆಗೆ ಇಬ್ಬರು ಅಧಿಕಾರಿಗಳ ಕಿತ್ತಾಟ

24ydg01
Published on


ಯಾದಗಿರಿ: ಇಲ್ಲಿನ ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಹುದ್ದೆಗೆ ಇಬ್ಬರು ಅಧಿಕಾರಿಗಳ ಮಧ್ಯೆ ತೀವೃ ಪೈಪೋಟಿ ಏರ್ಪಟ್ಟಿದೆ.

ನಗರದ ಹೊಸಳ್ಳಿ ಕ್ರಾಸ್ ಬಳಿ ಇರುವ ಕಚೇರಿಯಲ್ಲಿ ಈ ಹಿಂದೆ ಸಂಗಪ್ಪ ಪೂಜಾರಿ ಸಹಾಯಕ ನಿರ್ದೇಶಕ ರಾಗಿ ಕಾರ್ಯ ನಿರ್ವಹಿಸಿದ್ದರು. ಆದರೆ ಆಗಷ್ಟ್ ತಿಂಗಳಲ್ಲಿ ಡಿ.ರಾಜಕುಮಾರ ಎಂಬುವವರನ್ನು ಸರಕಾರ ಈ ಹುದ್ದೆಗೆ ನಿಯೋಜಿಸಿ ಆದೇಶ ಹೊರಡಿಸಿತ್ತು. ಸರಕಾರದ ಅದೇಶದ ವಿರುದ್ಧ ಸಂಗಪ್ಪ ನ್ಯಾಯಾಲಯದಿಂದ ತಡೆಯಾಜ್ಞೆ ತಂದು ಕೆಲ ತಿಂಗಳು ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು. ಆದರೆ, ಕೆಲ ದಿನಗಳ ಹಿಂದೆ ಪೂಜಾರಿ ಅರ್ಜಿ ಹೈಕೋರ್ಟ್ ವಜಾಗೊಳಿಸಿತ್ತು. ಹೀಗಾಗಿ ಡಿ.ರಾಜಕುಮಾರ ಯಥಾಪ್ರಕಾರ ಸಹಾಯಕ ನಿರ್ದೇಶಕರಾಗಿ ಮುಂದುವರೆದಿದ್ದರು.

ಆದರೂ ಪಟ್ಟು ಬಿಡದ ಸಂಗಪ್ಪ ಪೂಜಾರಿ ಹೈಕೋರ್ಟ್ ಮೊರೆ ಇದೀಗ ಮತ್ತೊಮ್ಮೆ ತಡೆಯಾಜ್ಞೆ ತಂದು ಗುರುವಾರ ಏಕಾಏಕಿ ಸಹಾಯಕ ನಿರ್ದೇಶಕ ಕುರ್ಚಿಯಲ್ಲಿ ಕುಳಿತಿದ್ದಾರೆ. ಒಂದೇ ಹುದ್ದೆಗೆ ಇಬ್ಬರು ಅಧಿಕಾರಿಗಳ ಮಧ್ಯೆ ಏರ್ಪಟ್ಟ ಈ ಶೀಥಲ ಸಮರ ಕಂಡು ಸಿಬ್ಬಂದಿ ಶಾಕ್ ಆಗಿದ್ದು, ಯಾರ ಆದೇಶ ಪಾಲಿಸಬೇಕು ಎಂದು ತಿಳಿಯದೆ ಒದ್ದಾಡುತ್ತಿದ್ದಾರೆ.

ಅವಧಿಗೂ ಮುನ್ನವೇ ಸರಕಾರ ನನ್ನನ್ನು ವರ್ಗಾವಣೆ ಮಾಡಿದ್ದಾರೆ ಎಂಬುದು ಸಂಗಪ್ಪ ವಾದ. ಆದರೆ, ಸರಕಾರಇದೇ ಹುದ್ದೆಗೆ ನನ್ನನ್ನು ನಿಯೋಜಿಸಿ ಆದೇಶಿಸಿದ್ದು, ನಿಯಮಾವಳಿ ಪ್ರಕಾರ ನನಗೆ ಅಧಿಕಾರ ನಡೆಸುವ ಹಕ್ಕಿದೆ ಎಂದು ರಾಜಕುಮಾರ ಪಟ್ಟು ಹಿಡಿದ್ದಿದ್ದಾರೆ. ಸಧ್ಯ ಇವರಿಬ್ಬರ ಕಿತ್ತಾಟದ ಚಂಡು ಸಧ್ಯ ಜಿಪಂ ಸಿಇಒ ಅವರ ಕಚೇರಿ ತಲುಪಿದ್ದು, ಅವರಿಂದ ಯಾವ ಪ್ರತಿಕ್ರಿಯೆ ಬರುತ್ತದೆ ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net